ಶನಿವಾರ, ಆಗಸ್ಟ್ 13, 2022
24 °C
ತೆಂಗು ಸಂಸ್ಕರಣ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ಗಮನ ಸೆಳೆದ ರೈತ ಮುಖಂಡರು

ರೈತರ ಹಿತ ಕಾಪಾಡಿ; ಸಚಿವರು, ಶಾಸಕರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ದೇಶದ, ರಾಜ್ಯದ ರೈತಾಪಿ ವರ್ಗದ ಹಿತವನ್ನು ಕಾಪಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಮನವಿಯನ್ನು ರೈತ ಮುಖಂಡರು ಸಚಿವರು, ಶಾಸಕರಿಗೆ ಮಾಡಿದರು. ಅಲ್ಲದೇ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘವು ಕಾಳನಹುಂಡಿ ರಸ್ತೆಯ ಮುಣಚಹಳ್ಳಿಯಲ್ಲಿ ಸ್ಥಾಪಿಸಿರುವ ತೆಂಗು ಸಂಸ್ಕರಣ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ತೆಂಗು ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಮಹೇಶ ಪ್ರಭು ಹಾಗೂ ಗಾಂಧಿವಾದಿ ಪ.ಮಲ್ಲೇಶ್‌ ಅವರು ಈ ವಿಚಾರಗಳ ಬಗ್ಗೆ ಸಚಿವರ ಗಮನ ಸೆಳೆದರು. 

ಕಾರ್ಯಕ್ರಮದಲ್ಲಿ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪುತ್ಥಳಿ ಅನಾವರಣ ಮಾಡಿ ಮಾತನಾಡಿದ ಮಲ್ಲೇಶ್‌ ಅವರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಭೂಮಿಯನ್ನು ಕಾರ್ಪೊರೇಟ್‌ ಸಂಸ್ಥೆಗಳಿಗೆ ಮಾರುವುದಕ್ಕೆ ಹೊರ‌ಟಿವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಆದರೆ, ರೈತರಿಗೆ ಅದರಲ್ಲಿ ಸ್ಥಾನವೇ ಇಲ್ಲ. ಕೃಷಿಕರು, ಅವರ ಮಕ್ಕಳು ಯಾವ ರೀತಿಯ ಶಿಕ್ಷಣ ಪಡೆಯಬೇಕು ಅಥವಾ ಅವರಿಗೆ ಎಂತಹ ಶಿಕ್ಷಣದ ಅಗತ್ಯವಿದೆ ಎಂಬುದರ ಉಲ್ಲೇಖವೇ ಇಲ್ಲ’ ಎಂದರು. 

‘ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ಸ್ಥಾಪಿಸಿರುವ ರೈತ ಸಂಘಟನೆ ಇಬ್ಭಾಗ ಆಗದಿದ್ದರೆ ಮತ್ತು ದಲಿತ ಸಂಘಟನೆಗಳು ಒಡೆಯದೇ ಹೋಗಿದ್ದರೆ, ರಾಜ್ಯದಲ್ಲಿ ಬೇರೆ ಪಕ್ಷಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ರೈತ ಸಂಘಟನೆ ಇನ್ನಷ್ಟು ಬಲಬರಬೇಕು’ ಎಂದು ಅವರು ಆಶಿಸಿದರು. 

ಪ್ರಸ್ತಾವಿಕವಾಗಿ ಮಾತನಾಡಿದ ಚಾಮರಾಜನಗರ ತಾಲ್ಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಂ.ಮಹೇಶ್‌ ಪ್ರಭು ಅವರು ರಾಜ್ಯದ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಬಿಚ್ಚಿಟ್ಟರು.

‘ರೈತರಿಗೆ ತೊಂದರೆಯಾಗುವಂತಹ ಕಾನೂನುಗಳನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದಾಗಿ ಎಪಿಎಂಸಿಗಳಿಗೆ ಯಾವುದೇ ಅಧಿಕಾರ ಇಲ್ಲದಂತಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ಇದ್ದರೂ ಏನೂ ಪ್ರಯೋಜನವಾಗುವುದಿಲ್ಲ. ದೇಶಕ್ಕೆ ಆಹಾರ ಭದ್ರತೆ ಒದಗಿಸುವ ರೈತ ಸಂಕಷ್ಟಕ್ಕೆ ಸಿಲುಕುತ್ತಾನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ತಿದ್ದುಪಡಿ ಕಾಯ್ದೆಗಳಿಂದಾಘಿ ಕಾರ್ಪೊರೇಟ್‌ ಸಂಸ್ಥೆಗಳು ಕೃಷಿ ಕ್ಷೇತ್ರಕ್ಕೆ ಇಳಿದು, ನಿಜವಾದ ರೈತರಿಗೆ ತೊಂದರೆಯಾಗಲಿದೆ. ಅವರೊಂದಿಗೆ ಪೈಪೋಟಿ ನಡೆಸುವ ಸಾಮರ್ಥ್ಯ ರೈತರಿಗೆ ಹಾಗೂ ಸಂಘಟನೆಗಳಿಗೆ ಇಲ್ಲ’ ಎಂದು ಹೇಳಿದರು.

‘ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸಹಾಯ ಮಾಡಬೇಕು. ಈ ಘಟಕಕ್ಕೆ ಸರ್ಕಾರ ಸಹಕಾರ ನೀಡಿದೆ. ಇದೇ ರೀತಿ ಎಲ್ಲ ಬೆಳೆಗಳ ವಿಚಾರದಲ್ಲೂ ಸರ್ಕಾರ ನೆರವಾಗಬೇಕು’ ಎಂದು ಮಹೇಶ್‌ ಪ್ರಭು ಅವರು ಮನವಿ ಮಾಡಿದರು. 

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ‘ಆರ್ಥಿಕ ಮುಕ್ತ ನೀತಿ, ಉದಾರಿಕರಣದಿಂದಾಗಿ ರೈತರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೂ ದುಡಿಯುತ್ತಿದ್ದ ರೈತನ ಶ್ರಮವನ್ನು ಲೂಟಿ ಮಾಡಲಾಗುತ್ತಿತ್ತು. ಈಗ ಸರ್ಕಾರ ರೂಪಿಸುತ್ತಿರುವ ಹೊಸ ಹೊಸ ಕಾನೂನುಗಳು ರೈತನನ್ನೇ ಲೂಟಿ ಮಾಡುವಂತೆ ಇವೆ. ಕೃಷಿ ಈ ದೇಶದ ಸಂಸ್ಕೃತಿ ಅದನ್ನೇ ಜೀವನವನ್ನಾಗಿಸಿಕೊಂಡಿರುವ ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸವನ್ನು ಸರ್ಕಾರ, ಜನಪ್ರತಿನಿಧಿಗಳು ಮಾಡಬಾರದು’ ಎಂದರು. 

ಶಾಸಕರ ಪರ –ವಿರೋಧ ಮಾತು

ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಹನೂರಿನ ಕಾಂಗ್ರೆಸ್‌ ಶಾಸಕ ಆರ್‌.ನರೇಂದ್ರ ಅವರು ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಾತನಾಡಿದರೆ, ಗುಂಡ್ಲುಪೇಟೆಯ ಬಿಜೆಪಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ಪರೋಕ್ಷವಾಗಿ ಸಮರ್ಥಿಸಿಕೊಂಡರು.  

‘ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರೈತ ವಿರೋಧಿ. ಇದರಿಂದ ಉದ್ಯಮಿಗಳಿಗೆ, ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ. ರೈತರು ಕೃಷಿಯಿಂದ ವಿಮುಖರಾಗುತ್ತಾರೆ’ ಎಂದು ನರೇಂದ್ರ ಅವರು ಹೇಳಿದರು. 

ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿ.ಎಸ್‌.ನಿರಂಜನ ‌ಕುಮಾರ್ ಅವರು, ‘ರೈತರ ಹಿತದೃಷ್ಟಿಯನ್ನು ಇಟ್ಟುಕೊಂಡೇ ಸರ್ಕಾರ ಕಾನೂನು ಮಾಡುತ್ತದೆ. ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚೆ ನಡೆಸಲು ಅವಕಾಶ ಇದೆ. ಈ ವೇದಿಕೆಯಲ್ಲಿ ಚರ್ಚೆ ನಡೆಯುವುದು ಅಷ್ಟು ಸರಿ ಕಾಣುವುದಿಲ್ಲ. ಸದನದಲ್ಲಿ ಸರ್ಕಾರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ತಪ್ಪುಗಳಿದ್ದರೆ, ಅಲ್ಲಿ ಚರ್ಚಿಸಿ ತಿದ್ದುಪಡಿ ಮಾಡುವುದಕ್ಕೆ ಅವಕಾಶ ಇದೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು