ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರೆದ ಹೋರಾಟ; ರೈತರಿಂದ ಪಂಜಿನ ಮೆರವಣಿಗೆ

Last Updated 19 ಸೆಪ್ಟೆಂಬರ್ 2021, 4:26 IST
ಅಕ್ಷರ ಗಾತ್ರ

ಚಾಮರಾಜನಗರ: ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶರವಣನ್‌ ಅವರನ್ನು ರಾಜ್ಯದಿಂದ ಹೊರಗಡೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳು ಆರನೇ ದಿನವಾದ ಶನಿವಾರವೂ ಪ್ರತಿಭಟನೆ ಮುಂದುವರಿಸಿದರು.

ಶರವಣನ್‌ ಅವರ ವರ್ಗಾವಣೆ ಸಂಬಂಧಸಕ್ಕರೆ ಕಾರ್ಖಾನೆಯಿಂದ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸ್ಪಷ್ಟವಾದ ಸೂಚನೆ ಬಾರದೇ ಇದ್ದುದರಿಂದ ಸಂಜೆಯವರೆಗೂ ಜಿಲ್ಲಾಡಳಿತ ಭವನದ ಪ್ರವೇಶದ್ವಾರದ ಎದುರು ಧರಣಿ ಕುಳಿತಿದ್ದ ರೈತ ಮುಖಂಡರು ಸಂಜೆ, ನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೂ ಪಂಜಿನ ಮೆರವಣಿಗೆ ನಡೆಸಿದರು. ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ‘ಸಕ್ಕರೆ ಕಾರ್ಖಾನೆ ಆಡಳಿತ ರೈತ ವಿರೋಧಿ ಹೇಳಿಕೆಗಳನ್ನು ಕೊಟ್ಟು ರೈತರನ್ನೇ ರೈತರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ರೈತರನ್ನೇ ಒಡೆಯುವ ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಶರವಣನ್‌ ಅವರನ್ನು ವರ್ಗಾವಣೆ ಮಾಡುವ ಭರವಸೆಯನ್ನು ಸಂಸ್ಥೆಯು ಜಿಲ್ಲಾಧಿಕಾರಿ ಅವರ ಮುಂದೆ ನೀಡಿತ್ತು. ಆದರೆ, ಇದುವರೆಗೂ ವರ್ಗಾವಣೆ ಮಾಡಿಲ್ಲ. ವರ್ಗಾವಣೆ ಮಾಡಿರುವುದಾಗಿ ಪತ್ರ ಕೊಟ್ಟಿದ್ದರೂ, ಅದರಲ್ಲಿ ಯಾವಾಗಿಂದ ವರ್ಗಾವಣೆ ಮಾಡಲಾಗಿದೆ ಎಂದು ದಿನಾಂಕ ನಮೂದಿಸಿಲ್ಲ. ಅವರು ರಾಜ್ಯದಿಂದ ತೆರಳುವವರೆಗೆ ಹೋರಾಟ ಮುಂದುವರಿಯಲಿದೆ. ಭಾನುವಾರ ಮೊಂಬತ್ತಿ ಮೆರವಣಿಗೆ ಮಾಡುತ್ತೇವೆ. ಸೋಮವಾರ ಜಿಲ್ಲೆಯನ್ನು ನಾಲ್ಕೂ ಕಡೆಗಳಿಂದ ಸಂಪರ್ಕಿಸುವ ಹೆದ್ದಾರಿಯ ಮೂಲಕ ಪಂಜಿನ ಚಳವಳಿ ನಡೆಸಲಾಗುವುದು. ರಾತ್ರಿ 12 ಗಂಟೆಗೆ ನಗರದಲ್ಲಿ ಪಂಜು ಹಿಡಿದು ಪ್ರತಿಭಟನೆ ನಡೆಸುತ್ತೇವೆ. ರೈತ ವಿರೋಧಿ ಹೇಳಿಕೆ ನೀಡಿರುವ ಶರವಣನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ಮುಂದುವರೆದರೆ ಮುಂದೆ ನಡೆಯುವ ಅನಾಹುತಗಳಿಗೆ ಬಣ್ಣಾರಿ ಸಕ್ಕರೆ ಕಾರ್ಖಾನೆ ಹೊಣೆಯಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಹಾಡ್ಯ ರವಿ, ಪಟೇಲ್ ಶಿವಮೂರ್ತಿ, ಗುರುಪ್ರಸಾದ್, ಕುಂದಕೆರೆ ಸಂಪತ್ತು, ನಾಗರಾಜ್‌, ರವಿ, ಮಾದಪ್ಪ ದೇವೇಂದ್ರಕುಮಾರ, ಕುರುಬೂರ್ ಸಿದ್ದೇಶ್, ಪ್ರದೀಪ್, ಗೌರಿಶಂಕರ್, ಪಪ್ಪು, ಗುರುಸ್ವಾಮಿ, ಕುಮಾರ್, ಶಂಭು, ದೇವನಪುರ ನಂಜುಂಡಸ್ವಾಮಿ, ಅಪ್ಪಣ್ಣ, ವೀರೇಶ್, ಬನ್ನೂರು, ಕೃಷ್ಣಪ್ಪ, ಹೆಗ್ಗೋಠಾರ ಶಿವಸ್ವಾಮಿ, ಕುಮಾರ್ ಇದ್ದರು.

ಆಸ್ಪತ್ರೆ ಎದುರು ಪ್ರತಿಭಟನೆ

ಜಿಲ್ಲಾಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಬೈಕ್‌ನಲ್ಲಿ ತೆರಳುವ ರೋಗಿಯನ್ನು ತಡೆದು ಸಂಚಾರ ಪೊಲೀಸರು ದಂಡ ವಸೂಲಿ ಮಾಡಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹಾಗೂ ಇತರರು ಜಿಲ್ಲಾಸ್ಪತ್ರೆಯ ಎದುರಿನ ಜೋಡಿ ರಸ್ತೆಯಲ್ಲಿ ಶನಿವಾರ ರಾತ್ರಿ ದಿಢೀರ್‌ ಪ್ರತಿಭಟನೆ ನಡೆಸಿದರು. ಸಾರ್ವಜನಿಕರು ಕೂಡ ಅವರೊಂದಿಗೆ ಪ್ರತಿಭಟನೆಯಲ್ಲಿ ಕೈಜೋಡಿಸಿದರು.

ಸ್ಥಳಕ್ಕೆ ಬಂದ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಮಹೇಶ್‌ ಅವರು, ಪ್ರತಿಭಟನಕಾರರ ಮನವೊಲಿಸಲು ಯತ್ನಿಸಿದರು.

ಪೊಲೀಸರು ಮಾನವೀಯತೆ ಇಲ್ಲದೆ ವರ್ತಿಸುತ್ತಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಹೆಲ್ಮೆಟ್‌ ಹಾಕಿಲ್ಲ ಎಂದು ಅವರನ್ನು ತಡೆದು ದೌರ್ಜನ್ಯ ಮಾಡುತ್ತಿದ್ದರೆ. ಜಿಲ್ಲಾಸ್ಪತ್ರೆ ಎದುರು ಯಾವುದೇ ಕಾರಣಕ್ಕೂ ದಂಡ ವಸೂಲಿ ಮಾಡಬಾರದು ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT