ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು : ಎರಡು ವರ್ಷ ಕಳೆದರೂ ತೆರವುಗೊಳ್ಳದ ಕಟ್ಟಡ

ಕಾವೇರಿ ವನ್ಯಧಾಮದಲ್ಲಿ ಅನಧಿಕೃತ ಕಟ್ಟಡ: ಜಿಲ್ಲಾಡಳಿತ ಕಾರ್ಯವೈಖರಿಗೆ ಪರಿಸರವಾದಿಗಳ ಅಸಮಾಧಾನ
Last Updated 26 ಆಗಸ್ಟ್ 2018, 16:07 IST
ಅಕ್ಷರ ಗಾತ್ರ

ಹನೂರು: ಪರಿಸರ ಸೂಕ್ಷ್ಮ ವಲಯದಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಎರಡು ವರ್ಷ ಕಳೆದಿದ್ದರೂ ಕ್ರಮ ಕೈಗೊಳ್ಳದಿರುವ ಜಿಲ್ಲಾಡಳಿತ ಕಾರ್ಯವೈಖರಿ ಬಗ್ಗೆ ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಅಕ್ರಮ ಕಟ್ಟಡದ ಬಗ್ಗೆ ‘ಕಾವೇರಿ ವನ್ಯಧಾಮವಾಣಿಜ್ಯ ಚಟುವಟಿಕೆಗಳಿಗೆ ಆಸ್ಪದ ಬೇಡ- ಪರಿಸರಪ್ರಿಯರ ಒತ್ತಾಯ. ಸಾವಯವ ತೋಟದ ಸೋಗಿನಲ್ಲಿ ವಾಣಿಜ್ಯ ಚಟುವಟಿಕೆ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯು2016 ಸೆಪ್ಟೆಂಬರ್‌ 27ರಂದು ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ವರದಿ ಆಧರಿಸಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಇದರನ್ವಯ ಕಾವೇರಿ ವನ್ಯಧಾಮದ ಡಿಸಿಎಫ್ ಹಾಗೂ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಯಾವುದೇ ಚಟುವಟಿಕೆಗಳನ್ನು ನಡೆಸದಂತೆ ಮಾಲೀಕರಿಗೆ ತಾಕೀತು ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

'ಕಾವೇರಿ ವನ್ಯಧಾಮದ ಚಿಕ್ಕಲ್ಲೂರು ವನ್ಯಜೀವಿ ವಲಯದ ಡಿ ಲೈನ್‌ಗೆ ಹೊಂದಿಕೊಂಡಂತೆ ನಿರ್ಮಿಸಿರುವ ಕಟ್ಟಡವನ್ನು ಬೇರೆ ಉದ್ದೇಶಕ್ಕೆ ಬಳಸಬಾರದು ಜತೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಕಟ್ಟಡ ಅಕ್ರಮವಾಗಿ ಕಟ್ಟಿರುವುದು ಕಂಡು ಬಂದಿದೆ. ಆದ್ದರಿಂದ ಕಟ್ಟಡವನ್ನು ತೆರವುಗೊಳಿಸಬೇಕು’ ಎಂದು ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶ್‌ಕುಮಾರ್‌ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆದರೆ, ಪತ್ರ ಬರೆದು ಎರಡು ವರ್ಷ ಕಳೆದರೂ ಜಿಲ್ಲಾಡಳಿತ ಕಟ್ಟಡ ತೆರವಿಗೆ ಮುಂದಾಗಿಲ್ಲ ಎಂಬುದು ಪರಿಸರಪ್ರಿಯರ ಆರೋಪ.

ಕಟ್ಟಡದಲ್ಲಿ ಏನಿದೆ?:ಇಕ್ಕಡಹಳ್ಳಿ ಗ್ರಾಮದ ಕಂದಾಯ ಭೂಮಿ ಸರ್ವೆ ನಂ 367 ಜಮೀನಿನಲ್ಲಿ ತಲೆಯೆತ್ತಿರುವ ಅನಧಿಕೃತ ಬೃಹತ್ ಕಟ್ಟಡದಲ್ಲಿ 50ಕ್ಕಿಂತ ಹೆಚ್ಚು ಜನರು ಉಳಿದುಕೊಳ್ಳಬಹುದಾದ ವ್ಯವಸ್ಥೆ, ಅಡುಗೆ ಮನೆ, ಡೈನಿಂಗ್ ಹಾಲ್, ಬಯಲು ರಂಗಮಂದಿರ, ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ ಹಾಗೂ ಈಜುಕೊಳ ನಿರ್ಮಿಸಲಾಗಿದೆ. ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದ ಮತ್ತಿಪರು ಗಸ್ತಿನ ಡಿ ಲೈನ್ ಹೊಂದಿಕೊಂಡಂತೆ 3 ಮೀಟರ್ ಅಂತರದಲ್ಲಿ ಮನೆಯ ಕಾಂಪೌಂಡ್ ನಿರ್ಮಿಸಲಾಗಿದೆ. ಇದು ರೆಸಾರ್ಟ್‌ ಮಾದರಿಯಲ್ಲಿದೆ. ಪ್ರವಾಸಿಗರಿಗೆ ತಂಗಲು ಅನುಕೂಲ ಕಲ್ಪಿಸುವಉದ್ದೇಶದಿಂದ ನಿರ್ಮಿಸಿರುವಂತೆ ಕಂಡು ಬಂದಿದೆ. ಇದು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಟ್ಟಿದ್ದು, ಇದರಿಂದ ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದುಅಂದಿನ ಡಿಸಿಎಫ್ ರಮೇಶ್‌ಕುಮಾರ್ ಅವರು 2016 ಡಿಸೆಂಬರ್ 20 ರಂದು ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದರು.

‌ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ದೃಢೀಕೃತ ದಾಖಲಾತಿಗಳನ್ನು ಸಲ್ಲಿಸುವಂತೆ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಇದುವರೆಗೂ ಯಾವುದೇ ದಾಖಲೆಗಳನ್ನು ನೀಡಿಲ್ಲ. ಅಲ್ಲದೇ ಅರ್ಜಿದಾರರು, ಯಾವುದೇ ಪೂರ್ವಾನುಮತಿ ಪಡೆಯದೆ ಹಾಗೂ ಕೃಷಿ ಜಮೀನಿನನ್ನು ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಿಸಲು ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ಮಂಜೂರಾತಿ ಪಡೆಯದಿರುವ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಮಂಜೂರು ನೀಡಬಾರದು ಹಾಗೂ ಜಮೀನಿನಲ್ಲಿ ಈಗಾಗಲೇ ನಿರ್ಮಾಣ ಮಾಡಿರುವ ಕಟ್ಟಡವನ್ನುತೆರವುಗೊಳಿಸಬೇಕು ಎಂದು ಅವರು ಪತ್ರದಲ್ಲಿ ಹೇಳಿದ್ದರು.

ಈ ಮಧ್ಯೆ, ಅಕ್ರಮ ಕಟ್ಟಡದ ಬಗ್ಗೆ ವರದಿ ನೀಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗವು ಜಿಲ್ಲಾಧಿಕಾರಿಯವರಿಗೆ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು,ಭೂಕಂದಾಯ ಕಾಯ್ದೆ 1964ರ 96ರ ಕಲಂ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ವಾಣಿಜ್ಯ ಚಟುವಟಿಕೆ ಸ್ಥಗಿತ

ಅಧಿಕಾರಿಗಳ ಭೇಟಿಯಿಂದಾಗಿ ಅಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಆದರೆ, ಕಟ್ಟಡ ಮಾತ್ರ ತೆರವುಗೊಳಿಸಿಲ್ಲ. ಇದರಿಂದಾಗಿ ಮುಂದೆಎಂದಾದರೂ ಅಲ್ಲಿ ಚಟುವಟಿಕೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿ ಅವರು ತಕ್ಷಣ ಕಟ್ಟಡ ತೆರವಿಗೆ ಮುಂದಾಗಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT