ಬುಧವಾರ, ಜನವರಿ 20, 2021
29 °C
ಯಡಿಯೂರಪ್ಪ ಮೇಲೆ ಸಾಧು, ಸಂತರ ಆಶೀರ್ವಾದ ಇರಲಿ– ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ

ರಾಜ್ಯದಲ್ಲಿ ತಂಪಾದ ರಾಜಕೀಯ ವಾತಾವರಣ: ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ (ಚಾಮರಾಜನಗರ): ರಾಜ್ಯ ರಾಜಕಾರಣದಲ್ಲಿ ಮಿಂಚು–ಸಿಡಿಲು ಮರೆಯಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ ಎಂದು ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ‌ ಅವರು ಗುರುವಾರ ಪ್ರತಿಪಾದಿಸಿದರು. 

ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಮಾತನಾಡಿದ ಅವರು, ಯಾವ ಘಟನೆ ಅಥವಾ ಯಾರ ಹೇಳಿಕೆಯನ್ನೂ ಉಲ್ಲೇಖಿಸದೆ ಮೇಲಿನಂತೆ ಹೇಳಿದರು. 

ಯಡಿಯೂರಪ್ಪ ನಾಯಕತ್ವ ಹಾಗೂ ಆಡಳಿತವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಕೋವಿಡ್‌ನಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಈ ಹಿಂದೆ ಘೋಷಿಸಿದಂತೆ 30 ಮಠಗಳಿಗೆ ಅನುದಾನ ಬಿಡುಗಡೆ ಮಾಡಿರುವುದನ್ನು ಕೊಂಡಾಡಿದರು. 

‘ಮಠಗಳಲ್ಲಿ ನಡೆಯುತ್ತಿರುವ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿರುವ ಯಡಿಯೂರಪ್ಪ ಅವರು ನಾವು ಕೇಳಿದ್ದಕ್ಕಿಂತಲೂ ಹೆಚ್ಚು ಹಣವನ್ನು ಬಿಡುಗಡೆ ಮಾಡಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೆ, ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದನ್ನು ನೋಡುವಾಗ ಭಾವುಕನಾದೆ’ ಎಂದರು. 

‘ಸಮಾಜದ ಎಲ್ಲ ವರ್ಗಗಳು, ಬಡವರ ಬಗ್ಗೆ ಕಾಳಜಿ ಹೊಂದಿರುವ ಯಡಿಯೂರಪ್ಪ ಅವರು ಇನ್ನಷ್ಟು ಸೇವೆ ಮಾಡಬೇಕು. ಅದಕ್ಕಾಗಿ ರಾಜ್ಯದ ಎಲ್ಲ ಸಾಧು ಸಂತರ ಆಶೀರ್ವಾದ ಅವರ ಮೇಲಿರಬೇಕು’ ಎಂದರು. 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಾಲೂರು ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ ಹಾಗೂ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರೂ ಇದ್ದರು. 

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕೂಡ ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

‘ಆರ್ಥಿಕ ಸಂಕಷ್ಟದ ನಡುವೆಯೂ ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗದಂತೆ ಆಡಳಿತ ನಡೆಸುತ್ತಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗಲೆಲ್ಲ ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡು ಬಂದಿಲ್ಲ. ಎಲ್ಲೆಲ್ಲೂ ಹಸಿರು ಇರುತ್ತದೆ. ಅವರ ಆಡಳಿತದಲ್ಲಿ ರಾಜ್ಯ ಸುಭಿಕ್ಷವಾಗಿದೆ. ಎಲ್ಲ ಸ್ವಾಮೀಜಿಗಳ ಆಶೀರ್ವಾದ ಅವರ ಮೇಲಿರಬೇಕು’ ಎಂದು ಕಾರಜೋಳ ಅವರು ಹೇಳಿದರು. 

ನಿರ್ಲಿಪ್ತ ಮನಸ್ಸಿನಿಂದ ಇದ್ದಾರೆ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕೂಡ ತಮ್ಮ ಭಾಷಣದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು. 

‘ಮುಖ್ಯಮಂತ್ರಿ ಅವರು ಎರಡು ದಿನಗಳಿಂದ ಈ ಕ್ಷೇತ್ರದಲ್ಲಿದ್ದಾರೆ. ಸುತ್ತೂರು ಮಠ, ಮುಡುಕುತೊರೆ, ಸಾಲೂರು ಮಠಕ್ಕೆ ಭೇಟಿ ಕೊಟ್ಟು ಮಹದೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಎಲ್ಲ ಒತ್ತಡ, ಜಂಜಡಗಳನ್ನು ಮರೆತು ಸಾವಧಾನವಾಗಿ ನಿರ್ಲಿಪ್ತ ಮನಸ್ಸಿನಿಂದ ಇಲ್ಲಿದ್ದಾರೆ’ ಎಂದು ಸ್ವಾಮೀಜಿ ಹೇಳಿದರು. 

‘ತಮ್ಮ ಸೇವಾ ಕಾರ್ಯ, ಸಂಘಟನೆ, ಹೋರಾಟ ಮತ್ತು ವೈಯಕ್ತಿಕ ಸಾಮರ್ಥ್ಯಗಳಿಂದ ಅವರು ಮುಖ್ಯಮಂತ್ರಿಯಾಗಿದ್ದಾರೆ’ ಎಂದೂ ಪ್ರಶಂಸಿಸಿದರು.  

ಹವಾಮಾನ ವೈಪರೀತ್ಯ: ರಸ್ತೆ ಮಾರ್ಗದಲ್ಲಿ ತೆರಳಿದ ಸಿ.ಎಂ

ಮಹದೇಶ್ವರ ಬೆಟ್ಟದ ಕಾರ್ಯಕ್ರಮವನ್ನು ಮುಗಿಸಿ ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ತೆರಳಬೇಕಿತ್ತು. ಆದರೆ ‘ನಿವಾರ್‌’ ಚಂಡಮಾರುತದ ಕಾರಣಕ್ಕೆ ಬೆಳಿಗ್ಗೆಯಿಂದ ಬೆಟ್ಟದಲ್ಲಿ ಮಂಜು ಮಿಶ್ರಿತ ಮೋಡ ಕವಿದ ವಾತಾವರಣ ಹಾಗೂ ಮಳೆಯಾಗುತ್ತಿದ್ದುದರಿಂದ ಹೆಲಿಕಾಪ್ಟರ್‌ ‍ಪ್ರಯಾಣ ರದ್ದುಗೊಳಿಸಿ ರಸ್ತೆ ಮಾರ್ಗವಾಗಿ ಸಂಚರಿಸಿದರು. 

ಕೊಳ್ಳೇಗಾಲದಲ್ಲಿ ಮಧ್ಯಾಹ್ನ ಊಟ ಮಾಡಿ ನಂತರ ಮಂಡ್ಯ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು