ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಗ್ನಿಪಥ್‌ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

Last Updated 27 ಜೂನ್ 2022, 13:31 IST
ಅಕ್ಷರ ಗಾತ್ರ

ಚಾಮರಾಜನಗರ: ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್‌ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಚಾಮರಾಜನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಹೊಸ ನೇಮಕಾತಿ ಪದ್ಧತಿಯನ್ನು ಕೈಬಿಟ್ಟು, ಈ ಹಿಂದೆ ಅನುಸರಿಸಲಾಗುತ್ತಿದ್ದ ಸೇನಾ ನೇಮಕಾತಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ತಾಲ್ಲೂಕು ಕಚೇರಿ ಆವರಣದಲ್ಲಿ ಸೇರಿದ ಪ್ರತಿಭಟನಕಾರರು, ಹೊಸ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸಿರುವಅಗ್ನಿಪಥ್ ಯೋಜನೆ ಅಡಿಯಲ್ಲಿ ಯುವಕರಿಗೆ ಸೇವಾ ವೀರರು ಎಂಬ ಪದವಿ ನೀಡಿ, ಆರು ತಿಂಗಳ ತರಬೇತಿ ಕೊಟ್ಟು, ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.ನಾಲ್ಕು ವರ್ಷಗಳ ನಂತರ ಅವರಿಗೆ ₹7.50 ಲಕ್ಷ ನೀಡಿ, ನಿವೃತ್ತಿ ಕೊಡಲಾಗುತ್ತದೆ. ಯಾವುದೇ ಮುಂಬಡ್ತಿ, ನಿವೃತ್ತಿ ವೇತನ ಸಿಗದೆ, ಹಣಕಾಸು ಭದ್ರತೆ ಇಲ್ಲದೇ ಯುವಜನರು ನಿರುದ್ಯೋಗಿಯಾಗಿ ವಾಪಸ್ ಬರುತ್ತಾರೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಯೋಜನೆಯಡಿ ಉದ್ಯೋಗಕ್ಕಿಂತ ನಿರುದ್ಯೋಗವೇ ಹೆಚ್ಚಾಗಲಿದೆ. ನೈಸರ್ಗಿಕವಾಗಿ ಸಂಪದ್ಭರಿತವಾಗಿರುವ ಭಾರತಕ್ಕೆ ಸದೃಢ ಹಾಗೂ ಸಮರ್ಥ ಸೇನೆಯ ಅಗತ್ಯವಿದೆ. ಆದರೆ ತೋರಿಕೆಗಾಗಿ ಯೋಜನೆ ಘೋಷಿಸಿ ಜನರ ದಿಕ್ಕನ್ನು ತಪ್ಪಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.

‘ದೇಶದ ಭದ್ರತೆಗೆ ಧಕ್ಕೆ ತರುವ ಅಗ್ನಿಫಥ್ ಯೋಜನೆ ಕೈಬಿಡಬೇಕು. ಹಿಂದೆ ನಡೆಯುತ್ತಿದ್ದ ಸೇನಾ ನೇಮಕಾತಿಯನ್ನು ಮುಂದುವರಿಸಿ, ಉದ್ಯೋಗ ಒದಗಿಸಬೇಕು. ಆ ಮೂಲಕ ಭಾರತೀಯ ಸೇನೆಯನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡಲು ಕೇಂದ್ರ ಸರ್ಕಾರ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಬಸವರಾಜು ಅವರು ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾರಾಜಶೇಖರ್ ಜತ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಅಸ್ಗರ್ ಮುನ್ನಾ, ಎ.ಎಸ್.ಗುರುಸ್ವಾಮಿ, ಒಬಿಸಿ ವಿಭಾಗದ ರಾಜ್ಯಪ್ರಧಾನಕಾರ್ಯದರ್ಶಿ ಸಿ.ಎ.ಮಹದೇವಶೆಟ್ಟಿ, ರಾಜ್ಯ ಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಜಿಲ್ಲಾಪ್ರದಾನ ಕಾರ್ಯದರ್ಶಿ ಆರ್.ಮಹದೇವು, ಎಸ್‌ಟಿ ವಿಭಾದ ಜಿಲ್ಲಾಧ್ಯಕ್ಷ ಬಿ.ಕಾಂ.ಮಹದೇವನಾಯಕ ಮುಖಂಡರಾದ ಸದಾಶಿವಮೂರ್ತಿ, ರಮೇಶ್, ಅರಕಲವಾಡಿ ಸೋಮನಾಯಕ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT