ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಯೂರು ಪಿಎಸಿಸಿ: 37 ರೈತರಿಗೆ ಚಿನ್ನ ವಾಪಸ್‌

ಅಕ್ರಮವಾಗಿ ಗಿರವಿ ಇಟ್ಟ ಪ್ರಕರಣ; ಪೊಲೀಸರಿಂದ ತನಿಖೆ, ಜಿಲ್ಲಾಡಳಿತದ ಪ್ರಯತ್ನ
Published 4 ಮೇ 2024, 15:41 IST
Last Updated 4 ಮೇ 2024, 15:41 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರವಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ 37 ಮಂದಿಗೆ ಸೇರಿದ ಚಿನ್ನಾಭರಣಗಳನ್ನು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌ ಅವರು ಶನಿವಾರ ವಾರಸುದಾರರಿಗೆ ಹಸ್ತಾಂತರಿಸಿದರು. 

ಈ ಪಿಎಸಿಸಿಯಲ್ಲಿ 380 ಸದಸ್ಯರಿದ್ದು, ಈ ಪೈಕಿ ಏಳು ಮಂದಿಯ ಚಿನ್ನವನ್ನು ಈಗಾಗಲೇ ಹಸ್ತಾಂತರಿಸಲಾಗಿದೆ. ಈವರೆಗೆ ಒಟ್ಟು 44 ಮಂದಿಯ ಆಭರಣಗಳನ್ನು ವಾಪಸ್‌ ನೀಡಿದಂತೆ ಆಗಿದೆ. 

ಮಲೆಯೂರು ಸಹಕಾರ ಸಂಘದಲ್ಲಿ ರೈತರು ತಮ್ಮ ಚಿನ್ನಾಭರಣಗಳನ್ನು ಅಡಮಾನ ಮಾಡಿ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದುಕೊಂಡಿದ್ದರು. ಆದರೆ, ಆಡಳಿತ ಮಂಡಳಿಯವರು ರೈತರ ಚಿನ್ನಾಭರಣಗಳನ್ನು ಅಕ್ರಮವಾಗಿ ಬೇರೆ ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಹಣಕ್ಕೆ ಗಿರಿವಿಇಟ್ಟು ವಂಚನೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಹಣ ಕಟ್ಟಿರುವ ರೈತರಿಗೆ ಚಿನ್ನಾಭರಣ ವಾಪಸ್ ನೀಡದೆ ಸಬೂಬು ಹೇಳುತ್ತಿದ್ದರು.

ಈ ಅಕ್ರಮದ ವಿರುದ್ದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ರೈತರೊಂದಿಗೆ ನಿರಂತರ ಹೋರಾಟ ಮಾಡಿತ್ತು. ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಹೋರಾಟಗಾರರು ಮತ್ತು ಸಂಘದ ಸದಸ್ಯರೊಂದಿಗೆ ಸಭೆ ನಡೆಸಿ, ಚಿನ್ನಾಭರಣ ವಾಪಸ್‌ ಕೊಡಿಸುವ ಭರವಸೆ ನೀಡಿದ್ದರು. ಪೊಲೀಸರು ತನಿಖೆಯನ್ನೂ ನಡೆಸಿದ್ದರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್, ‘ಸಂಘದ ರೈತರು ಗಿರಿವಿ ಇಟ್ಟಿದ ಚಿನ್ನಾಭರಣಗಳನ್ನು ಕಾರ್ಯದರ್ಶಿ, ಆಡಳಿತ ಮಂಡಳಿ ಅಕ್ರಮವಾಗಿ ಅನ್ಯ ಖಾಸಗಿ ಬ್ಯಾಂಕ್‌ಗಳಲ್ಲಿ ಗಿರವಿ ಇಟ್ಟು ಅಕ್ರಮ ಎಸಗಿದ್ದರು. ಸಂಘದ ಹೋರಾಟ ಫಲವಾಗಿ ಜಿಲ್ಲಾಡಳಿತ ಮಧ್ಯಸ್ಥಿಕೆಯಲ್ಲಿ, ನ್ಯಾಯಾಲಯ ಆದೇಶದ ಮೇರೆಗೆ ಮೊದಲ ಹಂತದಲ್ಲಿ 37 ಮಂದಿಗೆ ಚಿನ್ನವನ್ನು ವಾಪಸ್ ವಿತರಿಸಲಾಗಿದೆ. ಇನ್ನೂ 345 ಮಂದಿಯ ಚಿನ್ನ ಸಿಗಬೇಕಿದೆ. ಆ ಪ್ರಕ್ರಿಯೆ ನಡೆಯುತ್ತಿದೆ. ರೈತರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು. 

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ತಹಶೀಲ್ದಾರ್ ಬಸವರಾಜು, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಸಾಗರ್, ಎ.ಆರ್.ದಯಾನಂದ, ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ಪ್ರಧಾನ ಕಾರ್ಯದರ್ಶಿ ಮಲೆಯೂರು ಮಹೇಂದ್ರ, ಸತೀಶ್, ಜನ್ನೂರು ಕಾಂತರಾಜು, ಉಡಿಗಾಲ ಮಂಜುನಾಥ್, ಕೀಳಲಿಪುರ ಶ್ರೀಕಂಠ, ಅರಳೀಕಟ್ಟೆ ಪ್ರಭುಸ್ವಾಮಿ ಇತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT