ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಲಯಕ್ಕೆ ಜೀವ ತುಂಬಿದ ತಬಲ

ರಾಕ್, ಪಾಪ್ ಸಂಗೀತದ ನಡುವೆ ಸಾಂಪ್ರದಾಯಿಕ ಸಂಗೀತ ಅಪ್ಪಿಕೊಂಡ ಸೋಮಣ್ಣ
ನಾ.ಮಂಜುನಾಥಸ್ವಾಮಿ
Published 8 ಮೇ 2024, 6:32 IST
Last Updated 8 ಮೇ 2024, 6:32 IST
ಅಕ್ಷರ ಗಾತ್ರ

ಯಳಂದೂರು: ಒಂದೆಡೆ ಕೃಷಿ ಕಾಯಕ. ಮತ್ತೊಂದೆಡೆ ಶ್ರಮಿಕ. ಸಂಗೀತ ಸಂಜೆಗಳಲ್ಲಿ ವೇದಿಕೆ ಹತ್ತಿದಾಗ ತಬಲ ವಾದಕ. ಹೀಗೆ, ಹಬ್ಬ ಹರಿದಿನ, ಉತ್ಸವ ಮತ್ತು ಜಾತ್ರೆಗಳಲ್ಲಿ ತಬಲ ನುಡಿ ಸಾಣಿಕೆಯಲ್ಲಿ ಗಮನ ಸೆಳೆಯುವ ಕೆಸ್ತೂರು ಸೋಮಣ್ಣ ಅನನ್ಯ ರಾಗ ಮಾಲಿಕೆಗಳಿಗೆ ಜೀವ ತುಂಬುವ ಗ್ರಾಮೀಣ ಸಂಗೀತ ಕಲೆಗಾರ. 

ಗ್ರಾಮೀಣ ಭಾಗಗಳಲ್ಲಿ ಈಗಲೂ ದೇವರ ಕಥೆ, ವಿನೋದಾವಳಿ, ಹರಿನಾಮ ಸ್ಮರಣೆ, ಸುಗಮ ಸಂಗೀತ ಹಾಗೂ ಶ್ರಾವಣ ಮಾಸದಲ್ಲಿ ಮನೆ ಮನೆಗಳಲ್ಲಿ ಕಥೆ ಓದಿಸುವ ಪರಂಪರೆ ಇದೆ. ಇಂತಹ ಸಂದರ್ಭ ಸಹ ಕಲಾವಿದರ ಜೊತೆ ತಬಲ, ಕಂಜರ, ಹಾರ್ಮೋನಿಯಂ ಜುಗಲ್ ಬಂಧಿ ವಾದನ ಸಂಗೀತ ಪ್ರಿಯರನ್ನು ಸೆಳೆಯುತ್ತದೆ. ಹೀಗೆ, ತಬಲದಿಂದ ಹೊಮ್ಮುವ ತಾಳ ಬದ್ದ ಸಂಗೀತದಲ್ಲಿ ಸೋಮಣ್ಣ ಅವರ ಕೈಚಳಕ ಮೋಡಿ ಮಾಡುತ್ತದೆ. ತಬಲ ನುಡಿಸುವುದರಲ್ಲಿ ನೈಪುಣ್ಯ ಸಾಧಿಸಿದ್ದಾರೆ.   

‘ನಾನು ಹೆಚ್ಚು ಕಲಿತವನಲ್ಲ. ಮೂರನೇ ತರಗತಿಗೆ ಶಾಲೆ ಬಿಟ್ಟು ಅಲೆಯುತ್ತಿದ್ದೆ. ಆದರೆ, ಊರುಗಳಲ್ಲಿ ನಡೆಯುತ್ತಿದ್ದ ಭಜನೆ ಮೇಳ, ಮಂಗಳವಾದ್ಯದ ಸದ್ದು, ತಮಟೆ ಶಬ್ಧ ನನ್ನನ್ನು ಕಲಿಯುವಂತೆ ಪ್ರೇರೇಪಿಸಿತು. ಉತ್ಸವ ಮತ್ತು ಸಂಗೀತ ಕಾರ್ಯಕ್ರಮಗಳಲ್ಲಿ ಬಳಸುವ ಪರಿಕರಗಳನ್ನು ಜತನದಿಂದ ವೀಕ್ಷಿಸುತ್ತಿದ್ದೆ. ಇದು ಮುಂದೆ ತಬಲ ಕಲಿಯುವ ಆಸಕ್ತಿಯನ್ನು ಇಮ್ಮಡಿಸಿತು’ ಎಂದು ಹೇಳುತ್ತಾರೆ ಸೋಮಣ್ಣ.

‘ನನ್ನ ಹವ್ಯಾಸವನ್ನು ಗುರುತಿಸಿದ ಹಿರಿಯರು ಶಾಸ್ತ್ರೀಯವಾಗಿ ಕಲಿಯಲು ಮಾರ್ಗದರ್ಶನ ಮಾಡಿದರು. ಪರಿಣಾಮ, ಚಾಮರಾಜನಗರದ ಮಹದೇವು ನನಗೆ ಗುರುಗಳಾಗಿ ಸಿಕ್ಕರು. ಇವರ ಜೊತೆ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತದ ವಿವಿಧ ಪ್ರಾಕಾರಗಳ ಪರಿಚಯ ಆಯಿತು. ತಬಲ ಲಯ ಬದ್ಧ ಕಲಿಕೆ ಒಲಿಯಿತು. 20 ವರ್ಷಗಳಿಂದ ತಬಲ ಬದುಕಿನ ಭಾಗವಾಯಿತು’ ಎಂದು ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ಈಚಿನ ದಿನಗಳಲ್ಲಿ ಸಂಗೀತವನ್ನು ಗುರುಗಳ ಮೂಲಕ ಕಲಿಯುವ ಆಸಕ್ತಿ ಕಡಿಮೆ ಆಗುತ್ತಿದೆ. ಆನ್‌ಲೈನ್‌ ಮೂಲಕ ತಬಲ ಕಲಿಸುವವರು ಇದ್ದಾರೆ. ಯಾವುದೇ ತಾಳ, ಜ್ಞಾನ, ಲಯದ ಅರಿವು ಇಲ್ಲದೆ ನುಡಿಸುವವರು ಇದ್ದಾರೆ. ಆದರೆ, ಭಾರತೀಯ ಸಂಸ್ಕೃತಿಯನ್ನು ಶತಮಾನಗಳ ಕಾಲದಿಂದ ಜತನದಿಂದ ಕಟ್ಟಿಕೊಟ್ಟಿರುವ ಸಂಗೀತ ವಾದ್ಯಗಳನ್ನು ಕ್ರಮ ಬದ್ಧವಾಗಿ ಕಲಿತು ನುಡಿಸಿದರೆ ಮಾತ್ರ ಶ್ರೇಯಸ್ಸು ಧಕ್ಕುತ್ತದೆ’ ಎಂಬುದು ಸೋಮಣ್ಣ ಅವರ ಅನುಭವದ ಮಾತು.

ರಾಕ್ ಮತ್ತು ಪಾಪ್ ಹುಚ್ಚು ‘ತಬಲದಲ್ಲಿ ನವಿರಾದ ಬೆರಳುಗಳ ಮೂಲಕ ಪ್ರಾಸಗಳಿಗೆ ಜೀವ ತುಂಬಬಹುದು. ಉತ್ತಮ ವಾದಕ ಆಗಬಹುದು. ಕಲಾವಿದನ ಜೀವನಕ್ಕೆ ನೈಜ ಲಯವನ್ನು ತುಂಬಬಹುದು. ತಬಲ ವಾದಕರನ್ನು ಬೆಂಬಲಿಸುವ ಪ್ರಯತ್ನಗಳು ಆಗಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನರು ರಾಕ್ ಮತ್ತು ಪಾಪ್ ಸಂಗೀತದಲ್ಲಿ ಮೈಮರೆತು ಭಾರತೀಯ ತಬಲ ಸಂಸ್ಕೃತಿ ಮರೆಯುತ್ತಿದ್ದಾರೆ’ ಎಂದು ಬೇಸರಿಸುತ್ತಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT