ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಲ್‌: ಮುಂದುವರಿದ ಪ್ರತಿಭಟನೆ

ಅಕ್ರಮ ನೇಮಕಾತಿ ಆರೋಪ: ಇಂದು ಸಂತೇಮರಹಳ್ಳಿ ಹೋಬಳಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ
Last Updated 29 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದಲ್ಲಿ (ಚಾಮುಲ್‌) 72 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ಕುದೇರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಭಾನುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು.

ಅನಿರ್ದಿಷ್ಟಾವಧಿ ಪ್ರತಿಭಟನೆಯ ಭಾಗವಾಗಿ ಧರಣಿ ನಿರತರು, ಸೋಮವಾರ ಸಂತೇಮರಹಳ್ಳಿ ಹೋಬಳಿಯ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದಾರೆ.

ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಜಿಲ್ಲಾಧ್ಯಕ್ಷ ಡಿ.ಪರಶಿವಮೂರ್ತಿ ಅವರು ಮಾತನಾಡಿ, ‘ಅವ್ಯವಹಾರವನ್ನು ಖಂಡಿಸಿ, ನೇಮಕಾತಿ ರದ್ದುಗೊಳಿಸಬೇಕು ಎಂದು ನಾಲ್ಕು ದಿನಗಳಿಂದ ಪ್ರತಿಭಟನೆ, ಧರಣಿ ನಡೆಸಲಾಗುತ್ತಿದೆ. ಸೌಜನ್ಯಕ್ಕಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಜಿಲ್ಲೆಯ ಶಾಸಕರಾಗಲಿ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಇದನ್ನು ನೋಡಿದರೆ ಚಾಮುಲ್ ಅಕ್ರಮದಲ್ಲಿ ಜಿಲ್ಲೆ ಉಸ್ತುವಾರಿ ಸಚಿವರು, ಶಾಸಕರು ಶಾಮೀಲಾಗಿದ್ದಾರೆ ಎನ್ನುವ ಸಂಶಯ ಬರುತ್ತದೆ’ ಎಂದರು.

‘ನೇಮಕಾತಿ ಮಾಡುವಾಗ ಮೀಸಲಾತಿ ವರ್ಗೀಕರಣದ ನಿಯಮ ಪಾಲನೆ ಮಾಡಿಲ್ಲ. ತಮಗಿಷ್ಟ ಬಂದಂತೆ ನೇಮಕ ಮಾಡಿಕೊಂಡಿದ್ದಾರೆ. ಆದರೆ, ಒಕ್ಕೂಟದ ಅಧ್ಯಕ್ಷ ಗುರುಮಲ್ಲಪ್ಪ ಅವರು, ‘ಹುದ್ದೆಗಳನ್ನು ನಿಯಮಬದ್ಧವಾಗಿಯೇ ನೇಮಕ ಮಾಡಿದ್ದೇವೆ. ಪಾರದರ್ಶಕತೆ ಪಾಲಿಸಿದ್ದೇವೆ. ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ’ ಎಂದು ಹೇಳುತ್ತಿದ್ದಾರೆ. ಹಾಗಾದರೆ, ನೇಮಕಾತಿ ದಾಖಲಾತಿಗಳನ್ನು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು.

‘ಕ್ಷೇತ್ರದ ಶಾಸಕರು ಅಕ್ರಮವನ್ನು ಸರ್ಕಾರದ ಗಮನಕ್ಕೆ ತಂದು ನೇಮಕಾತಿಯನ್ನು ರದ್ದುಪಡಿಸಿ, ಮರುಪರೀಕ್ಷೆ ನಡೆಸುವ ಮೂಲಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಅಭಿವೃಧ್ದಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ, ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಗೋವಿಂದರಾಜು, ಜಯಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಉಪಾಧ್ಯಕ್ಷ ಎಸ್.ಮರಪ್ಪ, ಬದನಗುಪ್ಪೆ ಮಹೇಶ್, ರಾಮಸಮುದ್ರ ಸುರೇಶ್, ವೀಣಾ, ಉಮ್ಮತ್ತೂರು ನಾಗೇಶ್, ಶಂಭುಲಿಂಗಸ್ವಾಮಿ, ನಾಗರಾಜು, ಸಿದ್ದು, ಮಹೇಶ್, ನಂಜುಂಡಯ್ಯ, ಶ್ರೀನಿವಾಸಮೂರ್ತಿ, ವೃಷಭೇಂದ್ರಸ್ವಾಮಿ ಇತರರು ಇದ್ದರು.

ವೇತನ, ಭತ್ಯೆ ನೀಡದಿರಲು ಆಗ್ರಹ

ಇದಕ್ಕೂ ಮುನ್ನ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖಂಡರು, ಹೊಸದಾಗಿ ನೇಮಕವಾಗಿರುವ ಉದ್ಯೋಗಿಗಳಿಗೆ, ಪ್ರಕರಣ ಇತ್ಯರ್ಥ ಆಗುವವರೆಗೂ ಸಂಬಳ ನೀಡಬಾರದು ಎಂದು ಒತ್ತಾಯಿಸಿದರು.

ಒಕ್ಕೂಟದ ಕೆ.ವೀರಭದ್ರಸ್ವಾಮಿ ಅವರು ಮಾತನಾಡಿ, ‘ಚಾಮುಲ್‌ನ ಆಡಳಿತ ಮಂಡಳಿಯು ಅಕ್ರಮವಾಗಿ ನೇಮಕಮಾಡಿರುವ ಉದ್ಯೋಗಿಗಳಲ್ಲಿ ತರಾತುರಿಯಲ್ಲಿ ಸಂಬಳ ಹಾಗೂ ಭತ್ಯೆಗಳನ್ನು ಸಿದ್ಧತೆ ನಡೆಸಿದೆ. ನೇಮಕವಾದವರಲ್ಲಿ ಬಹುಪಾಲು ಜನ ಇನ್ನೂ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಿಲ್ಲ. ಒಮ್ಮೆ ಉದ್ಯೋಗಿಗಳಿಗೆ ವೇತನ ಆದರೆ ನಂತರ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದರೂ ಅವರನ್ನು ಕೆಲಸದಿಂದ ತೆಗೆಯುವುದು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕೆ ತರಾತುರಿಯಲ್ಲಿ ವೇತನ ನೀಡಲು ಪ್ರಯತ್ನಿಸಲಾಗುತ್ತಿದೆ’ ಎಂದು ದೂರಿದರು.

‘ಪ್ರಕರಣ ಇತ್ಯರ್ಥವಾಗುವವರೆಗೂ ವೇತನ, ಭತ್ಯೆಗಳನ್ನು ನೀಡಬಾರದು ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಸಹಕಾರ ಇಲಾಖೆಯ ನಿಬಂಧಕರಾದ ಪ್ರಸನ್ನಕುಮಾರ್‌ ಅವರಿಗೂ ಮನವಿ ಮಾಡಿದ್ದೇವೆ. ಅವರು ಮೌಖಿಕವಾಗಿ ಭರವಸೆ ನೀಡಿದ್ದಾರೆ’ ಎಂದರು.

‘ಈಗಾಗಲೇ ಚಾಮುಲ್‌ನಲ್ಲಿ ಕಾಯಂ ಉದ್ಯೋಗಿಗಳಾಗಿರುವ 90 ಮಂದಿಯ ಪೈಕಿ 50 ಮಂದಿಗೆ ಇತ್ತೀಚೆಗೆ ಬಡ್ತಿ ನೀಡಲಾಗಿದೆ. ಇದಕ್ಕೂ ಆಡಳಿತ ಮಂಡಳಿಯವರು ಹಣ ಪಡೆದಿದ್ದಾರೆ’ ಎಂದು ಅವರು ಆರೋಪಿಸಿದರು.

ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಅವರು ಮಾತನಾಡಿ, ‘ನಾಲ್ಕು ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ನಮಗೆ ಸ್ಪಂದಿಸಿಲ್ಲ. ಹಾಗಾಗಿ ಸೋಮವಾರ ಸಂತೇಮರಹಳ್ಳಿ ಹೋಬಳಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ. ಅಂಗಡಿಗಳ ಮಾಲೀಕರು, ವಾಹನಗಳ ಚಾಲಕರು, ಮಾಲೀಕರು, ಹೋಟೆಲ್‌ ಮಾಲೀಕರ ಬಳಿ ಮನವಿ ಮಾಡಿದ್ದೇವೆ. ಅವ್ಯವಹಾರವನ್ನು ತನಿಖೆಗೆ ಒಳಪಡಿಸದಿದ್ದರೆ, ಇನ್ನಷ್ಟು ತೀವ್ರ ಹೋರಾಟ ಮಾಡಲಾಗುವುದು’ ಎಂದು ಅವರು ಹೇಳಿದರು.

ಒಕ್ಕೂಟದ ಮುಖಂಡರಾದ ಪರಶಿವಮೂರ್ತಿ, ಕೆ.ಎಂ.ನಾಗರಾಜು, ನಿಜಧ್ವನಿ ಗೋವಿಂದರಾಜು, ರಾಮಸಮುದ್ರ ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT