ಸೋಮವಾರ, ಜುಲೈ 4, 2022
23 °C
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಸದ್ಬಳಕೆಯಾಗುತ್ತಿದೆ ಹಿಂದುಳಿದ ವರ್ಗಗಳ ಇಲಾಖೆಯ ಅನುದಾನ

ವಿದ್ಯಾರ್ಥಿ ನಿಲಯಗಳಲ್ಲಿ ಹಸಿರ ಸಿರಿ!

ಮಲ್ಲೇಶ ಎಂ‌. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಸರ್ಕಾರಿ ವಿದ್ಯಾರ್ಥಿ ನಿಲಯಗಳೆಂದರೆ ಸೌಕರ್ಯಗಳ ಕೊರತೆ ಇರುವ ಸ್ಥಳ, ಸ್ವಚ್ಛತೆ ಇರುವುದಿಲ್ಲ, ಅಶುದ್ಧ ವಾತಾವರಣ... ಎನ್ನುವ ಭಾವನೆ ಜನರಲ್ಲಿದೆ.

ಆದರೆ, ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ.ದೇವರಾಜು ಅರಸು ವಿದ್ಯಾರ್ಥಿ ನಿಲಯಗಳು ಈ ಆಪಾದನೆಗಳಿಂದ ದೂರವಿದ್ದು, ಮಾದರಿ ವಿದ್ಯಾರ್ಥಿನಿಲಯ ಎನಿಸಿಕೊಳ್ಳುತ್ತಿವೆ.

ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿರುವ ನಾಲ್ಕು ವಿದ್ಯಾರ್ಥಿ ನಿಲಯಗಳಿವೆ. ಪಟ್ಟಣ ವ್ಯಾಪ್ತಿಯಲ್ಲಿ ಎರಡು ಬಾಲಕರ ಹಾಗೂ ಒಂದು ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಬೇಗೂರು ಹೋಬಳಿಯ ಗರಗನಹಳ್ಳಿ ಬಳಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಇವೆ. ಇಲಾಖೆಯ ವ್ಯಾಪ್ತಿಗೆ ಬರುತ್ತವೆ. ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಹಸಿರು ವಾತಾವರಣ ನಿರ್ಮಿಸಲು ಒತ್ತು ನೀಡಲಾಗಿದೆ.

ನಿಲಯದ ಆವರಣದಲ್ಲಿ ಪಪ್ಪಾಯಿ, ನಿಂಬೆ, ಬಾಳೆ, ಟೊಮೆಟೊ, ಮೆಣಸಿನ ಕಾಯಿ ಮತ್ತು ದಾಳಿಂಬೆ ಸೇರಿದಂತೆ ವಿವಿಧ ಬಗೆಯ ಹಣ್ಣು, ತರಕಾರಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಬೆಳೆಸಿ ಹಸಿರು ಪರಿಸರ ನಿರ್ಮಾಣ ಮಾಡಿದ್ದಾರೆ. ಅಡುಗೆಗೆ ಅಗತ್ಯವಿರುವ ಅರ್ಧದಷ್ಟು ತರಕಾರಿಗಳನ್ನು ನಿಲಯದಲ್ಲೇ ಬೆಳೆದುಕೊಳ್ಳುತ್ತಾರೆ. ಊಟಕ್ಕೆ ಬೇಕಾಗುವ ಬಾಳೆಹಣ್ಣು ಸಹ ಇಲ್ಲೆ ಸಿಗುತ್ತದೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಇವುಗಳ ನಿರ್ವಹಣೆಯಲ್ಲಿ ತೊಡಗುತ್ತಾರೆ.

‘ನಿಲಯದ ಕಾಂಪೌಂಡ್ ಸುತ್ತ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಮಾಹಿತಿ ನೀಡಲಾಗಿದೆ. ಕವಿಗಳ ಚಿತ್ರ ಬರೆಯಲಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸರ್ಕಾರದ ಅನುದಾನ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಎಲ್ಲ ವಿದ್ಯಾರ್ಥಿ ನಿಲಯಗಳಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಬಿಸಿಲಿನಲ್ಲಿ ಬಟ್ಟೆಗಳನ್ನು ಒಗೆಯುತ್ತಾರೆ ಎಂದು ಶೆಡ್ ನಿರ್ಮಾಣ ಮಾಡಿ ಕೂಲಿಂಗ್ ಶೀಟುಗಳನ್ನು ಅಳವಡಿಸಿ ಸೌಲಭ್ಯಗಳಿಗೆ ಕೊರತೆಯಾಗದಂತೆ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿದೆ’ ಎನ್ನುತ್ತಾರೆ ಅವರು.

‘ಅನೇಕ ವರ್ಷಗಳಿಂದ ಈ ಹಾಸ್ಟೆಲ್‌ಗಳಲ್ಲಿ ಸಮಸ್ಯೆಗಳಿತ್ತು. ಇಲಾಖೆಯ ವಿಸ್ತರಣಾಧಿಕಾರಿ ಲಿಂಗರಾಜು ಅವರಿಗೆ ನಿಲಯಗಳ ನಿರ್ವಹಣೆ ನೀಡಿದಾಗ ಸಮಸ್ಯೆಗಳನ್ನು ಅವರಿಗೆ ವಿವರಿಸಲಾಯಿತು. ನಂತರದ ದಿನಗಳಲ್ಲಿ ಆದ್ಯತೆಗೆ ಅನುಸಾರವಾಗಿ ಹೊಸ ಸೌಲಭ್ಯಗಳನ್ನು ಕಲ್ಪಿಸಿದರು’ ಎಂದು ಇಲ್ಲಿನ ವಿದ್ಯಾರ್ಥಿಗಳು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು