ಗುರುವಾರ , ಆಗಸ್ಟ್ 11, 2022
27 °C

ಗ್ರಾಮ ಪಂಚಾಯಿತಿ ಚುನಾವಣೆ| ಗುಂಡ್ಲುಪೇಟೆಯಲ್ಲಿ ಗುಂಡು–ತುಂಡಿಗೆ ಬೇಡಿಕೆ!

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ದಿನ ಸಮೀಸುತ್ತಿದ್ದಂತೆ ಮತದಾರರನ್ನು ಗುಂಡು, ತುಂಡುಗಳ ಮೂಲಕ ಓಲೈಸಲು ಯತ್ನಿಸುತ್ತಿರುವುದು ಹಾಗೂ ಮದ್ಯ ಹಾಗೂ ಬಾಡೂಟಕ್ಕಾಗಿ ಮತದಾರರೇ ಅಭ್ಯರ್ಥಿಗಳು ಹಾಗೂ ಮುಖಂಡರ ಬೆನ್ನು ಬೀಳುತ್ತಿರುವುದು ತಾಲ್ಲೂಕಿನಲ್ಲಿ ಹೆಚ್ಚುತ್ತಿದೆ. 

ಹಲವು ಕಡೆಗಳಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ಹಾಗೂ ಮುಖಂಡರೇ ಪಾರ್ಟಿ ನೀಡುತ್ತಿದ್ದಾರೆ. ಮದ್ಯ ಪೂರೈಸುವುದರ ಜೊತೆಗೆ ಮಾಂಸಾಹಾರದ ವ್ಯವಸ್ಥೆಯನ್ನೂ ಮಾಡುತ್ತಾರೆ. 

ಕೆಲವು ಕಡೆಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇದೆ. ಸಂಜೆಯಾಗುತ್ತಿದ್ದಂತೆಯೇ ಮತದಾರರು, ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಮತ್ತೆ ಮುಖಂಡರ ಮನೆಗೆ ಹೋಗಿ ಮದ್ಯಕ್ಕೆ ಬೇಡಿಕೆ ಇಡುತ್ತಿದ್ದಾರೆ. ಒಂದು ವೇಳೆ ಮದ್ಯ ನೀಡದಿದ್ದರೆ ಕ್ಷಣಾರ್ಧದಲ್ಲಿ ಪಕ್ಷಾಂತರ ಮಾಡುತ್ತಾರೆ.

ಕಾಡಂಚಿನ ಗ್ರಾಮದಲ್ಲಿ ಈ ರೀತಿಯ ಬೇಡಿಕೆ ಹೆಚ್ಚಾಗಿ ಕಂಡು ಬರುತ್ತದೆ. ಮತಗಳನ್ನು ಉಳಿಸಿಕೊಳ್ಳುವ ಸಲುವಾಗಿ ಅಭ್ಯರ್ಥಿಗಳು ಅನಿವಾರ್ಯವಾಗಿ ಅವರ ಬೇಡಿಕೆಯನ್ನು ಈಡೇರಿಸಬೇಕಾಗಿದೆ. 

‘ನಮ್ಮದು ಕಾಡಂಚಿನ ಗ್ರಾಮ. ಬುಡಕಟ್ಟು ಜನರು ಹೆಚ್ಚು. ಗೆಲುವಿಗೆ ಅವರ ಮತಗಳೇ ನಿರ್ಣಾಯಕ. ಇಂತಹ ಸಂದರ್ಭ ಉಪಯೋಗಿಸಿಕೊಂಡು ಸಂಜೆಯಾಗುತ್ತಿದ್ದಂತೆ ಮನೆ ಮುಂದೆ ಬಂದು ನಿಲ್ಲತ್ತಾರೆ. ಮದ್ಯ ಪೂರೈಸಿ ಅವರನ್ನು ಸಮಾಧಾನ ಪಡಿಸುವುದೇ ತ್ರಾಸವಾಗುತ್ತಿದೆ. ಎದುರಾಳಿ ಅಭ್ಯರ್ಥಿಗಳು ನಿಮಗಿಂತ ಹೆಚ್ಚು ನೀಡುತ್ತಿದ್ದಾರೆ ಎಂದು ಬೆನ್ನು ಬೀಳುತ್ತಾರೆ. ಮದ್ಯಕ್ಕಾಗಿಯೇ ₹20 ಸಾವಿರ ಖರ್ಚು ಮಾಡಿದ್ದೇನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಭ್ಯರ್ಥಿಯೊಬ್ಬರು ‘ಪ್ರಜಾವಾಣಿ’ ಹೇಳಿದರು. 

ಸೆಳೆಯಲು ವಿವಿಧ ತಂತ್ರ

ಇತ್ತ, ಅಭ್ಯರ್ಥಿಗಳು ಕೂಡ ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳಿಗೆ ಮೊರೆ ಹೋಗಿದ್ದಾರೆ. ಮದ್ಯ–ಬಾಡೂಟ ಒಂದು ತಂತ್ರವಾಗಿದ್ದರೆ, ಮಹಿಳಾ ಮತದಾರರನ್ನು ಸೆಳೆಯಲು ಅವರಿಗೆ ಪ್ರತ್ಯೇಕ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ. ಯುವಕರನ್ನು ಸೆಳೆಯುವ ಸಲುವಾಗಿ ಕ್ರೀಡಾಕೂಟವನ್ನು ಆಯೋಜಿಸಲು ಧನ ಸಹಾಯ ಮಾಡುವುದು, ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ.

‘ಇಂತಹ ಸಂದರ್ಭಗಳನ್ನು ಉಪಯೋಗಿಸಿಕೊಂಡು ಅನೇಕ ಗ್ರಾಮದಲ್ಲಿ ವಾಲಿಬಾಲ್, ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುತ್ತಿದ್ದಾರೆ. ಚುನಾವಣೆ ಕಾವು ಮುಗಿದ ನಂತರ ಪಕ್ಷದವರಿಂದಾಗಲಿ, ಅಭ್ಯರ್ಥಿಗಳಿಂದಾಗಲಿ ಒಂದು ರೂಪಾಯಿ ವಸೂಲಿ ಮಾಡಲು ಆಗುವುದಿಲ್ಲ. ಈ ಸಂದರ್ಭದಲ್ಲಿ ಕೇಳಿದಷ್ಟು ಹಣ ನೀಡಿ ಬೆಂಬಲಿಸುವಂತೆ ಕೇಳುತ್ತಾರೆ. ಅದ್ದರಿಂದ ಇಂತಹ ಸಂದರ್ಭಗಳಲ್ಲಿ ಹೆಚ್ಚು ಕ್ರೀಡೆ ನಡೆಯುತ್ತದೆ’ ಎಂದು ಕ್ರೀಡಾಕೂಟವನ್ನು ಸಂಘಟಿಸಲು ಮುಂದಾದ ಯುವಕರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು