ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಒತ್ತಾಯ

Last Updated 17 ಏಪ್ರಿಲ್ 2021, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕನ ಕೊಲೆಗೆ ಕೋಡಿಹಳ್ಳಿ ಚಂದ್ರಶೇಖರ್‌ ಅವರು ಕಾರಣವಾಗಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ (ಮೂಲ) ಅಧ್ಯಕ್ಷ ಕೆ.ಎಂ.ಮಾದಪ್ಪ ಅವರು ನಗರದ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

‘ರೈತ ಸಂಘದ ಅಧ್ಯಕ್ಷ ಎಂದು ಹೇಳಿಕೊಂಡು ಕೋಡಿಹಳ್ಳಿ ಚಂದ್ರಶೇಖರ್‌ ಅವರು ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ.ಸಣ್ಣ ರೈತರು ತರಕಾರಿ, ಹೂವು, ರೇಷ್ಮೆ ಮತ್ತು ಹಾಲು ಸಾಗಾಟಕ್ಕೆ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಅವಲಂಬಿಸಿದ್ದರು. ಆದರೆ ಈಗ, ಕೋಡಿಹಳ್ಳಿ ಚಂದ್ರಶೇಖರ್ ಪ್ರಚೋದನೆಯಿಂದ ನಡೆಯುತ್ತಿರುವ ಮುಷ್ಕರವು ಸಣ್ಣ ರೈತರನ್ನು ಕಷ್ಟಕ್ಕೆ ತಳ್ಳಿದೆ. ರೈತ ಪ್ರಯಾಣಿಕರ ಕಷ್ಟ ನೋಡಲಾಗದೆ ಕರ್ತವ್ಯಕ್ಕೆ ಹಾಜರಾಗುವ ಚಾಲಕರು ಹಾಗೂ ನಿರ್ವಾಹಕರ ಮೇಲೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಚೋದನೆಯಿಂದ ಹಲ್ಲೆಗಳಾಗುತ್ತಿವೆ. ಇಂತಹ ಸಂಚು, ಪಿತೂರಿಗಳಿಂದ ರೈತರು ವಂಚನೆಗೊಳಗಾಗಿದ್ದರು. ಇದೀಗ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ವಿಷಜಾಲಕ್ಕೆ ಸಿಲುಕಿದ್ದಾರೆ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ಕೋಡಿಹಳ್ಳಿ ಚಂದ್ರಶೇಖರ್ ಪ್ರಚೋದನೆಯಿಂದ ಹೋರಾಟಗಳ ಇತಿಹಾಸದಲ್ಲಿ ಶುಕ್ರವಾರ ಕೆಟ್ಟ ಅಧ್ಯಾಯ ದಾಖಲಾಗಿದೆ. ಬಾಗಲಕೋಟೆಯಿಂದ ಜಮಖಂಡಿಗೆ ತೆರಳುತ್ತಿದ್ದಾಗ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಮುಷ್ಕರದಲ್ಲಿ ತೊಡಗಿರುವ ಕೆಲವು ನೌಕರರು ಬಸ್ ಚಾಲಕ ನಬಿ ರಸೂಲ್ ಅವಟಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕಾರಣ ನಬಿ ರಸೂಲ್ ಸಾವಿಗೀಡಾಗಿದ್ದಾರೆ. ಈ ಸಾವಿಗೆ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಅವರ ಆಪ್ತರು ಕಾರಣರಾಗಿದ್ದು ಕೂಡಲೇ ಇವರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಬೇಕು’ ಎಂದು ದೂರಿನಲ್ಲಿ ಮಾದಪ್ಪ ಒತ್ತಾಯಿಸಿದ್ದಾರೆ.

ರೈತ ಸಂಘದ ಪಾಪಣ್ಣಶೆಟ್ಟಿ, ಪುಟ್ಟರಾಜು, ಬಸಪ್ಪ, ಮಹದೇವಪ್ಪ, ರಾಜಶೇಖರ್ ಇತರರು ಇದ್ದರು.

ದೂರಿನ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಅವರು, ‘ದೂರನ್ನು ಸ್ವೀಕರಿಸಿದ್ದೇವೆ. ಆದರೆ, ಚಾಲಕನ ಸಾವು ಪ್ರಕರಣದಲ್ಲಿ ಸಂಬಂಧಿಸಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಹಾಗಾಗಿ, ನಾವಿಲ್ಲಿ ಎಫ್‌ಐಆರ್‌ ದಾಖಲಿಸಲು ಆಗುವುದಿಲ್ಲ. ದೂರನ್ನು ಎಸ್‌ಪಿ ಅವರ ಮೂಲಕ ಸಂಬಂಧಿಸಿದ ಠಾಣೆಗೆ ಕಳುಹಿಸಿ ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT