ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಸಿ.ಎಂ ಕಾರ್ಯಕ್ರಮ

ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿ ಖಚಿತ, ಒಂದೆರಡು ದಿನದಲ್ಲಿ ದಿನಾಂಕ ಪ್ರಕಟ–ಸೋಮಣ್ಣ
Last Updated 20 ನವೆಂಬರ್ 2022, 15:26 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮವನ್ನು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭಾನುವಾರ ಹೇಳಿದರು.

ನಗರದಲ್ಲಿ ಕಾರ್ಯಕ್ರಮ ಆಯೋಜನೆಗಾಗಿ ಯಡಬೆಟ್ಟದ ಬಳಿಯ ಜೆಎಸ್‌ಎಸ್‌ಗೆ ಸೇರಿದ ಜಾಗ ಹಾಗೂ ಅಂಬೇಡ್ಕರ್‌ ಕ್ರೀಡಾಂಗಣದ ಪರಿಶೀಲನೆಯನ್ನು ಅಧಿಕಾರಿಗಳೊಂದಿಗೆ ನಡೆಸಿದರು. ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಕ್ರೀಡಾಂಗಣವೇ ಎಂದು ಅಭಿಪ್ರಾಯಪಟ್ಟ ಅವರು, ಅಂದಾಜು 20 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಅಗತ್ಯ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕ್ರೀಡಾಂಗಣದಲ್ಲಿರುವ ತೇವಾಂಶ ಹಾಗೂ ನಿಂತಿರುವ ನೀರನ್ನು ಬಸಿಯುವಂತೆ ಮಾಡಿ, ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ಸಜ್ಜುಗೊಳಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು. ‘ಇದೇ 26ಕ್ಕೆ ನಾನು ನಗರಕ್ಕೆ ಬಂದು ಪರಿಶೀಲನೆ ನಡೆಸುವೆ. ಆ ಹೊತ್ತಿಗೆ ಎಲ್ಲವೂ ಸಿದ್ಧವಾಗಿರಬೇಕು’ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚು ಜನರು ಕುಳಿತುಕೊಳ್ಳಲು ಅನುಕೂಲವಾಗುವ ಶಾಮಿಯಾನ, ಆಸನಗಳು ಸಮಾರಂಭಕ್ಕೆ ಎತ್ತರದ ವೇದಿಕೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಏರ್ಪಾಡು ಮಾಡಲು ಸೂಚಿಸಿದರು.

ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೋಮಣ್ಣ, ‘ ಮುಖ್ಯಮಂತ್ರಿಯವರು ಜಿಲ್ಲೆಗೆ ಇದೇ ನವೆಂಬರ್, ಡಿಸೆಂಬರ್‌ನಲ್ಲಿ ಭೇಟಿ ನೀಡಲಿರುವುದು ಖಚಿತವಾಗಿದೆ. ಭೇಟಿಯ ದಿನಾಂಕವನ್ನು ಒಂದೆರಡು ದಿನ ಪ್ರಕಟಿಸಲಾಗುತ್ತದೆ. ಚಾಮರಾಜನಗರಕ್ಕೂ ಮುಖ್ಯಮಂತ್ರಿಯವರು ಬರಲಿದ್ದಾರೆ. ಬಳಿಕ ಹನೂರು, ಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ’ ಎಂದರು.

ಕ್ರೀಡಾಂಗಣದಲ್ಲಿ ನೀರು ನಿಂತಿದ್ದು, ತೇವಾಂಶವಿದೆ. ಇದನ್ನು ಸರಿಪಡಿಸಬೇಕಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಕಾರ್ಯಕ್ರಮ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲೇ ಮಾಡುವುದರಿಂದ ಯೋಜನೆಯ ಫಲಾನುಭವಿಗಳು, ಜನರು ಬರಲು ಅನುಕೂಲವಾಗಲಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಕ್ರೀಡಾಂಗಣವನ್ನು ಸಜ್ಜುಗೊಳಿಸುವಂತೆ ಸೂಚಿಸಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜು, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ತಹಶೀಲ್ದಾರ್ ಬಸವರಾಜು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿನಯ್‍ಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆರ್.ಸಿ. ಕೆಂಪರಾಜು, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್ ವಸಂತ್‍ಕುಮಾರ್, ನಗರಸಭೆ ಆಯುಕ್ತ ರಾಮದಾಸ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT