ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ, ಕಾಡುವನೇ ವರುಣ?

ಮ್ಯಾಂಡಸ್‌ ಪ್ರಭಾವ: ಜಿಲ್ಲೆಯಾದ್ಯಂತ ಮಳೆ. ಮುಂದುವರಿದ ಮೋಡ ಕವಿದ ವಾತಾವರಣ
Last Updated 11 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮ್ಯಾಂಡಸ್‌ ಚಂಡ ಮಾರುತದ ಪ್ರಭಾವ ಜಿಲ್ಲೆಯಲ್ಲಿ ಭಾನುವಾರವೂ ಮುಂದುವರಿದಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಬುಧವಾರದವರೆಗೂ ಮಳೆಯಾಗುವ ಸಂಭವವಿರುವುದರಿಂದ ಮಂಗಳವಾರ ಮುಖ್ಯಮಂತ್ರಿ ಅವರ ಭೇಟಿಗೂ ಮಳೆ ಕಾಡುವ ಆತಂಕ ಎದುರಾಗಿದೆ.

ಶನಿವಾರ ರಾತ್ರಿ, ಭಾನುವಾರ ಮಧ್ಯಾಹ್ನದವರೆಗೆ, ಸಂಜೆಯ ನಂತರ ಮಳೆ ಸರಿಸಿದೆ. ಸೋನೆ, ಜಿಟಿ ಜಿಟಿ ಮಳೆ, ಕೊರೆಯುವ ಚಳಿಗೆ ಜನಜೀವನ ಅಸ್ತವ್ಯಸ್ತವಾಗಿದೆ. ಭಾನುವಾರ ರಜಾ ದಿನವಾಗಿದ್ದರಿಂದ ಜನರು ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕಿದರು. ಕೃಷಿ ಚಟುವಟಿಕೆಗಳು ಸ್ತಬ್ಧವಾಗಿದೆ. ಭಾನುವಾರ ಸಂಜೆ ನಗರದಲ್ಲಿ ಬಿರುಸಿನ ಮಳೆಯಾಗಿದೆ.

ಚಂಡಮಾರುತದ ಪ್ರಭಾವ ಶುಕ್ರವಾರದಿಂದಲೇ ಜಿಲ್ಲೆಯಲ್ಲಿ ಕಂಡು ಬಂದಿದೆ. ಶನಿವಾರ ಬೆಳಿೆಗ್ಗೆಯಿಂದ ತುಂತುರು ಮಳೆ ಆರಂಭವಾಗಿತ್ತು. ಮೋಡ ಮುಸುಕಿದ ವಾತಾವರಣದೊಂದಿಗೆ ಶೀತ ಹವೆಯಿಂದ ಜನರು ತತ್ತರಿಸಿದ್ದರು. ಶನಿವಾರ ರಾತ್ರಿಯ ವೇಳೆ ತುಂತುರು ಮಳೆ ಜಿಟಿ ಜಿಟಿ ಮಳೆಯಾಗಿ ಕಾಡಿದೆ. ಚಾಮರಾಜನಗರ ಹಾಗೂ ಯಳಂದೂರು ಭಾಗದಲ್ಲಿ ರಾತ್ರಿ ಉತ್ತಮ ಮಳೆ ಬಿದ್ದಿದೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1.4 ಸೆಂ.ಮೀ ಮಳೆಯಾಗಿದೆ.ಮೋಡ ಮುಸುಕಿದ ವಾತಾವರಣ ಭಾನುವಾರವೂ ಮುಂದುವರಿಯಿತು. ಮಧ್ಯಾಹ್ನದ ವರೆಗೆ ತುಂತುರು ಮಳೆಯಾಯಿತು. ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಬಾನು ಕೊಂಚ ತಿಳಿಯಾಗಿ ಎಳೆ ಬಿಸಿಲು ನೆಲಕ್ಕೆ ತಾಕಿತು. ಸಂಜೆ 4 ಗಂಟೆಯ ನಂತರ ಮೋಡ ಮತ್ತೆ ಕಪ್ಪಿಟ್ಟು, 5 ಗಂಟೆ ನಂತರ ಜಿಟಿ ಜಿಟಿ ಮಳೆ ಶುರುವಾಯಿತು. ಆರು ಗಂಟೆಯ ಹೊತ್ತಿಗೆ ಬಿರುಸುಗೊಂಡು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು.

ಕ್ರೀಡಾಂಗಣ ಸಜ್ಜುಗೊಳಿಸಲು ಸಾಹಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ (ಡಿ.13) ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಚಾಮರಾಜನಗರ ಹಾಗೂ ಹನೂರಿನಲ್ಲಿ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಇನ್ನೂ ಮೂರು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸಿ.ಎಂ. ಭೇಟಿ ಸಂದರ್ಭದಲ್ಲಿ ವರುಣ ಕಾಡಲಿದ್ದಾನೆಯೇ ಎಂಬ ಆತಂಕದಲ್ಲಿ ಜಿಲ್ಲಾಡಳಿತ ಇದೆ.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ ವೇದಿಕೆ, ಪೆಂಡಾಲ್‌ ಹಾಕಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶನಿವಾರ ರಾತ್ರಿ ಸುರಿದ ಮಳೆಗೆ ಹಾಕಿರುವ ಪೆಂಡಾಲ್‌ ಸುತ್ತಮುತ್ತ ನೀರು ನಿಂತು ಕೆಸರುಮಯವಾಗಿತ್ತು. ಮಂಗಳವಾರದ ಕಾರ್ಯಕ್ರಮಕ್ಕಾಗಿ ಮೈದಾನ ಸಜ್ಜುಗೊಳಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಸಾಹಸ ಪಡೆಯುತ್ತಿದ್ದಾರೆ.

ಮೈದಾನದಲ್ಲಿ ನಿಲ್ಲುವ ನೀರು ಬಸಿದು ಹೋಗುವಂತೆ ಮಾಡಲು, ಚರಂಡಿ, ಪೈಪ್ ಅಳವಡಿಸುತ್ತಿದ್ದಾರೆ. ಎಂ.ಸ್ಯಾಂಡ್‌ ತಂದು ಸುರಿಯಲಾಗುತ್ತಿದೆ. ವೇದಿಕೆಯ ಹಿಂಭಾಗ, ಪೆಂಡಾಲ್‌ ಸುತ್ತ, ಚರಂಡಿ ನಿರ್ಮಿಸಿ ನೀರು ನಿಲ್ಲದಂತೆ ವ್ಯವಸ್ಥ ಮಾಡಲಾಗುತ್ತಿದೆ. ಹಾಗಿದ್ದರೂ, ಪೆಂಡಾಲ್‌ ಹೊರಭಾಗದಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಕೆಸರುಮಯವಾಗಿದೆ.

20 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದೆ. ಇದೇ ರೀತಿ ಮಳೆ ಮುಂದುವರಿದರೆ ಮುಖ್ಯಮಂತ್ರಿ, ಸಚಿವರು ಬಂದರೂ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಯೇ ಎಂಬ ಪ್ರಶ್ನೆಯೂ ಅಧಿಕಾರಿಗಳನ್ನು ಕಾಡುತ್ತಿದೆ.

ಜಿಲ್ಲಾಧಿಕಾರಿ ಪರಿಶೀಲನೆ: ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅವರು ಭಾನುವಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದರು. ಲೋಕೋಪಯೋಗಿ ಇಲಾಖೆ, ಗುತ್ತಿಗೆದಾರರಿಂದ ಮಾಹಿತಿ ಪಡೆದರು. ಮೈದಾನದಲ್ಲಿ ನೀರು ನಿಲ್ಲದಂತೆ ಹಾಗೂ ಮಳೆ ಬಂದರೂ ಕಾರ್ಯಕ್ರಮ ಅಡೆತಡೆ ಇಲ್ಲದೆ ನಡೆಯುವಂತೆಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದರು.

ಜಲಾಶಯದಿಂದ ನೀರು ಹೊರಕ್ಕೆ
ತಮಿಳುನಾಡು ಭಾಗದಲ್ಲೂ ಮಳೆಯಾಗುತ್ತಿದ್ದು, ತಾಲ್ಲೂಕಿನ ಅವಳಿ ಜಲಾಶಯಗಳಾದ ಸುವರ್ಣಾವತಿ ಹಾಗೂ ಚಿಕ್ಕಹೊಳೆಗಳಿಗೆ ನೀರು ಹರಿದು ಬರುತ್ತಿದೆ. ಎರಡೂ ಜಲಾಶಯಗಳಲ್ಲಿ ಒಟ್ಟಾಗಿ 300 ಕ್ಯುಸೆಕ್‌ಗಳಷ್ಟು ನೀರು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ನೀರಾವರಿ ನಿಗಮವು 500 ಕ್ಯುಸೆಕ್‌ಗಳಷ್ಟು ನೀರು ಹೊರಬಿಡಲಾರಂಭಿಸಿದೆ.

‘ಜಲಾಶಯಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಸುವರ್ಣಾವತಿ ಜಲಾಶಯಗಳಿಂದ 400 ಕ್ಯುಸೆಕ್‌ ಹಾಗೂ ಚಿಕ್ಕಹೊಳೆ ಜಲಾಶಯದಿಂದ 100 ಕ್ಯುಸೆಕ್‌ ನೀರು ಹೊರಗಡೆ ಬಿಡುತ್ತಿದ್ದೇವೆ. ಇನ್ನಷ್ಟು ಮಳೆಯಾಗಿ ಏಕಾಏಕಿ ಹೆಚ್ಚು ನೀರು ಬಿಡಬೇಕಾದ ಪರಿಸ್ಥಿತಿ ಉಂಟಾಗುವುದು ಬೇಡ ಎಂಬ ಉದ್ದೇಶದಿಂದ ಈಗಲೇ ನೀರು ಬಿಡಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT