ಶುಕ್ರವಾರ, ನವೆಂಬರ್ 22, 2019
20 °C
ವೈದ್ಯರ ಮೇಲೆ ಹಲ್ಲೆ ಖಂಡಿಸಿ ಖಾಸಗಿ ಆಸ್ಪತ್ರೆ‌ಗಳ ಒಪಿಡಿ, ಕ್ಲಿನಿಕ್‌ ಬಂದ್‌

ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ

Published:
Updated:
Prajavani

ಚಾಮರಾಜನಗರ: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನೀಡಿದ್ದ ಕರೆಯ ಅನ್ವಯ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ (ಒಪಿಡಿ) ಹಾಗೂ ಕ್ಲಿನಿಕ್‌ಗಳು ಬಂದ್‌ ಆಗಿದ್ದವು. 

ಜಿಲ್ಲಾ ಕೇಂದ್ರದ ಜೆಎಸ್‌ಎಸ್‌ ಆಸ್ಪತ್ರೆ ಸೇರಿದಂತೆ ಕೆಲವು ಖಾಸಗಿ ಆಸ್ಪತ್ರೆ ಹಾಗೂ ಹಾಗೂ ಕ್ಲಿನಿಕ್‌ಗಳು ಕಾರ್ಯನಿರ್ವಹಿಸಿದವು. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಎಂದಿನಂತೆ ಜನರಿಗೆ ಸೇವೆ ಒದಗಿಸಿದವು. ರೋಗ ಪತ್ತೆ ಕೇಂದ್ರಗಳು, ಔಷಧಿ ಅಂಗಡಿಗಳು ಕೂಡ ತೆರೆದಿದ್ದವು. ಹಾಗಾಗಿ ಜನರಿಗೆ ಹೆಚ್ಚಿನ ತೊಂದರೆಯಾಗಿಲ್ಲ.   

ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೆ ಭೇಟಿ ನೀಡುತ್ತಿದ್ದ ರೋಗಿಗಳು, ಮುಂಭಾಗದಲ್ಲಿ ಅಳವಡಿಸಿದ್ದ ಫಲಕ ನೋಡಿ ವಾಪಸ್‌ ತೆರಳಿದರು. ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡುವುದಾಗಿ ವೈದ್ಯಕೀಯ ಸಂಘ ಮೊದಲೇ ಘೋಷಿಸಿತ್ತು. ಕ್ಲಿನಿಕ್‌ಗಳು ಬಂದ್‌ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಕೊಂಚ ಹೆಚ್ಚಿತ್ತು. 

ಒಪಿಡಿಗಳು ಬಂದ್‌ ಆಗಿದ್ದರಿಂದ ರೋಗಿಗಳು ಸಮಸ್ಯೆ ಉಂಟಾಗಿರುವ ಬಗ್ಗೆ ಎಲ್ಲೂ ವರದಿಯಾಗಿಲ್ಲ. 

‘ಖಾಸಗಿ ಕ್ಲಿನಿಕ್‌ಗಳ ಬಂದ್‌ನಿಂದಾಗಿ ಎದುರಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಮೊದಲೇ ಸಿದ್ಧತೆ ಮಾಡಿಕೊಂಡಿದ್ದೆವು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳು ಲಭ್ಯವಿದ್ದವು. ಬಂದ್‌ನಿಂದಾಗಿ ಜಿಲ್ಲೆಯಲ್ಲಿ ಎಲ್ಲೂ ಸಮಸ್ಯೆಯಾಗಿಲ್ಲ. ಈ ಸಂಬಂಧ ನಮಗೆ ಯಾವುದೇ ವರದಿಯೂ ಬಂದಿಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್‌.ಸಿ.ರವಿ  ‘ಪ್ರಜಾವಾಣಿ’ಗೆ ತಿಳಿಸಿದರು. 

***

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಸೇವೆಗಳನ್ನು ನೀಡಿದ್ದೇವೆ. ಖಾಸಗಿ ಕ್ಲಿನಿಕ್‌, ಆಸ್ಪತ್ರೆಗಳು ಬಂದ್‌ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಸ್ವಲ್ಪ ಹೆಚ್ಚಿತ್ತು.
–ಡಾ.ಎನ್‌.ಸಿ.ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಖಾಸಗಿ ಆಸ್ಪತ್ರೆ ಒಪಿಡಿ, ಕ್ಲಿನಿಕ್‌ ಬಂದ್‌ ಆಗಿದ್ದರಿಂದ ಸಮಸ್ಯೆ ಆಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ವೈದ್ಯರು ಎಂದಿನಂತೆ ಕಾರ್ಯನಿರ್ವಹಿಸಿದ್ದೇವೆ. ಹೊರ ರೋಗಿಗಳ ಸಂಖ್ಯೆಯೂ ಹೆಚ್ಚಾಗಿರಲಿಲ್ಲ
–ಡಾ.ರಘುರಾಮ್ ಸರ್ವೇಗಾರ, ಜಿಲ್ಲಾಸ್ಪತ್ರೆ ಮುಖ್ಯ ಸರ್ಜನ್‌

ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆಗಳ ಒಪಿಡಿ ಹಾಗೂ ಕ್ಲಿನಿಕ್‌ಗಳನ್ನು ಬಂದ್‌ ಮಾಡಲಾಗಿತ್ತು. ತುರ್ತು ಚಿಕಿತ್ಸೆ ಮಾತ್ರ ನೀಡಿದ್ದೇವೆ
–ಡಾ.ಬಸವರಾಜೇಂದ್ರ, ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)