ಶನಿವಾರ, ಫೆಬ್ರವರಿ 27, 2021
20 °C

ಭಾಗ್ಯಜ್ಯೋತಿ ಗ್ರಾಹಕರಿಂದ ಶುಲ್ಕ ವಸೂಲಿ: ರೈತರಿಂದ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದಾದ್ಯಂತ ಭಾಗ್ಯಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್‌ ಸಂಪರ್ಕ ಪಡೆದಿರುವ ಬಡವರಿಂದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮವು (ಸೆಸ್ಕ್‌) ಬಡ್ಡಿ, ಚಕ್ರಬಡ್ಡಿ ಸಮೇತ ಬಿಲ್ ವಸೂಲಾತಿ ಮಾಡುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಸೆಸ್ಕ್ ಕಚೇರಿ ಮುಂಭಾಗ ಮಂಗಳವಾರ ಧರಣಿ ನಡೆಸಿದರು.

ಕಚೇರಿ ಮುಂಭಾಗ ಸೇರಿದ ಪ್ರತಿಭಟನಾಕಾರರು, ಗಾಂಧೀಜಿಯವರ ಭಾವಚಿತ್ರ ಇಟ್ಟು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಸೆಸ್ಕ್‌ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಅವರು, ‘ ಭಾಗ್ಯಜ್ಯೋತಿ ಅಡಿ ಸಂಪರ್ಕ ಪಡೆದಿರುವ ಬಡವರಿಂದ ಬಡ್ಡಿ, ಚಕ್ರ ಬಡ್ಡಿ ಸಮೇತ ಸೆಸ್ಕ್‌ ಹಣ ವಸೂಲಿ ಮಾಡುತ್ತಿದೆ. ಪಾವತಿ ಮಾಡದವರ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ಇದು ಸರಿಯಲ್ಲ. ಎಲ್ಲ ಪವರ್‌ ಮನ್‌ಗಳನ್ನು ವಸೂಲಾತಿಗೆ ಬಳಸಿಕೊಳ್ಳಲಾಗುತ್ತಿದೆ. ತಾಂತ್ರಿಕ ಕೆಲಸ ಮಾಡಲು ಯಾರೂ ಸಿಗುತ್ತಿಲ್ಲ’ ಎಂದು ದೂರಿದರು. 

‘ತಿಂಗಳಿಗೆ 40 ಯುನಿಟ್‌ ಉಚಿತವಾಗಿ ನೀಡಲಾಗುತ್ತದೆ. ಅದಕ್ಕಿಂತ ಹೆಚ್ಚು ಬಳಿಸಿದರೆ ಬಳಸಿದ ಎಲ್ಲ ಯುನಿಟ್‌ಗಳ ಶುಲ್ಕ ಪಾವತಿಸಬೇಕು ಎಂದು ಸೆಸ್ಕ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಮೊದಲೇ ಅವರಿಗೆ ಸ್ಪಷ್ಟವಾಗಿ ತಿಳಿಸಬೇಕಿತ್ತು. ಸರಿಯಾದ ತಿಳಿವಳಿಕೆ ನೀಡದ ಪರಿಣಾಮ ಇಂದು ಒಬ್ಬೊಬ್ಬ ರೈತರಿಗೆ ₹40 ಸಾವಿರದಿಂದ ₹50 ಸಾವಿರ ಬಿಲ್ ಬಂದಿದೆ. ತಿಂಗಳಿಗೆ ₹1,400ರಿಂದ ₹1,500 ಬಡ್ಡಿ ಕಟ್ಟುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪ‍ಡಿಸಿದರು. 

‘ರೈತರು ದುಡಿಯುವ ಹಣ ಕೇವಲ ಬಡ್ಡಿಗೆ ವಜಾ ಆಗುತ್ತಿದ್ದು ಅಸಲು ಹಾಗೇ ಉಳಿದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಹಳೆಯ ಬಾಕಿ ಕೇಳಬಾರದು. ಪಾವತಿ ಮಾಡದವರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬಾರದು’ ಎಂದು ಅವರು ಆಗ್ರಹಿಸಿದರು. 

ರೈತರ ಪಟ್ಟು: ‘ಅಧಿಕಾರಿಗಳ ಈ ಕ್ರಮದಿಂದ ಭಾಗ್ಯಜ್ಯೋತಿದಾರರಿಗೆ ತೊಂದರೆಯಾಗಿದೆ. ಸ್ಥಳಕ್ಕೆ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬರಬೇಕು. ಅಲ್ಲಿಯವರೆಗೂ ಧರಣಿ ಮುಂದುವರಿಯಲಿದೆ’ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಬಂದ ಸೆಸ್ಕ್‌ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ ಹಾಗೂ ಇತರ ಅಧಿಕಾರಿಗಳು ಧರಣಿ ನಿರತರ ಮನವೊಲಿಸಲು ಯತ್ನಿಸಿದರು. 

ಮಾರ್ಚ್‌ 12ರ ಒಳಗಾಗಿ ಸೆಸ್ಕ್‌ ಎಂಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಒಳಗಾಗಿ ಸಭೆ ನಡೆಸಲು ಪ್ರಯತ್ನ ನಡೆಸುತ್ತೇವೆ. ಅದುವರೆಗೂ ಗ್ರಾಹಕರಿಂದ ಹಣ ವಸೂಲು ಮಾಡುವುದಿಲ್ಲ. ಸಂಪರ್ಕ ಕಡಿತ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಆ ಬಳಿಕ ರೈತರು ಧರಣಿ ವಾಪಸ್‌ ಪಡೆದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗುರುಪ್ರಸಾದ್ ಅವರು, ‘ಅಧಿಕಾರಿಗಳು ಭರವಸೆ ನೀಡಿರುವುದರಿಂದ ತಾತ್ಕಾಲಿಕವಾಗಿ ಧರಣಿ ವಾಪಸ್‌ ಪಡೆದಿದ್ದೇವೆ. ಒಂದು ವೇಳೆ 12ರ ಒಳಗಾಗಿ ಸಭೆ ನಡೆಸದಿದ್ದರೆ, ಮೈಸೂರಿನಲ್ಲಿ ಸೆಸ್ಕ್‌ ಎಂಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದರು. 

ಹೆಗ್ಗೋಠಾರ ವಿಜಿ, ಮಾಡ್ರಹಳ್ಳಿ ಮಹದೇವಪ್ಪ, ರಂಗಸ್ವಾಮಿ, ಕಲ್ಪುರ ಮಂಜು, ಮೇಲಾಜಿಪುರ ಮಹೇಶ್, ನಾಗರಾಜು, ಶಿವಮೂರ್ತಿ, ಶೇಖರ್‌ ಇತರರು ಧರಣಿಯಲ್ಲಿ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು