ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಹೂ, ತರಕಾರಿ ಸಸಿಗಳಿಗೆ ಕುಸಿದ ಬೇಡಿಕೆ

ಮಳೆಯ ತೊಯ್ದಾಟ, ಬಿತ್ತನೆ ಕಾರ್ಯಕ್ಕೆ ಹಿನ್ನಡೆ
Published 23 ಜೂನ್ 2024, 5:37 IST
Last Updated 23 ಜೂನ್ 2024, 5:37 IST
ಅಕ್ಷರ ಗಾತ್ರ

ಯಳಂದೂರು: ಜೂನ್ ತಿಂಗಳು ಮುಗಿಯುತ್ತ ಬಂದಿದೆ. ಮಳೆರಾಯನ ಆರ್ಭಟ ಕಾಣುತ್ತಿಲ್ಲ. ತರಕಾರಿ, ಹೂ ಮತ್ತು ಹಣ್ಣಿನ ನಾಟಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ವರ್ಷಧಾರೆಯ ನಿರೀಕ್ಷೆಯಲ್ಲಿ ಮುಗಿಲು ನೋಡುತ್ತ ಸಮಯ ದೂಡುತ್ತಿರುವ ರೈತ ಬೇಸಾಯ ಮುಂದೂಡಿ ವರುಣನ ಆಗಮನಕ್ಕೆ ಕಾಯುತ್ತಿದ್ದಾನೆ.

ತಾಲ್ಲೂಕಿನಾದ್ಯಂತ ತಿಂಗಳ ಆರಂಭದಲ್ಲಿ ಒಂದೆರಡು ಬಾರಿ ಸುರಿದ ಹದವಾದ ಮಳೆಗೆ ಕಳೆದೆರಡು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರೈತರು ಹರ್ಷದಿಂದಲೇ ಉತ್ತುವ, ಬಿತ್ತುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಉದ್ದು, ಹೆಸರು ಜೊತೆ ತರಕಾರಿ ಸಸಿಗಳ ಖರೀದಿಗೂ ಒಲವು ತೋರಿದ್ದರು. ಆದರೆ ಈಚೆಗೆ ಮತ್ತೆ ಉಷ್ಣಾಂಶ ಹೆಚ್ಚಾಗಿದ್ದು ಮಳೆ ಕೈಕೊಟ್ಟಿದೆ. ಪರಿಣಾಮ ಹೂ, ತರಕಾರಿ ಸಸಿಗಳಿಗೆ ಬೇಡಿಕೆ ತಗ್ಗಿದೆ.

ಪ್ರಸ್ತುತ ತರಕಾರಿಗಳ ದರ ಹೆಚ್ಚಿರುವುದರಿಂದ ಅಲ್ಫಾವಧಿಯಲ್ಲಿ ಕೊಯ್ಲಿಗೆ ಬರುವ, ಬದನೆ, ಟೊಮೆಟೊ ಸಸಿಗಳ ಬಿತ್ತನೆಗೆ ಮುಂದಾಗಿದ್ದರು. ಸಸಿಗಳ ಜೊತೆ ಹಾಗಲಕಾಯಿ, ಹಿರೇಕಾಯಿ, ಎಲೆಕೋಸು, ಊಟಿ ಬೀನ್ಸ್ ಬಿತ್ತನೆ ಬೀಜ ಮತ್ತು ಸಸಿ ಕೊಳ್ಳುವ ಧಾವಂತ ತೋರಿದ್ದರು.  

ತಳಿಗಳ ಆಧಾರದ ಮೇಲೆ ಸಸಿಗಳ ಬೆಲೆ ನಿಗದಿಪಡಿಸಲಾಗಿದೆ. ಮೆಣಸಿನಕಾಯಿ, ಬದನೆ, ಎಲೆ ಮತ್ತು ಹೂ ಕೋಸು ಸಸಿ ತಲಾ 50 ರಿಂದ 70 ಪೈಸೆ, ಚಂಡು ಹೂಗಳ ಸಸಿ ₹ 2, ಕ್ಯಾಪ್ಸಿಕಂ ಸಸಿ ₹ 6 ದರ ಇದೆ. ಕಳೆದ 2 ವರ್ಷಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಬಳಲಿದ್ದು, ಮಾರಾಟ ಹೆಚ್ಚು ಕಂಡು ಬಂದಿರಲಿಲ್ಲ. ಈ ಸಲ ನೀರಿನ ಲಭ್ಯತೆ ಕೊರತೆ ಇದ್ದರೂ ಸಸಿಗಳನ್ನು ಬೆಳೆದಿದ್ದು, ಹದ ಮಳೆ ಸುರಿದರೆ ಸಸಿಗಳು ಹೆಚ್ಚು ಬಿಕರಿಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಅಗರ ನರ್ಸರಿಯ ವಿಠಲ್.

ಜೂನ್ ಆರಂಭದಲ್ಲಿ ಮಳೆ ಸುರಿದಿದ್ದರಿಂದ 50 ಸಾವಿರ ಸಸಿಗಳು ಮಾರಾಟವಾಗಿತ್ತು. ಸಾಗುವಳಿದಾರರು ಬದನೆ, ಟೊಮೆಟೊ, ಹೂ ಸಸಿಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸಿದ್ದು ನಾಟಿಗೆ ಒಲವು ತೋರಿದ್ದಾರೆ. ಸ್ವಂತ ನೀರಾವರಿ ಮೂಲ ಹೊಂದಿರುವವರು ಈಗಾಗಲೇ ಕುಂಬಳ, ಬೀನ್ಸ್‌, ಸೋರೆ, ಪಳ್ಳದಕಾಯಿ ಸಸಿ ಹಾಕಿದ್ದಾರೆ. ಕಾಲಕಾಲಕ್ಕೆ ಮಳೆ ಚನ್ನಾಗಿ ಸುರಿದರೆ ನರ್ಸಿ ಮಾಲೀಕರಿಗೂ ತುಸು ಲಾಭ ಕೈಸೇರುತ್ತದೆ ಎಂದು ಅವರು ಹೇಳಿದರು.

ಚೆಂಡು ಮತ್ತು ಸುಗಂಧರಾಜಗೆ ಬೇಡಿಕೆ

ಆಗಸ್ಟ್‌ನಿಂದ ಹಬ್ಬ ಮತ್ತು ಶುಭ ಕಾರ್ಯಗಳು ಆರಂಭವಾಗುತ್ತವೆ. ವರ ಮಹಾಲಕ್ಷ್ಮಿ, ಶ್ರಾವಣ, ದಸರಾ, ದೀಪಾವಳಿ ಮತ್ತು ಮಹಾಲಯ ಆಮಾವಾಸ್ಯೆ ಸೇರಿ ಹಬ್ಬಗಳ ಸಾಲು ಆರಂಭವಾಗುತ್ತದೆ. ಹಾಗಾಗಿ, ರೈತರು ನಾಟಿ ಮಾಡಿದ 50 ದಿನಗಳಲ್ಲಿ ಕೊಯ್ಲಿಗೆ ಬರುವ  ಚೆಂಡು ಮತ್ತು ಸುಗಂಧರಾಜ ಹೂಗಳನ್ನು ಬೆಳೆಯಲು ರೈತರು ಉತ್ಸುಕರಾಗಿದ್ದಾರೆ.

ಕಡಿಮೆ ಸಮಯದಲ್ಲಿ ಬಿಡಿಸಿ ಸ್ಥಳೀಯ ಮತ್ತು ಪಟ್ಟಣ ಪ್ರದೇಶಗಳಲ್ಲೂ ಮಾರಾಟ ಮಾಡುವ ಉದ್ಧೇಶದಿಂದ ಹೂ ಬೆಳೆಯುವ ಕ್ಷೇತ್ರ ಹಿಗ್ಗುತ್ತ ಸಾಗಿದೆ ಎಂದು ಹೊನ್ನೂರು ಕೃಷಿಕ ಪ್ರಸನ್ನ ಹೇಳಿದರು.

ಕೃಷಿಕರಿಗೆ ಸಸಿ ನೀಡುವುದರ ಜೊತೆಗೆ ರೋಗ ರುಜಿನ ಕಾಣಿಸಿಕೊಂಡಾಗ ಕೀಟ ನಿಯಂತ್ರಣ ಮಾಡುವ ಬಗ್ಗೆ ಮಾಹಿತಿ ಸಿಗುತ್ತದೆ. ಹೀಗಾಗಿ, ನರ್ಸರಿಯಲ್ಲಿ ತಂದು ಸಸಿ ನೆಡುತ್ತೇವೆ ಎಂದು ತರಕಾರಿ ಬೆಳೆಗಾರ ಚಂಗಚಹಳ್ಳಿ ಬೆಳೆಗಾರ ಮಹದೇವ ಹೇಳಿದರು.

‘ಮಳೆ ಬಂದರೆ ಸಸಿ ಮಾರಾಟ’

ಹಸಿರು ಮನೆ ನಿರ್ಮಿಸಿ ನರ್ಸರಿಯಲ್ಲಿ ಸಸಿ ಬೆಳೆಸಲು ಹೈಬ್ರಿಡ್ ಬೀಜ ಕೋಕೊಪಿಟ್ ಕೂಲಿ ವೆಚ್ಛವನ್ನು ಭರಿಸಬೇಕಿದೆ. ಸಸಿಗಳನ್ನು ಪೈಸೆಗಳ ಲೆಕ್ಕದಲ್ಲಿ ಮಾರಾಟ ಮಾಡಬೇಕು. ಮಳೆ ಬಂದರೆ ಸಸಿಗೆ ಬೇಡಿಕೆ ಕುದುರುತ್ತದೆ. ಇಲ್ಲವಾದರೆ ಸಸಿ ಬಲಿತು ಆದಾಯ ಕುಸಿಯುತ್ತದೆ ಎನ್ನುತ್ತಾರೆ ಸೋನ ನರ್ಸರಿ ಫಾರಂ ಮಾಲೀಕ ಅಗರ ವಿಠಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT