ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಗೆರೆಗೆ ಪೂರ್ಣ ನೀರು ತುಂಬಿಸಲು ರೈತರ ಆಗ್ರಹ

ಮರಿಯಾಲದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ; ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮನವೊಲಿಗೆ
Last Updated 12 ಅಕ್ಟೋಬರ್ 2021, 12:21 IST
ಅಕ್ಷರ ಗಾತ್ರ

ಚಾಮರಾಜನಗರ: ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಬರುವ ತಾಲ್ಲೂಕಿನ ಮಾಲಗೆರೆಗೆ ಪೂರ್ಣಪ್ರಮಾಣದಲ್ಲಿ ನೀರು ತುಂಬಿಸಿಲ್ಲ ಎಂದು ಆರೋಪಿಸಿ ಮಾಲಗೆರೆ ನೀರಾಭಿವೃದ್ಧಿ ಹೋರಾಟ ಸಮಿತಿಯ ಆಶ್ರಯದಲ್ಲಿ ರೈತ ಮುಖಂಡರು, ಸುತ್ತಮುತ್ತಲಿನ ಗ್ರಾಮಸ್ಥರು ಮರಿಯಾಲದ ಸಮೀಪ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮರಿಯಾಲದ ಸಮೀಪದ ರಸ್ತೆ ತಡೆ ನಡೆಸಿ ಕೆಲ ಕಾಲ ವಾಹನನಗಳನ್ನು ತಡೆದ ಪ್ರತಿಭಟಕಾರರು ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಲಗೆರೆ ಸೇರಿದಂತೆ ತಾಲ್ಲೂಕಿನ ಕೆರೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸುತ್ತಿಲ್ಲ. ಶೇ 70, ಶೇ 80ರಷ್ಟು ತುಂಬಿಸಲಾಗುತ್ತಿದೆ ಎಂದು ಪ್ರತಿಭನಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಬಸವಣ್ಣ ಮಾತನಾಡಿ ‘ಆರಂಭದ ನಾಲ್ಕು ವರ್ಷಗಳ ಕಾಲ ಮಾತ್ರ ಕೆರೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗಿತ್ತು. ಮೂರು ವರ್ಷಗಳಿಂದಲೂ ಶೇ 70ರಷ್ಟು, 80ರಷ್ಟು ತುಂಬಿಸಲಾಗುತ್ತಿದೆ. ಕೋಡಿ ಬಿದ್ದರಷ್ಟೇ ಕೆರೆ ತುಂಬಿದೆ ಎಂದರ್ಥ. ಅಧಿಕಾರಿಗಳು ಸುಳ್ಳು ಹೇಳುವುದು ಅಥವಾ ಯಾರದೋ ಒತ್ತಡಕ್ಕೆ ಮಣಿದು ಇಂತಹ ಕೆಲಸ ಮಾಡಬಾರದು. ನಾವು ಹೋರಾಟ ಮಾಡಿದ್ದಕ್ಕಾಗಿ ಕೆರೆಗಳಿಗೆ ನೀರು ತುಂಬುತ್ತಿದೆ. ಯಾವುದೇ ನೆಪ ಹೇಳದೆ ಕೆರೆಗಳನ್ನು ಪೂರ್ಣವಾಗಿ ತುಂಬಿಸಬೇಕು’ ಎಂದು ಆಗ್ರಹಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಭೇಟಿ ನೀಡಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ.ಪಾಟೀಲ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌, ಸಹಾಯಕ ಎಂಜಿನಿಯರ್‌ ಮಹೇಶ್‌ ಅವರು ಪ್ರತಿಭಟನನಿರತರ ಮನವೊಲಿಸಲು ಉತ್ನಿಸಿದರು.

ಈ ಸಂದರ್ಧದಲ್ಲಿ ಮಾತನಾಡಿದ ಮಂಜುನಾಥ್‌ ಅವರು, ‘ಜುಲೈ 23ರಂದು ಹಿಂದಿನ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವುದರ ಬಗ್ಗೆ ಶಾಸಕರು, ಅಧಿಕಾರಿಗಳ ಸಭೆ ನಡೆದಿತ್ತು. ಈ ವರ್ಷ 1, 2 ಹಾಗೂ ನಾಲ್ಕನೇ ಹಂತದ ಕೆರೆಗಳಿಗೆ ಶೇ 70ರಷ್ಟು ನೀರು ತುಂಬಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಶೇ 70ರಷ್ಟು ನೀರು ತುಂಬಿಸಲಾಗಿದೆ. ಸ್ಥಳೀಯರ ಮನವಿ ಮೇರೆಗೆ ಮತ್ತೂ 10 ದಿನಗಳ ಕಾಲ ನೀರು ಹರಿಸಿ ಶೇ 80ರಷ್ಟು ನೀರು ತುಂಬಿಸಲಾಗಿದೆ. ಹುತ್ತೂರು ಕೆರೆಯಿಂದ ತಾಲ್ಲೂಕಿನ ಎರಡು ಕೆರೆಗಳು ಸೇರಿದಂತೆ ಇನ್ನೂ 11 ಕೆರೆಗಳಿಗೆ ನೀರು ತುಂಬಿಸಬೇಕಾಗಿರುವುದರಿಂದ ಇದೇ 2ರಿಂದ ಹುತ್ತೂರು ಕೆರೆಗೆ ನೀರು ಹರಿಸಲಾಗುತ್ತಿದೆ’ ಎಂದು ಹೇಳಿದರು.

ಇದಕ್ಕೆ ಒಪ್ಪದ ಪ್ರತಿಭಟನಕಾರರು, ಈ ವರ್ಷವೇ ಕೆರೆಯನ್ನು ಭರ್ತಿ ಮಾಡಬೇಕು ಎಂದು ಪಟ್ಟು ಹಿಡಿದರು. ಮುಂದಿನ ವರ್ಷ ಭರ್ತಿ ಮಾಡುವ ಬಗ್ಗೆ ಲಿಖಿತ ಭರವಸೆ ನೀಡುವಂತೆ ಆಗ್ರಹಿಸಿದರು.

‘ಈ ವರ್ಷ ನೀರು ತುಂಬಿಸುವುದು ಕಷ್ಟ ಸಾಧ್ಯ’ ಎಂದು ಹೇಳಿದ ಅಧಿಕಾರಿಗಳು ‘2022–23ನೇ ಸಾಲಿನಲ್ಲಿ ಮಾಲಗೆರೆಗೆ ಸಂಪೂರ್ಣವಾಗಿ ನೀರು ತುಂಬಿಸಲಾಗುವುದು’ ಎಂದು ಲಿಖಿತ ಭರವಸೆ ನೀಡಿದರು. ಆ ನಂತರ ಪ್ರತಿಭಟನೆ ವಾಪಸ್‌ ಪಡೆಯಲಾಯಿತು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ, ಮುಖಂಡರಾದ ಮೂಡ್ನಾಪುರ ಮಹೇಶ್‌, ಮರಿಯಾಲ ಮಹೇಶ್‌, ಸಿದ್ದರಾಜು, ಆಲೂರು ಸಂತೋಷ್‌, ಕಾಡಹಳ್ಳಿ ಮಹೇಶ್‌, ದೇಮಹಳ್ಳಿ ಪ್ರಕಾಶ್‌ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT