ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಎಕರೆ ಅರಣ್ಯ ಪ್ರದೇಶ ಭಸ್ಮ

ಬಿಆರ್‌ಟಿ: ಕೊಳ್ಳೇಗಾಲ ವಲಯದಲ್ಲಿ ಬೆಂಕಿ, ಕಿಡಿಗೇಡಿಗಳ ಕೃತ್ಯ ಶಂಕೆ
Last Updated 30 ಮಾರ್ಚ್ 2020, 15:24 IST
ಅಕ್ಷರ ಗಾತ್ರ

ಹನೂರು: ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯದ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಕಾಡು ಸುಟ್ಟು ಹೋಗಿದೆ.

ಗುಂಡಾಲ್‌ ಬಳಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ಸಂಜೆಯವರೆಗೂ ಉರಿದಿದೆ. ಇದು ಕಿಡಿಗೇಡಿಗಳ ಕೃತ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅದಾಗಲೇ, ಹತ್ತಾರು ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಕಣ್ಣೂರು ಬೀಟ್‌ನ ಗುಂಡಾಲ್‌ ಜಲಾಶಯದ ಸುತ್ತಮುತ್ತಲಿನ ಪ್ರದೇಶ ಧಗಧಗನೆ ಹೊತ್ತಿ ಉರಿದಿದೆ. ಈ ಭಾಗದಲ್ಲಿ ಕುರುಚಲು ಕಾಡು ಹೆಚ್ಚಾಗಿದ್ದು, ದೊಡ್ಡ ಮರಗಳಿಲ್ಲ. ಹಾಗಾಗಿ ಹೆಚ್ಚಿನ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಸಂಜೆಯವರೆಗೂ ಬೆಂಕಿ ಉರಿಯುತ್ತಿತ್ತು.ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಹನೂರು ಭಾಗದ ಬಹುತೇಕ ಗ್ರಾಮಗಳಿಗೆ ಗೋಚರಿಸುತ್ತಿತ್ತು. ಕೆಲವು ದಿನಗಳಿಂದೀಚೆಗೆ ಈ ಭಾಗದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಆದರೆ, ಈ ಪ್ರಮಾಣದಲ್ಲಿ ಅರಣ್ಯ ಸುಟ್ಟಿರಲಿಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ ಕುಮಾರ್‌, ‘ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಯಾಚರಣೆ ನಡೆಸಲಾಗಿದ್ದು, ನಂದಿಸಲಾಗಿದೆ. ಸಿಬ್ಬಂದಿ ಈಗಲೂ ಸ್ಥಳದಲ್ಲಿ ಬೀಡುಬಿಟ್ಟು ನಿಗಾ ಇಟ್ಟಿದ್ದಾರೆ. ಇದು ಕಿಡಿಗೇಡಿಗಳ ಕೃತ್ಯ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಎಷ್ಟು ಪ್ರದೇಶ ಸುಟ್ಟಿದೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT