ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣನ ಅಬ್ಬರದೊಂದಿಗೆ ದಸರೆ ಸಂಭ್ರಮಕ್ಕೆ ತೆರೆ

ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ, ಭರಪೂರ ಮನೋರಂಜನೆ
Last Updated 11 ಅಕ್ಟೋಬರ್ 2021, 2:06 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ದಸರಾ ಅಂಗವಾಗಿ ನಾಲ್ಕು ದಿನಗಳ ಕಾಲ ನಡೆದ ಜಿಲ್ಲಾ ದಸರಾ ಮಹೋತ್ಸವಕ್ಕೆ ಭಾನುವಾರ ವರುಣನ ಅಬ್ಬರದೊಂದಿಗೆ ಸಂಭ್ರಮದ ತೆರೆ ಬಿದ್ದಿತು.

ಸಂಜೆ 6.30ರ ಸುಮಾರಿಗೆ ಆರಂಭವಾದ ಮಳೆ ರಾತ್ರಿ 9 ಗಂಟೆಯಾದರೂ ನಿಲ್ಲಲಿಲ್ಲ. ಆರಂಭದಲ್ಲಿ ಧಾರಾಕಾರವಾಗಿ ಸುರಿದ‌ರೆ, ನಂತರ ಹನಿ ಹನಿಯಾಗಿ ಜಿನುಗುತ್ತಲೇ ಇತ್ತು.

ಹೊರಗಡೆ ಜೋರಾಗಿ ಮಳೆ ಬರುತ್ತಿದ್ದರೂ, ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದ ಪ್ರಧಾನ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುತ್ತಿದ್ದ ಜನರ ಸಂಭ್ರಮಕ್ಕೇನೂ ಅಡಚಣೆಯಾಗಲಿಲ್ಲ. ಆಸನ ಸಿಗದೆ ಹೊರಗಡೆ ನಿಂತು ಬೃಹತ್‌ ಪರದೆ ಇಲ್ಲವೇ ನೇರವಾಗಿ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡುತ್ತಿದ್ದವರು, ಮಳೆ ಆರಂಭವಾಗುತ್ತಿದ್ದಂತೆಯೇ ಸಭಾಂಗಣದ ಒಳಗಡೆ ಬಂದರು. ಇನ್ನೂ ಕೆಲವರು ಅಂಗಡಿಗಳು, ಚಾಮರಾಜೇಶ್ವರ ದೇವಾಲಯದ ಚಾವಣಿಯ ಆಶ್ರಯ ಪಡೆದರು. ಮತ್ತೂ ಕೆಲವರು ಛತ್ರಿ ಹಿಡಿದುಕೊಂಡು ಕಾರ್ಯಕ್ರಮಗಳನ್ನು ಸವಿದರು.

ಗಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ: ದಸರಾದ ಕೊನೆಯ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿದವು. ಜೆ.ಎಚ್‌.ಪಟೇಲ್‌ ಸಭಾಂಗಣ ಹಾಗೂ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದ ಪ್ರಧಾನ ವೇದಿಕೆಯಲ್ಲಿ ನಡೆದ ಜಾನಪದ ಕಲಾ ಪ್ರಕಾರಗಳು, ಸಂಗೀತ ಸಂಜೆ, ನಾಟಕ, ರಂಗದೃಶ್ಯಾವಳಿ, ನೃತ್ಯರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರ ಹಾಗೂ ಸುತ್ತಮುತ್ತಲ ಜನರಿಗೆ ಭರಪೂರ ರಂಜನೆಯನ್ನು ಒದಗಿಸಿದವು.

ಸರಳವಾಗಿ ದಸರಾ ಆಚರಿಸಲು ನಿರ್ಧರಿಸಿದ್ದರಿಂದ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಉತ್ಸವ ಸೀಮಿತವಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ದೇಶ, ವಿದೇಶ, ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ನೀಡಿದವರಿಂದ ಹಿಡಿದು ಜಿಲ್ಲೆ, ನಗರ ಮಟ್ಟದಲ್ಲಿ ಕಾರ್ಯಕ್ರಮಗಳು ಕೊಟ್ಟವರು ಎರಡೂ ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಜನರ ಮನಸ್ಸನ್ನು ಸೂರೆಗೊಂಡರು.

ದಸರಾ ಕವಿಗೋಷ್ಠಿ: ಜಿಲ್ಲಾಡಳಿತವು ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಕವಿಗೋಷ್ಠಿ ಹಮ್ಮಿಕೊಂಡಿತ್ತು. 34 ಮಂದಿ ಕವಿಗಳು ಇದರಲ್ಲಿ ಭಾಗವಹಿಸಿದ್ದು ವಿಶೇಷ.

ಮೂರನೇ ದಿನ ವಿಳಂಬ: ಎರಡೂ ವೇದಿಕೆಗಳಲ್ಲಿ ರಾತ್ರಿ 9.50ರೊಳಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿಯುವಂತೆ ವೇಳಾಪಟ್ಟಿ ರೂಪಿಸಲಾಗಿತ್ತು. ಮೊದಲ ಎರಡು ದಿನಗಳ ಕಾಲ ನಿಗದಿತ ಅವಧಿಗಿಂತ ಅರ್ಧ–ಮುಕ್ಕಾಲು ಗಂಟೆ ವಿಳಂಬವಾಗಿ ಕಾರ್ಯಕ್ರಮ ಮುಗಿಯಿತು. ಮೂರನೇ ದಿನವಾದ ಶನಿವಾರ ಪ್ರಧಾನ ವೇದಿಕೆಯಲ್ಲಿ ಕೊನೆಯ ಕಾರ್ಯಕ್ರಮ ಶುರುವಾಗಿದ್ದೇ ರಾತ್ರಿ 10.45ಕ್ಕೆ. ಸಂಜೆಯ ಹೊತ್ತು ತಾಂತ್ರಿಕ ಕಾರಣಗಳಿಂದ ಕಾರ್ಯಕ್ರಮ ವಿಳಂಬವಾಯಿತು ಎಂದು ಸಂಘಟಕರು ಸಮಾಜಾಯಿಷಿ ನೀಡಿದರು.

ರಾತ್ರಿ 8.30ರಿಂದ 9.45ರವರೆಗೆ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ನೇತೃತ್ವದ ತಂಡದಿಂದ ಚೆಲ್ಲಿದರು ಮಲ್ಲಿಗೆಯಾ... ಜಾನಪದ ಗಾಯನ ಕಾರ್ಯಕ್ರಮ ನಡೆಯಬೇಕಿತ್ತು. ಆ ಹೊತ್ತಿನಲ್ಲಿ ಸಂಜೆ 7 ಗಂಟೆಗೆ ನಡೆಯಬೇಕಿದ್ದ ಅವತಾರ್‌ ಡ್ಯಾನ್ಸ್‌ ಅಕಾಡೆಮಿಯ ವಿದ್ಯಾರ್ಥಿಗಳ ಪ್ರದರ್ಶನ ನಡೆಯುತ್ತಿತ್ತು. ನೃತ್ಯ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಜನರು ಮನೆಗೆ ತೆರಳಲು ಆರಂಭಿಸಿದರು. ನರಸಿಂಹಮೂರ್ತಿ ತಂಡದ ಕಾರ್ಯಕ್ರಮ ಆರಂಭವಾಗುವಾಗ ಅಧಿಕಾರಿಗಳು ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಇದ್ದರು. ತಂಡದಲ್ಲಿದ್ದ ಖ್ಯಾತ ಜಾನಪದ ಗಾಯಕ ಅಪ್ಪಗರೆ ತಿಮ್ಮರಾಜು ಅವರು ಕಾರ್ಯಕ್ರಮ ಆರಂಭಕ್ಕೂ ಮುನ್ನ, ಪ್ರೇಕ್ಷಕರ ಸಂಖ್ಯೆ ಎಣಿಸಿ, 128 ಮಂದಿ ಇದ್ದಾರೆ ಎಂದೂ ಹೇಳಿದರು. ಹಾಗಿದ್ದರೂ, ಅವರು ಜಾನಪದ ಹಾಡುಗಳನ್ನು ಹಾಡಿ ರಂಜಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೇಬಲ್‌ ಟಿವಿ, ಯುಟ್ಯೂಬ್‌ ಹಾಗೂ ಫೇಸ್‌ಬುಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತಿತ್ತು.

ಭಾನುವಾರವೂ ಮಳೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತವಾಗಿ ಅಡಚಣೆಯಾಯಿತು. ಇದರಿಂದಾಗಿ ರಾತ್ರಿ 10 ಗಂಟೆಯಾದರೂ ಕಾರ್ಯಕ್ರಮ ಮುಗಿಯಲಿಲ್ಲ.

ಸರಳ ಸಮಾರೋಪ ಸಮಾರಂಭ

ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆಯೇ ಮುಖ್ಯ ವೇದಿಕೆಯಲ್ಲಿ ಸರಳವಾಗಿ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಿತು.

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ (ಚುಡಾ) ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿ ದೇವಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚುಡಾ ಅಧ್ಯಕ್ಷಶಾಂತಮೂರ್ತಿ ಕುಲಗಾಣ ಮಾತನಾಡಿ ‘ನಾಲ್ಕು ದಿನಗಳಲ್ಲಿ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಲಾಗಿದೆ. ಕಲೆ ಸಂಗೀತದ ನಾನಾ ಪ್ರಕಾರಗಳು ಅನಾವರಣಗೊಂಡಿವೆ. ವಿದ್ಯಾರ್ಥಿಗಳು ಸಹ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT