ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ಪಟ್ಟಣಿಗರಲ್ಲಿ ತಲ್ಲಣ

ಜಿಲ್ಲೆಯ ಮೊದಲ ಪ್ರಕರಣ ಗಡಿ ತಾಲ್ಲೂಕಿನಲ್ಲಿ ದಾಖಲು
Last Updated 20 ಜೂನ್ 2020, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:ಕೇರಳ ಹಾಗೂ ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಗುಂಡ್ಲುಪೇಟೆಯಲ್ಲಿ ಜಿಲ್ಲೆಯ ಮೊದಲ ಕೋವಿಡ್‌ ಪ್ರಕರಣ ದಾಖಲಾಗಿದೆ. ತಮಿಳುನಾಡಿಗೆ ಹೋಗುತ್ತಿದ್ದ ಚಾಲಕರೊಬ್ಬರಿಗೆ ಸೋಂಕು ತಗುಲಿರುವುದು ತಾಲ್ಲೂಕಿನ ಜನರಲ್ಲಿ ತಲ್ಲಣ ಉಂಟು ಮಾಡಿದೆ.

ಸೋಂಕಿತ ವ್ಯಕ್ತಿಯ ಮನೆ ಇರುವ, ಪಟ್ಟಣದ ಮಹಾದೇವಪ್ರಸಾದ್‌ ನಗರದ ಬೀದಿಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಯಾರ ಓಡಾಟಕ್ಕೂ ಅವಕಾಶ ನೀಡಲಾಗುತ್ತಿಲ್ಲ.

ಕೋವಿಡ್‌ –19 ದೃಢಪಟ್ಟಿರುವುದರಿಂದ ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಶನಿವಾರ ಪಟ್ಟಣದಲ್ಲಿ ವಹಿವಾಟು, ವಾಹನಗಳ ಸಂಚಾರ ಕಡಿಮೆ ಇತ್ತು.

ತಾಲ್ಲೂಕಿನಾದ್ಯಂತ ಹೆಚ್ಚಿನ ರೈತರು ತರಕಾರಿ ಬೆಳೆ ಬೆಳೆದಿದ್ದಾರೆ. ಪಕ್ಕದ ತಮಿಳುನಾಡು ಮತ್ತು ಕೇರಳಕ್ಕೆ ಪ್ರತಿದಿನ 100ರಿಂದ 200 ಲಾರಿಗಳ ಮೂಲಕ ಸಾಗಣಿಕೆ ಮಾಡಲಾಗುತ್ತಿದೆ. ತಮಿಳುನಾಡಿನ ಊಟಿ, ಈರೋಡು, ಕೊಯಮತ್ತೂರು, ಧರ್ಮಪುರಿ, ಸೇಲಂ ಮತ್ತು ಕೇರಳದ ತ್ರಿಶ್ಶೂರ್‌, ವಯನಾಡು, ಕೊಚ್ಚಿ, ಪಾಲಕ್ಕಾಡ್‌ ಸೇರಿದಂತೆ ಇತರೆ ಜಿಲ್ಲೆಗಳು ಗುಂಡ್ಲುಪೇಟೆಯ ತರಕಾರಿಯನ್ನೇ ಅವಲಂಬಿಸಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ಸರಕು ಸಾಗಣೆ ಮಾಡುವ ವಾಹನಗಳಿಗೆ ಹೊರ ರಾಜ್ಯಗಳಿಗೆ ಸಂಚರಿಸಲು ಅವಕಾಶ ನೀಡುವುದಕ್ಕೆ ತಾಲ್ಲೂಕಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಸೋಂಕು ಜಿಲ್ಲೆಗೂ ಕಾಲಿಡುವ ಸಾಧ್ಯತೆ ಇರುವುದರಿಂದ ಗಡಿಯನ್ನು ಬಂದ್‌ ಮಾಡುವಂತೆ ರೈತರು, ಸ್ಥಳೀಯರು ಒತ್ತಾಯಿಸಿದ್ದರು.

ಪ್ರತಿ ವಾಹನಗಳಿಗೆ ಸೋಂಕು ಸಿಂಪಡಣೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿತ್ತು. ಲಾಕ್‌ಡೌನ್‌ ಸಡಿಲಿಕೆ ಆದ ನಂತರ ವಾಹನಗಳ ತಪಾಸಣೆ ಕಟ್ಟು ನಿಟ್ಟಾಗಿ ನಡೆಯುತ್ತಿರಲಿಲ್ಲ ಎಂಬುದು ಸ್ಥಳೀಯರ ದೂರು.

‘ತಾಲ್ಲೂಕಿನಿಂದ ಸಾಗಣೆಯಾಗುತ್ತಿರುವ ತರಕಾರಿ ಲಾರಿಗಳು, ಚಾಲಕರಿಗೆ ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಬೇಕೆಂದು ಮನವಿ ಸಲ್ಲಿಸಿದ್ದರೂ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಅದರ ಪರಿಣಾಮವಾಗಿ ಜಿಲ್ಲೆಗೂ ಕೊರೊನಾ ಕಾಲಿಟ್ಟಿದೆ’ ಎಂದು ರೈತ ಮುಖಂಡರೊಬ್ಬರು ತಿಳಿಸಿದರು.

ಸೋಂಕಿತ ಚಾಲಕ ಅನೇಕ ವ್ಯಕ್ತಿಗಳ ಸಂಪರ್ಕ ಹೊಂದಿದ್ದರು. ಮಿನಿ ಲಾರಿಯಲ್ಲಿ ಮಂಡಿಗಳು, ವಿವಿಧ ಗ್ರಾಮಗಳಿಗೂ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಅವರು ಎಲ್ಲೆಲ್ಲಿ ಓಡಾಡಿದ್ದರೋ, ಯಾರನ್ನೆಲ್ಲ ಭೇಟಿಯಾಗಿದ್ದಾರೋ ಎಂಬ ಭಯ ಪಟ್ಟಣದ ನಿವಾಸಿಗಳನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT