ಮಂಗಳವಾರ, ಜೂನ್ 28, 2022
23 °C
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ

ಶಿಕ್ಷಣಕ್ಕೆ ಮಹತ್ವಕೊಟ್ಟ ಕಾಂಗ್ರೆಸ್‌ ಗೆಲ್ಲಿಸಿ: ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕಾಂಗ್ರೆಸ್‌ ಪಕ್ಷ ಪದವೀಧರರ ಪರವಾಗಿದೆ. ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಮಧು ಜಿ.ಮಾದೇಗೌಡ ಅವರು ಶಿಕ್ಷಣ ಪ್ರೇಮಿ. ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. 36 ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಜಿಲ್ಲೆಯ ಮತದಾರರು ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಶುಕ್ರವಾರ ಮನವಿ ಮಾಡಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕುಮಾರ್ ನಾಯಕ್ ಸಮಿತಿ ವರದಿ ಜಾರಿ ಮಾಡುವ ಮೂಲಕ ಪದವಿ ಪೂರ್ವ ಹಾಗೂ ಪದವಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡಲಾಯಿತು. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಖಾಲಿ ಹುದ್ದೆಗಳ ಭರ್ತಿ ಮಾಡುವ ಕೆಲಸ ಮಾಡಲಾಗಿತ್ತು ಎಂದರು. ನರೇಂದ್ರಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಮೋದಿ ಅಧಿಕಾರಕ್ಕೆ ಬಂದು ಎಂಟು ವರ್ಷ ಪೂರೈಸಿದ್ದು 16 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಇರುವ ಉದ್ಯೋಗಗಳಲ್ಲೇ ಶೇ 30ರಷ್ಟು ಕಡಿತವಾಗಿದೆ.  ಬಿಜೆಪಿ ಕೊಟ್ಟ ಭರವಸೆ ಈಡೇರಿಸಿಲ್ಲ. ಇರುವ ಉದ್ಯೋಗಕ್ಕೂ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿ ಮಾಡಿ ಎಂದು ಹೇಳಿದರೆ, ಪ್ರಧಾನಿಯವರು ಪಕೋಡ ಮಾರಿ ಎಂದು ಸಲಹೆ ನೀಡಿದ್ದಾರೆ. ಇಂತಹ ಪಕ್ಷಕ್ಕೆ ಮತ ನೀಡಬೇಕಾ ಎಂಬುದನ್ನು ಪದವೀಧರರ ಯೋಚಿಸಬೇಕು’ ಎಂದರು.

‘ಸಬ್‌ ಇನ್‌ಸ್ಪೆಕ್ಟರ್‌, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಅವ್ಯವಹಾರದಲ್ಲಿ ಉನ್ನತ ಶಿಕ್ಷಣ ಸಚಿವರ ಕುಟುಂಬದವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ’ ಎಂದು ಅವರು ಆರೋಪಿಸಿದರು.  

‘ಕಾಂಗ್ರೆಸ್‌ ಪಕ್ಷವು ಶಿಕ್ಷಣಕ್ಕೆ ಮಹತ್ವ ನೀಡುತ್ತಾ ಬಂದಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದಾಗಲೆಲ್ಲ ಶಿಕ್ಷಣ ಸಂಸ್ಥೆಗಳನ್ನು ತೆರೆದಿದೆ. ಪಂಚ ವಾರ್ಷಿಕ ಯೋಜನೆಯ ಮೂಲಕ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಿತ್ತು. ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದ್ದೇ ಕಾಂಗ್ರೆಸ್‌’ ಎಂದರು.  

ಜಿಲ್ಲೆಗೆ ಕೊಡುಗೆ ಶೂನ್ಯ: ಚಾಮರಾಜನಗರ ಜಿಲ್ಲೆಗೆ ಬಿಜೆಪಿ ಕೊಡುಗೆ ಶೂನ್ಯ. ಹಿಂದೆ ಜಿಲ್ಲೆಯ ಪ್ರತಿ ಹೋಬಳಿಗೊಂದರಂತೆ ಮೊರಾರ್ಜಿ ವಸತಿ ಶಾಲೆಗಳನ್ನು ಆರಂಭಿಸಲಾಗಿತ್ತು. ಜಿಲ್ಲೆಯ 16 ಹೋಬಳಿಗಳಲ್ಲಿ 19 ಮೊರಾರ್ಜಿ ಶಾಲೆಗಳನ್ನು ತೆರೆಯಲಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ ಒಂದೇ ಒಂದು ಶಾಲೆ ಆರಂಭಿಸಿಲ್ಲ’ ಎಂದು ದೂರಿದರು. 

ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ.ಮಾದೇಗೌಡ ಅವರು ಮಾತನಾಡಿ, ‘ನಾನು ಶಿಕ್ಷಣ ಕ್ಷೇತ್ರದಲ್ಲಿ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಪದವೀಧರರ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೂ ಇದೆ.  ಮತದಾರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಮನವಿ ಮಾಡಿದರು. 

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ಗಣೇಶ್‌ಪ್ರಸಾದ್ ಇದ್ದರು.

ಶಾಲೆ–ಕಾಲೇಜುಗಳಲ್ಲಿ ಮತಯಾಚನೆ
ಆರ್.ಧ್ರುವನಾರಾಯಣ ಅವರು ಶುಕ್ರವಾರ ನಗರದ ವಿವಿಧ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಮಧು ಜಿ.ಮಾದೇಗೌಡ ಪರ ಮತಯಾಚಿಸಿದರು.

ಜೆಎಸ್ಎಸ್ ಮಹಿಳಾ ಕಾಲೇಜು, ವೈದ್ಯಕೀಯ ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೃಷಿ ಕಾಲೇಜು, ಸಂತ ಜೊಸೇಫ್ ಶಾಲೆ, ಸಂತ ಫ್ರಾನ್ಸಿಸ್ ಶಾಲೆ, ಸಂತಪೌಲರ ಶಾಲೆ, ಸಿದ್ದಾರ್ಥ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ನೀಡಿ ಪದವೀಧರರಲ್ಲಿ ಮತಯಾಚಿಸಿದರು.

‘ಪಕ್ಷದ ಅಭ್ಯರ್ಥಿ ಮಧು ಜಿ.ಮಾದೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕುವ ಮೂಲಕ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದರು. 

ಅಭ್ಯರ್ಥಿ ಮಧು ಜಿ.ಮಾದೇಗೌಡ  ಮಾತನಾಡಿದರು. ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು. 

‘ಪಕ್ಷದ ನಾಯಕರು ಹೆದರುವುದಿಲ್ಲ’
‘ದೇಶದಲ್ಲಿ ಐಟಿ, ಇಡಿ, ಸಿಬಿಐ ಬಿಜೆಪಿಯ ಅಂಗಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಬಿಜೆಪಿಯು ಇವುಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಸದೆಬಡಿಯುವ ಕೆಲಸ ಮಾಡುತ್ತಿದೆ’ ಎಂದು ಧ್ರುವನಾರಾಯಣ ದೂರಿದರು. 

ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದ್ದ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮೇಲೆ ಯಾವುದೇ ತನಿಖೆ ನಡೆಸದ ಸರ್ಕಾರ, ಪ್ರಿಯಾಂಕ್‌ ಖರ್ಗೆಗೆ ನೋಟಿಸ್ ನೀಡಿ ದ್ವೇಷ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲ; ದೇಶದಾದ್ಯಂತ ವಿರೋಧ ಪಕ್ಷಗಳನ್ನು ದಮನ ಮಾಡುವ ಯತ್ನ ಮಾಡಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದಾರೆ. ಬಿಜೆಪಿಗೆ ಇದನ್ನು ಬಿಟ್ಟು ಬೇರೆ ಅಸ್ತ್ರಗಳಿಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಿಜಾಬ್, ಹಲಾಲ್, ಪಠ್ಯ ಪುಸ್ತಕ ವಿಷಯಗಳನ್ನು ಮುಂದೆ ತರುತ್ತಿದೆ. ಇದೊಂದು ಭಂಡ ಸರ್ಕಾರ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷದ ನಾಯಕರು ಹೆದರುವುದಿಲ್ಲ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು