ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರದಲ್ಲಿ ಸ್ವರಾಜ್ಯ ಸಮಾವೇಶ: ಕಾಂಗ್ರೆಸ್‌, ಜೆಡಿಎಸ್‌ ವಿರುದ್ಧ ರಣಕಹಳೆ

ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ನಾಂದಿ ಹಾಡಿದ ಬಿಜೆಪಿ
Last Updated 1 ಡಿಸೆಂಬರ್ 2020, 16:15 IST
ಅಕ್ಷರ ಗಾತ್ರ

ಕೊಳ್ಳೇಗಾಲ/ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರಕ್ಕೆ ಬಿಜೆಪಿಯು ಜಿಲ್ಲೆಯಲ್ಲಿ ಮಂಗಳವಾರ ಚಾಲನೆ ನೀಡಿದ್ದು, ಗ್ರಾಮ ಸ್ವರಾಜ್ಯ ಸಮಾವೇಶಗಳ ಮೂಲಕ ಗ್ರಾಮೀಣ ಭಾಗದ ಜನರನ್ನು ತಲುಪುವ ಯತ್ನ ಮಾಡಿದೆ.

ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗಳಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಮಾವೇಶಗಳಲ್ಲಿ ಸಚಿವರು, ಮುಖಂಡರು ಹಾಗೂ ಶಾಸಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಎರಡೂ ಕಡೆಗಳಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ‌ ಅವರು, ‘ರಾಜ್ಯವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಕ್ತವಾಗಿ ಮಾಡುವುದೇ ನಮ್ಮ ಗುರಿ’ ಎಂದು ಘೋಷಿಸಿದರು.

ಕೊಳ್ಳೇಗಾಲದಲ್ಲಿ ಮಾತನಾಡಿ, ‘ಕಾಂಗ್ರೆಸ್ ಮತ್ತು ಜೆಡಿಎಸ್ ಜನ ವಿರೋಧಿ ಪಕ್ಷಗಳು. ಬಿಜೆಪಿಯು ಜನರ ಮಧ್ಯದಲ್ಲಿದ್ದು ವರ ಕಷ್ಟ ಸುಖಗಳನ್ನು ಅರಿತು ಕೆಲಸ ಮಾಡುತ್ತದೆ. ಬಡಜನರ ಏಳಿಗೆಗೆ ಶ್ರಮಿಸುತ್ತದೆ’ ಎಂದರು.

ಗುಂಡ್ಲುಪೇಟೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಕಳೆ ತುಂಬಾ ಅಪಾಯಕಾರಿ, ಅದನ್ನು ಬುಡಸಮೇತ ಕೀಳುವ ಸುವರ್ಣಾಕಾಶ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒದಗಿ ಬಂದಿದೆ. ಇದನ್ನು ಕಾರ್ಯಕರ್ತರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಹಳ್ಳಿಯಿಂದ ದಿಲ್ಲಿಯವರೆಗೆ ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಕೂಡ ನನಸಾಗುತ್ತದೆ.ಪ್ರತಿಯೊಂದು ಗ್ರಾಮಗಳಲ್ಲಿಯೂ ಸಹ ತಳಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಬೇಕು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ 100ಕ್ಕೆ 90ರಷ್ಟು ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಜನರ ಪರವಾಗಿ ಕೆಲಸ ಮಾಡಬೇಕು’ ಎಂದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ನೂ ನಿದ್ದೆಯಿಂದ ಎದ್ದಿಲ್ಲ. ಎದ್ದೇಳುವ ಮೊದಲು ಚುನಾವಣೆ ಮುಗಿಸಬೇಕು. ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಇನ್ನು ಮುಂದೆ ಎದ್ದೇಳುವ ಸೂಚನೆಯೇ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಎರಡು ಬಣ ಇದೆ. ಗ್ರಾಮ ಪಂಚಾಯಿತಿ ಚುನಾವಣೆ ನೇತೃತ್ವ ವಹಿಸಲು ಇಬ್ಬರು ಮುಂದೆ ಬರುತ್ತಿಲ್ಲ. ಜೆಡಿಎಸ್ ಸ್ಥಿತಿ ಹೀನಾಯವಾಗಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಮುಂದೆ ನಡೆಯುವ ತಾಲ್ಲೂಕು, ಜಿಲ್ಲಾ ಪಂಚಾಯಿತಿಯನ್ನು ಸುಲಭವಾಗಿ ಗೆಲ್ಲಬಹುದು. ಆದ್ದರಿಂದ ಇದನ್ನು ಸವಾಲಾಗಿ ಸ್ವೀಕರಿಸಬೇಕು’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ‘ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಜನರಿಗೆ ತಿಳಿದಿದೆ. ಅವರ ಯೋಜನೆಗಳು ಜನರ ಪರವಾಗಿದೆ. ರೈತರ ಪರವಾಗಿ ನಿಂತಿರುವ ಸರ್ಕಾರ ಇದು. ಚುನಾವಣೆ ಬಂದರೆ ಮಾತ್ರ ಕೆಲವರಿಗೆ ಜನಾಂಗದ ನಾಯಕರು ನೆನಪಾಗುತ್ತಾರೆ ವಿನಾ, ಬೇರೆ ಸಮಯದಲ್ಲಿ ಯಾರಿಗೂ ನೆನಪಾಗುವುದಿಲ್ಲ’ ಎಂದರು.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿ, ‘ರಾಜ್ಯದಲ್ಲಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಕ್ಕೆ ಮತ್ತು ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲು ಚಿಂತನೆ ಮಾಡಲಾಗಿದೆ. ಕೋವಿಡ್‌ನಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಾತನಾಡಿ, ‘ಗ್ರಾಮ ಪಂಚಾಯಿತಿ ಚುನಾವಣೆಯ ಯುದ್ಧಕ್ಕೆ ಬಿಜೆಪಿ ಸಿದ್ಧವಾಗಿದೆ. ಜಿಲ್ಲೆಯ ಮೂರು ತಾಲ್ಲೂಕಿನಲ್ಲೂ ಬಿಜೆಪಿ ಅಧಿಕಾರ ಹಿಡಿದಿದೆ. ಗ್ರಾಮ ಪಂಚಾಯಿತಿಯಲ್ಲೂ ಅಧಿಕಾರ ಹಿಡಿಯಬೇಕು. ರಾಜ್ಯದಲ್ಲಿ ಚುನಾವಣೆಯನ್ನು ಗೆಲ್ಲಿಸುವ ಶಕ್ತಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರ ಕೈಯಲ್ಲಿದೆ’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಮಾತನಾಡಿದರು. ರಾಜ್ಯ ಸಂಘಟನಾ ಅಧ್ಯಕ್ಷ ರವಿಕುಮಾರ್, ಎಸ್‌ಸಿ ಮೋರ್ಚಾ ಅಧ್ಯಕ್ಷ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಎ.ರಾಮಚಂದ್ರ, ಎಸ್‌ಸಿ ಮೋರ್ಚಾ ಉಪಾಧ್ಯಕ್ಷನಂಜುಂಡಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಬಾಲರಾಜು, ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ, ಶಿವಕುಮಾರ್, ಗುಂಡ್ಲುಪೇಟೆ ಪುರಸಭಾ ಅಧ್ಯಕ್ಷ ಪಿ.ಗಿರೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲೇಶ್, ಮಂಡಲ ಅಧ್ಯಕ್ಷ ದೊಡ್ಡಹುಂಡಿ ಜಗದೀಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಮುಖಂಡರಾದ ಪ್ರೀತಂ ನಾಗಪ್ಪ, ಡಾ.ದತ್ತೇಶ್ ಕುಮಾರ್ ಇದ್ದರು.

ಗುಂಡ್ಲುಪೇಟೆ: ಬಿಜೆಪಿ ಭದ್ರಕೋಟೆ

ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ‘ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿತ್ತು. ಅದಕ್ಕೆ ಇಂದು ಸವಾಲೊಡ್ಡಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಹುತ್ತೂರಿನ ಒಂಬತ್ತು ಕೆರೆಗಳಿಗೆ ನೀರು ಹರಿಸಲಾಗುವುದು. ಇದರಲ್ಲಿ ಅನುಮಾನ ಬೇಡ. ಕ್ಷೇತ್ರದಲ್ಲಿ 40 ಗ್ರಾಮ ಪಂಚಾಯಿತಿಗಳಿದ್ದು, ಕನಿಷ್ಠ ಇದರಲ್ಲಿ 35 ಗೆಲ್ಲಬೇಕು. ಗುಂಡ್ಲುಪೇಟೆ ಬಿಜೆಪಿ ಭದ್ರಕೋಟೆ ಎಂಬ ವಾತಾವರಣ ಆರಂಭವಾಗಿದೆ. ಇದರಿಂದಲೇ ಇಂದು ಹಲವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚಿನ ಕಡೆ ಜಯ ಸಾಧಿಸಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಎಲ್ಲ ಸಮುದಾಯಕ್ಕೆ ಸೇರಿದ್ದು: ವಿಜಯೇಂದ್ರ

‘ಬಿಜೆಪಿ ಎಂದರೆ ಮೊದಲು ಬ್ರಾಹ್ಮಣ ಪಕ್ಷ ಎಂದು ಕರೆಯುತ್ತಿದ್ದರು. ನಂತರ ಲಿಂಗಾಯತರ ಪಕ್ಷ ಎಂದು ಕರೆಯುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಬಿಜೆಪಿ ಯಾವ ಜಾತಿಗೂ ಸೇರಿಲ್ಲ. ಎಲ್ಲ ಸಮುದಾಯಕ್ಕೂ ಸೇರಿದ ಪಕ್ಷ. ಪಕ್ಷವನ್ನು ಇಬ್ಭಾಗ ಮಾಡುವ ಸಲುವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬರಡು ಭೂಮಿಯಲ್ಲೂ ಸಹ ಕಮಲವನ್ನು ಬೆಳೆಸುವ ಶಕ್ತಿ ಬಿಜೆಪಿ ಕೈಯಲ್ಲಿದೆ’ ಎಂದು ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT