ಬುಧವಾರ, ಆಗಸ್ಟ್ 4, 2021
21 °C
ಕೊಳ್ಳೇಗಾಲ ಆಸ್ಪತ್ರೆಯಲ್ಲಿ 58 ವರ್ಷದ ವ್ಯಕ್ತಿ ಸಾವು, ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢ

ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದು ಜಿಲ್ಲೆಯಲ್ಲಿ ದಾಖಲಾದ ಮೊದಲ ಸಾವು.

ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಯಲ್ಲಿ ತಾಲ್ಲೂಕಿನ ಕೊಂಗರ ಹಳ್ಳಿಯ 58 ವರ್ಷದ ವ್ಯಕ್ತಿಯೊಬ್ಬರು ಶನಿವಾರ ಮೃತಪಟ್ಟಿದ್ದು, ಅವರಿಗೆ ಸೋಂಕು ತಗಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ಜಿಲ್ಲಾಧಿಕಾರಿ‌ ಡಾ.ಎಂ.ಆರ್.ರವಿ ಅವರು ಶನಿವಾರ ತಡ ರಾತ್ರಿ ಪ್ರಕಟಣೆಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಇದೇ 8ರಂದು ಕೊಳ್ಳೇಗಾಲದ ಉಪವಿಭಾಗದ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಕೋವಿಡ್ ಪರೀಕ್ಷೆಗಾಗಿ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆದರೆ ವರದಿ ಇನ್ನೂ ಬಂದಿರಲಿಲ್ಲ.

ವೈದ್ಯಕೀಯ ಸಿಬ್ಬಂದಿ‌ ಚಿಕಿತ್ಸೆ ಮುಂದುವರಿಸಿದ್ದರು. ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.

‘ವರದಿ ಬರುವುದಕ್ಕೂ‌ ಮೊದಲೆ ಮೃತಪಟ್ಟಿರುವುದರಿಂದ ಮತ್ತೊಮ್ಮೆ‌ ಅವರ ಗಂಟಲ‌ದ್ರವ ತೆಗೆದು ಟ್ರೂ ನಾಟ್ ಪರೀಕ್ಷೆ ನಡೆಸಲಾಯಿತು. ಅದರಲ್ಲಿ ಸೋಂಕು‌ ತಗುಲಿರುವುದು ದೃಢಪಟ್ಟಿದೆ. ಆ ಬಳಿಕ ನಡೆಸಿದ ಆರ್ ಟಿಪಿಸಿಆರ್ ಪರೀಕ್ಷೆಯಲ್ಲೂ ಸೋಂಕು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ರೂಪಿಸಿರುವ ಶಿಷ್ಟಾಚಾರ ದಂತೆ ಮೃತರ ಅಂತ್ಯ ಸಂಸ್ಕಾರ‌‌ ನೆರವೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ವಾರ್ಡ್ ಸೀಲ್ ಡೌನ್: ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ, ಆಸ್ಪತ್ರೆ ವಾರ್ಡ್ ಅನ್ನು ಸ್ಯಾನಿಟೈಸ್ ಮಾಡಿ ಸೀಲ್‌ಡೌನ್ ಮಾಡಲಾಗಿದೆ. ಚಿಕಿತ್ಸೆ‌ ನೀಡಿದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಕುಟುಂಬದ ಸದಸ್ಯರು, ಡಿ ಗ್ರೂಪ್ ಸಿಬ್ಬಂದಿ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

18 ಮಂದಿಗೆ ಸೋಂಕು: ಈ ನಡುವೆ, ಜಿಲ್ಲೆಯಲ್ಲಿ ಶನಿವಾರ 18 ಮಂದಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ. ಜಿಲ್ಲಾಸ್ಪತ್ರೆಯ ಡಿ ಗ್ರೂಪ್‌ ಮಹಿಳಾ ನೌಕರರೊಬ್ಬರಿಗೆ ಸೋಂಕು ತಗುಲಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 163ಕ್ಕೆ ಏರಿದೆ. 114 ಸಕ್ರಿಯ ಪ್ರಕರಣಗಳಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ 5 ಪ್ರಕರಣಗಳು, ಗುಂಡ್ಲುಪೇಟೆ 5, ಹನೂರು 4, ಚಾಮರಾಜನಗರ, ಯಳಂದೂರು ತಾಲ್ಲೂಕುಗಳಲ್ಲಿ ತಲಾ 2 ಪ್ರಕರಣಗಳು ವರದಿಯಾಗಿವೆ.

ವೈದ್ಯಕೀಯ ಕಾಲೇಜಿನ ಪ್ರಯೋಗಾಲಯದಲ್ಲಿ ಶನಿವಾರ 587 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 569 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಆರೈಕೆ ಕೇಂದ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 46 ವರ್ಷ ಗ್ರೂಪ್‌ ಡಿ ಮಹಿಳಾ ನೌಕರರಿಗೆ ಸೋಂಕು ತಗುಲಿದೆ.

‘ಜುಲೈ ನಾಲ್ಕರಿಂದ ಅವರು ಕರ್ತವ್ಯಕ್ಕೆ ಬಂದಿಲ್ಲ. ಹಾಗಾಗಿ, ಸೀಲ್‌ಡೌನ್‌ ಮಾಡಿಲ್ಲ. ಆದರೆ, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದ ಸುತ್ತಮುತ್ತ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಅವರು ಸಂಪರ್ಕ ಹೊಂದಿದ್ದ ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗುವುದು’ ಎಂದು ಜಿಲ್ಲಾಸ್ಪತ್ರೆ ಮುಖ್ಯ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿಯಾದ ಹೊಸ ಪ್ರಕರಣಗಳಲ್ಲಿ ನಾಲ್ವರು ಮಾತ್ರ ಸೋಂಕಿತರ ಸಂಪರ್ಕಿತ ರಾಗಿದ್ದಾರೆ. ಉಳಿದವರ ಪೈಕಿ ಏಳು ಮಂದಿ ಬೆಂಗಳೂರು, ಮೈಸೂರು ಮತ್ತು ಮಡಿಕೇರಿಗೆ ಹೋಗಿ ಬಂದವರು. ಆರು ಮಂದಿಗೆ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ಗೊತ್ತಾಗಿಲ್ಲ.

ಗುಣಮುಖ– ಗೊಂದಲ: ಸೋಂಕು ಮುಕ್ತರಾಗಿ ಮನೆಗೆ ತೆರಳಿರುವವರ ವಿಚಾರದಲ್ಲಿ ಗೊಂದಲ ಉಂಟಾಯಿತು. ಜಿಲ್ಲಾಡಳಿತ ಮಾಧ್ಯಮಗಳಿಗೆ ಮೊದಲು ನೀಡಿದ ಮಾಹಿತಿಯಲ್ಲಿ 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಹೇಳಲಾಗಿತ್ತು. ಸ್ವಲ್ವ ಹೊತ್ತಿನ ನಂತರ, ಕಳುಹಿಸಿದ ಪರಿಷ್ಕೃತ ಮಾಹಿತಿಯಲ್ಲಿ ಯಾರೊಬ್ಬರೂ ಮನೆಗೆ ತೆರಳಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಗೊಂದಲ ಉಂಟಾಗಿದೆ ಎಂದು ಜಿಲ್ಲಾಡಳಿತ ಹೇಳಿತು.

ತಾಲ್ಲೂಕುವಾರು ಮಾಹಿತಿ...

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ 19 ವರ್ಷದ ಯುವಕ (ಮೈಸೂರಿಗೆ ಪ್ರಯಾಣ ಮಾಡಿದವರು), ಕಾಮಗೆರೆಯ 24 ವರ್ಷದ ಯುವಕ (ಬೆಂಗಳೂರಿನಿಂದ ಬಂದವರು) ಸಿಂಗಾನಲ್ಲೂರಿನ 39 ವರ್ಷದ ಗಂಡು (ಮೈಸೂರಿಗೆ ಹೋಗಿ ಬಂದವರು), ಇಕ್ಕಡಹಳ್ಳಿಯ 35 ವರ್ಷದ ಯುವಕ, ಇಕ್ಕಡಹಳ್ಳಿಯ 14 ವರ್ಷದ ಬಾಲಕ (ಇಬ್ಬರ ಸೋಂಕಿನ ಮೂಲ ಗೊತ್ತಾಗಿಲ್ಲ).

ಗುಂಡ್ಲುಪೇಟೆ: ಗುಂಡ್ಲುಪೇಟೆ 40 ವರ್ಷದ ಪುರುಷ (ರೋಗಿ ಸಂಖ್ಯೆ 15,274 ಸಂಪರ್ಕಿತ), ಜಾಕೀರ್ ಹುಸೇನ್ ನಗರ 17 ವರ್ಷದ ಯುವಕ (ರೋಗಿ ಸಂಖ್ಯೆ 18550ರ ಸಂಪರ್ಕಿತ), ಗುಂಡ್ಲುಪೇಟೆ. ದೊಡ್ಡತುಪ್ಪೂರಿನ 34 ವರ್ಷದ ಯುವಕ (ರೋಗಿ ಸಂಖ್ಯೆ 25,130 ಸಂಪರ್ಕಿತ), ಬೊಮ್ಮಲಾಪುರದ 42 ವರ್ಷದ ವ್ಯಕ್ತಿ (ಕೊಡಗಿನಿಂದ ಬಂದವರು) 23 ವರ್ಷದ ಯುವಕ (ಮೂಲ ಗೊತ್ತಾಗಿಲ್ಲ).

ಹನೂರು: ಚೆನ್ನಾಲಿಂಗನಹಳ್ಳಿಯ 26 ವರ್ಷದ ಯುವಕ (ಬೆಂಗಳೂರಿನಿಂದ ಬಂದವರು), ಶಾಗ್ಯದ 26 ವರ್ಷದ ಯುವಕ (ಬೆಂಗಳೂರಿನಿಂದ ಬಂದವರು), ಹನೂರು ಪಟ್ಟಣದ 39 ವರ್ಷದ ಮಹಿಳೆ (ಮೂಲ ಗೊತ್ತಾಗಿಲ್ಲ), 54 ವರ್ಷದ ಪುರುಷ ಬೂದಬಾಳು (ಮೂಲ ಗೊತ್ತಾಗಿಲ್ಲ).

ಚಾಮರಾಜನಗರ: ಸೋಮವಾರಪೇಟೆಯ 20 ವರ್ಷದ ಯುವಕ (ಸೋಂಕಿನ ಮೂಲ ಗೊತ್ತಾಗಿಲ್ಲ) 46 ವರ್ಷದ ಮಹಿಳೆ, (ಜಿಲ್ಲಾಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ).

ಯಳಂದೂರು: ಮದ್ದೂರಿನ 30 ವರ್ಷದ ಯುವತಿ (ಬೆಂಗಳೂರಿನ ಬಂದಿರು ವವರು), 65ರ ವೃದ್ಧೆ, ಮಾಂಬಳ್ಳಿ (ರೋಗಿ ಸಂಖ್ಯೆ 31,285 ಸಂಪರ್ಕಿತರು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು