ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋರ್ಟ್‌ ಆದೇಶ: ಅನಧಿಕೃತ ಮನೆ ತೆರವು

ಸೋಮಣ್ಣ ಲೇಔಟ್‌: ಕುಟುಂಬದ ಸದಸ್ಯರಿಂದ ತೀವ್ರ ವಿರೋಧ, ನಿವೇಶನ, ಮನೆಯ ಭರವಸೆ
Published 17 ಮೇ 2024, 4:11 IST
Last Updated 17 ಮೇ 2024, 4:11 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ 15ನೇ ವಾರ್ಡ್‌ ವ್ಯಾಪ್ತಿಗೆ ಬರುವ ಸೋಮಣ್ಣ ಲೇ ಔಟ್‌ನಲ್ಲಿ ಅನಧಿಕೃತವಾಗಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಮನೆಯನ್ನು ನಗರಸಭೆಯ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಗುರುವಾರ ತೆರವುಗೊಳಿಸಿದರು. 

ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿರುವುದರ ವಿರುದ್ಧ ಸ್ಥಳೀಯ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಮನೆಯನ್ನು ತೆರವುಗಳಿಸಲು ಕೋರ್ಟ್‌ ಆದೇಶ ನೀಡಿತ್ತು. ಅದರಂತೆ ನಗರಸಭೆ ಅಧಿಕಾರಿಗಳು ಪೊಲೀಸರ ಭದ್ರತೆಯೊಂದಿಗೆ ಮನೆಯ ಬಳಿ ತೆರಳಿ, ಮನೆಯಲ್ಲಿದ್ದವರನ್ನು ಮನವೊಲಿಸಲು ಯತ್ನಿಸಿದರು. 

ಮನೆಯಲ್ಲಿ ವಾಸವಿದ್ದ ಸಿದ್ದರಾಜು ಮತ್ತು ಕುಟುಂಬದ ಸದಸ್ಯರು, ವಕೀಲ ಪ್ರಸನ್ನ ಕುಮಾರ್‌ ಹಾಗೂ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಿದ್ದರಾಜು ನಗರಸಭೆ ವತಿಯಿಂದ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವ ತನಕ ಮನೆಯನ್ನು ತೆರವು ಮಾಡಲ್ಲ ಎಂದು ಪಟ್ಟುಹಿಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಆಯುಕ್ತ ರಾಮದಾಸ್‌, ಕಂದಾಯ ಅಧಿಕಾರಿ ಶರವಣ, ‘ನಗರಸಭೆಗೆ ಸೇರಿದ ನಿವೇಶನ ನೀಡಲಾಗುವುದು. ಮನೆ ತೆರವು ಮಾಡಿ ಆ ಕುಟುಂಬಕ್ಕೆ ಬಾಡಿಗೆ ಮನೆ ವ್ಯವಸ್ಥೆ ಮಾಡಲಾಗುವುದು. ಆ ನಂತರ ನಗರಸಭೆ ವತಿಯಿಂದ ಬೇರೆ ಕಡೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು. 

ಇದಕ್ಕೆ ವಕೀಲ ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿ , ನೋಟಿಸ್‌ ನೀಡದೆ ಮನೆ ತೆರವು ಮಾಡಲಾಗುತ್ತಿದೆ. ನಗರಸಭೆ ವ್ಯಾಪ್ತಿಗೆ ಸೇರಿದ ನಿವೇಶನ ಕೊಡುವ ಕುರಿತು ದಾಖಲೆ ಕೊಡಿ. ಮಳೆಗಾಲ ಆರಂಭವಾಗುತ್ತಿದ್ದು, ಕುಟುಂಬ ಎಲ್ಲಿ ವಾಸ ಮಾಡಬೇಕು’ ಎಂದು ಪ್ರಶ್ನಿಸಿದರು. 

‘ಹಿಂದೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪಡಿಸುವಾಗ ಮನೆ, ನಿವೇಶನ ಕಳೆದುಕೊಂಡವರಿಗೆ ಯಡಬೆಟ್ಟದಲ್ಲಿ ಕೊಟ್ಟ ನಿವೇಶನ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಕಾನೂನು ಪ್ರಕಾರವಾಗಿ ತೆರವುಗೊಳಿಸಲಾಗುತ್ತಿಲ್ಲ’ ಎಂದು ದೂರಿದರು. 

ಸ್ಥಳದಲ್ಲಿದ್ದ ತಹಶೀಲ್ದಾರ್‌ ಐ.ಇ.ಬಸವರಾಜು ಮಾತನಾಡಿ, ‘ಮಾನವೀಯತೆಯ ದೃಷ್ಟಿಯಿಂದ ನಗರಸಭೆಯಿಂದ ಕುಟುಂಬಕ್ಕೆ ನಿವೇಶನ, ಮನೆ ನಿರ್ಮಿಸಿಕೊಡಲಾಗುವುದು ಎಂದು ಹೇಳಲಾಗಿದೆ. ಕಾನೂನು ಪ್ರಕಾರವಾಗಿಯೇ ಮನೆ ತೆರವುಗೊಳಿಸಲಾಗುತ್ತಿದೆ. ಆಕ್ಷೇಪ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದರು. 

ಈ ವೇಳೆ ಕುಟುಂಬದವರು ನಗರಸಭೆಯ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಬಳಿಕ ಕುಟುಂಬದವರು ಮನೆ ಒಳಗೆ ಹೋಗಿ ಬೀಗ ಹಾಕಿಕೊಂಡರು. ಮನೆಗೆ ತೆರಳಿದ ಪೊಲೀಸರು ಬಲವಂತವಾಗಿ ಕುಟುಂಬದವರನ್ನು ಹೊರಗೆ ಕರೆದೊಯ್ದರು. ಬಳಿಕ ಮನೆಯಲ್ಲಿದ್ದ ಸಾಮಾನುಗಳನ್ನು ವಾಹನಕ್ಕೆ ತುಂಬಿ ನಂತರ ಜೆಸಿಬಿ ಮೂಲಕ ಮನೆಯನ್ನು ಕೆಡವಲಾಯಿತು.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಡಿವೈಎಸ್ಪಿ ಲಕ್ಷ್ಮಯ್ಯ, ಇನ್ಸ್‌ಪೆಕ್ಟರ್ ರಾಜೇಶ್ ಸೇರಿದಂತೆ ನಗರಸಭೆಯ ಅಧಿಕಾರಿಗಳು ಇದ್ದರು. 

40 ವರ್ಷಗಳ ಪ್ರಕರಣ ಇದು. ಮಾನವೀಯ ನೆಲೆಯಲ್ಲಿ ಕುಟುಂಬಕ್ಕೆ ಬಾಡಿಗೆ ಮನೆ ಸೌಲಭ್ಯ ಕಲ್ಪಿಸಿದ್ದೇವೆ. ನಿವೇಶನವನ್ನೂ ನೀಡಲಿದ್ದೇವೆ.

–ಐ.ಇ.ಬಸವರಾಜು ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT