ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗಾ ಕೋವಿಡ್‌ ಲಸಿಕಾ ಮೇಳ: 50 ಸಾವಿರ ಜನಕ್ಕೆ ಲಸಿಕೆ ಗುರಿ

ಜಿಲ್ಲೆಯಾದ್ಯಂತ ಬೃಹತ್‌ ಕೋವಿಡ್‌ ಲಸಿಕಾ ಮೇಳ: ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಅವಕಾಶ
Last Updated 16 ಸೆಪ್ಟೆಂಬರ್ 2021, 15:17 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಾದ್ಯಂತ ಶುಕ್ರವಾರ (ಸೆ.17) ನಡೆಯಲಿರುವ ಕೋವಿಡ್‌ ಲಸಿಕಾ ಮೇಳದ ಅಂಗವಾಗಿ ಜಿಲ್ಲೆಯಲ್ಲೂ ಮೇಳ ಹಮ್ಮಿಕೊಳ್ಳಲಾಗಿದ್ದು, 50 ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಭಾಗಿದಾರಿಕೆಯಲ್ಲಿ ಮೇಳ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಲಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ರವರೆಗೂ ಮೇಳ ನಡೆಯಲಿದ್ದು, 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ.

ಜಿಲ್ಲೆಯಲ್ಲಿರುವ ಎಲ್ಲ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳು, ಜನಸಂದಣಿ ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೋವಿಡ್ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 525 ತಂಡಗಳು, ನಗರ ಪ್ರದೇಶದಲ್ಲಿ 49 ತಂಡಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 21 ತಂಡಗಳು ಸೇರಿದಂತೆ ಒಟ್ಟು 595 ಲಸಿಕಾ ತಂಡಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ 1,190 ಸಿಬ್ಬಂದಿ ಈ ಮೇಳದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಲಸಿಕಾ ಮೇಳಕ್ಕಾಗಿ ಆರೋಗ್ಯ ಇಲಾಖೆಯ ಲಭ್ಯವಿರುವ 32 ವಾಹನಗಳೊಂದಿಗೆ ಹೆಚ್ಚುವರಿ 85 ವಾಹನಗಳನ್ನು ನಿಯೋಜಿಸಲಾಗಿದೆ.

ಮೇಳದಲ್ಲಿ ಹೆಚ್ಚು ಜನರಿಗೆ ಲಸಿಕೆ ಪಡೆಯಲು ಅನುವಾಗುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಇತರೆ ಇಲಾಖಾ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ತೊಡಗಿಕೊಂಡು ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.

‘ವಿಶೇಷ ಕೋವಿಡ್ ಲಸಿಕಾ ಮೇಳದಲ್ಲಿ 18 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವೆನಿಸಿರುವ ಕೋವಿಡ್ ಲಸಿಕೆಯನ್ನು ಜನತೆ ಪಡೆದುಕೊಳ್ಳುವ ಮೂಲಕ ಲಸಿಕಾ ಅಭಿಯಾನ ಯಶಸ್ಸುಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದ್ದಾರೆ.

7.50 ಲಕ್ಷ ಜನರಿಗೆ ಲಸಿಕೆ

ಜಿಲ್ಲೆಯಲ್ಲಿ ಬುಧವಾರದವರೆಗೆ (ಸೆ.15) 7,50,023 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 5,75,021 ಮಂದಿ ಮೊದಲ ಡೋಸ್‌ ಪಡೆದಿದ್ದರೆ, 1,75,002 ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಆರೋಗ್ಯ ಸೇವೆ ಒದಗಿಸುವ 17,612 ಮಂದಿ, ಕೋವಿಡ್‌ ಮುಂಚೂಣಿ ಕಾರ್ಯಕರ್ತರು 13,002 ಜನ, 18ರಿಂದ 44 ವರ್ಷದೊಳಗಿನ 3,34,115 ಮಂದಿ, 45ರಿಂದ 59 ವರ್ಷ ವಯಸ್ಸಿನವರೆಗಿನ 2,26,684 ಹಾಗೂ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ 1,58,322 ಮಂದಿ ಲಸಿಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT