ಸೋಮವಾರ, ಜುಲೈ 4, 2022
24 °C
ಕನಕಗಿರಿಯಲ್ಲಿ ಅತಿಶಯ ಮಹೋತ್ಸವ ಉದ್ಘಾಟನೆ: ವೀರೇಂದ್ರ ಹೆಗ್ಗಡೆ, ಸಚಿವರಾದ ಸೋಮಣ್ಣ, ಆನಂದ್‌ ಸಿಂಗ್‌ ಭಾಗಿ

ಕನಕಗಿರಿ: ಭಾಷೆ, ಜಾತಿ ಮುಂದಿಟ್ಟು ಬೆಂಕಿ ಹಚ್ಚುವ ಯತ್ನ: ಸಂತೋಷ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ದೇಶ ಈಗ ಕವಲುದಾರಿಯಲ್ಲಿದೆ. ಭಾರತವನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಇದ್ದಾರೆ. ಬೇರೆ ಬೇರೆ ವಿಚಾರಗಳನ್ನು ಮುಂದಿಟ್ಟುಕೊಂಡು ಬೆಂಕಿ ಹಚ್ಚಲು ಪ್ರಯತ್ನಿಸುತ್ತಾರೆ. ಆದರೆ,  ನಾವು ಯಾವುದೇ ಕಾರಣಕ್ಕೂ ದೇಶ ಮತ್ತೆ ಹಿಂದಕ್ಕೆ ಹೋಗಲು ಬಿಡಬಾರದು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ತಾಲ್ಲೂಕಿನ ಕನಕಗಿರಿಯಲ್ಲಿ ಶನಿವಾರ ಹೇಳಿದರು. 

ಕನಕಗಿರಿ ಅತಿಶಯ ಮಹೋತ್ಸವ ಉದ್ಘಾಟನೆ, ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾರತವು ಈಗ ಯೋಗದ ಕಾರಣಕ್ಕೆ, ಸಂಗೀತದ ಕಾರಣಕ್ಕೆ, ಇಲ್ಲಿನ ಜನ ಬದುಕುವ ರೀತಿಗೆ ಜಾಗತಿಕ ಮಟ್ಟದಲ್ಲಿ ಕೇಂದ್ರ ಬಿಂದು ಆಗಿದೆ. ನಮ್ಮ ದೇಶ ಜ್ಞಾನಕ್ಕೆ ಬೆಲೆ ಕೊಡುತ್ತದೆ. ಒಂದು ಸುಖ ಸಂಸಾರ ಇದ್ದರೆ, ಅವರನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಸುತ್ತಮುತ್ತ ಇರುತ್ತಾರೆ. ಅದೇ ರೀತಿ ಸದ್ಯ ಕವಲು ದಾರಿಯಲ್ಲಿರುವ ದೇಶದಲ್ಲಿ ಭಾಷೆ, ಜಾತಿ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಬೆಂಕಿ ಹಚ್ಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ’ ಎಂದರು. 

‘ನಮ್ಮ ದೇಶದ ಜೊತೆಗೆ ಪ್ರತ್ಯೇಕ ರಾಷ್ಟ್ರವಾದ ಪಾಕಿಸ್ತಾನ ನರಕವಾಗಿದೆ. ಶ್ರೀಲಂಕಾದ ಪರಿಸ್ಥಿತಿಯೂ ಹದಗೆಟ್ಟಿದೆ. ಚೀನಾದ ಸ್ಥಿತಿಯೂ ಉತ್ತಮವಾಗಿಲ್ಲ. ಅಮೆರಿಕದ ಆರ್ಥಿಕತೆಯೂ ಕುಸಿದಿದೆ. ಹೀಗಿರುವಾಗ ಭಾರತ ಜಗತ್ತಿನಲ್ಲಿ ತಾನು ಏನು ಎನ್ನುವುದನ್ನು ತೋರಿಸುತ್ತಿದೆ’ ಎಂದು ಹೇಳಿದ ಅವರು ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ಸರ್ಕಾರ ಕೈಗೊಂಡ ಕಾರ್ಯಾಚರಣೆಯನ್ನು ಉದಾಹರಿಸಿದರು. 

ಶಾಂತ ಸಮಾಜ: ‘ಜೈನ ಪರಂಪರೆ ಜ್ಞಾನ ಮಾರ್ಗಕ್ಕೆ ಸೇರಿದ್ದು. ಜ್ಞಾನದ ಮೂಲಕ ಭಗವಂತನನ್ನು ತಲುಪಬಹುದು ಎಂಬ ಸಂದೇಶವನ್ನು ಈ ಧರ್ಮ ನೀಡುತ್ತದೆ. ಯಾರಿಗೂ ತೊಂದರೆ ಕೊಡದ, ಸದಾ ಶಾಂತವಾಗಿರುವಂತಹ ಸಮಾಜ ಇದು. ಸಮಾಜಕ್ಕೆ ಏನಾದರೂ ಕೊಡಬೇಕು ಎಂಬ ತುಡಿತ ಸಮಾಜದವರಲ್ಲಿದೆ. ದೇಶದಲ್ಲಿರುವ 16 ಸಾವಿರ ಗೋಶಾಲೆಗಳ ಪೈಕಿ 12 ಸಾವಿರ ಗೋಶಾಲೆಗಳ ಆಡಳಿತ ಇಲ್ಲವೇ ಮುಖ್ಯಸ್ಥ ಹುದ್ದೆ ಜೈನರ ಕೈಯಲ್ಲಿದೆ’ ಎಂದು ಹೇಳಿದರು.  

ಜ್ಞಾನಕ್ಕೆ ಭಾರತವೇ ಮೂಲ

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ‘ಸಮಾಜದಲ್ಲಿ ಸಂಘಟನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜೈನ ಸಮಾಜವು ಹಿಂದೂ ಸಮಾಜದ ಜೊತೆ ಕೆಲಸ ಮಾಡುತ್ತಿದೆ. ನಮ್ಮದು ಸಣ್ಣ, ಅಲ್ಪಸಂಖ್ಯಾತ ಸಮಾಜ. ಸಂಖ್ಯೆಯಲ್ಲಿ ಅಲ್ಪ ಆಗಿರಬಹುದು. ಆದರೆ, ವಿದ್ವತ್ತು, ಜ್ಞಾನ, ಶ್ರೇಯಸ್ಸು, ಕೀರ್ತಿಯಲ್ಲಿ ನಾವು ಬಹುಸಂಖ್ಯಾತರು. ಜೈನ ಧರ್ಮವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸಮುದಾಯದವರ ಜ್ಞಾನ ಏನು ಎಂಬುದು ಗೊತ್ತಾಗುತ್ತದೆ. ಸಾಧನ ಸಲಕರಣೆಗಳು ಇಲ್ಲದ ಸಂದರ್ಭದಲ್ಲೇ ಜ್ಞಾನ, ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಶೋಧಿಸಿ ತಾಳೆಗರಿಗಳು, ಹಸ್ತ ರೇಖೆಗಳಲ್ಲಿ ದಾಖಲಿಸಿದ್ದಾರೆ’ ಎಂದರು.    

‘ಜ್ಞಾನ ಭಾರತದ ಮೂಲದಲ್ಲೇ ಸೃಷ್ಟಿಯಾಗಿದ್ದು. ಆದರೆ, ನಮಗೆ ಅದರ ಬಗ್ಗೆ ಮಾಹಿತಿ ಇಲ್ಲ. ವಿದೇಶದಿಂದ ಬಂದರಷ್ಟೇ ನಮಗೆ ಅದು ತಿಳಿಯುವುದು. ನಮ್ಮ ದೇಶದ ಜ್ಞಾನ, ವಿಜ್ಞಾನ ಸಾಧನಗಳ ಬಗ್ಗೆ ನಮಗೆ ಮಾಹಿತಿ ಇಲ್ಲದೆ ನಶಿಸಿಹೋಗುತ್ತದೆ. ಯೋಗದ ಮೂಲ ಭಾರತ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಈಗ ಅದಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ’ ಎಂದರು. 

ದೋಷ ನಿವಾರಿಸುವ ಕ್ಷೇತ್ರ: ‘ಕ್ಷೇತ್ರ ಎಂದರೆ ಅಲ್ಲಿ ದೇವರ ಸಾನಿಧ್ಯ ಇರಬೇಕು. ಜನರ ದೋಷ, ಗ್ರಹಣಗಳನ್ನು ನಿವಾರಣೆ ಮಾಡುವ ಶಕ್ತಿ ಇರಬೇಕು. ಅಂತಹ ಶಕ್ತಿ ಕನಕಗಿರಿ ಕ್ಷೇತ್ರಕ್ಕೆ ಇದೆ’ ಎಂದು ಅವರು ಬಣ್ಣಿಸಿದರು. 

‘ಜನರು ತಮ್ಮ ದೋಷ, ಕಷ್ಟಗಳನ್ನು ದೂರ ಮಾಡಿಕೊಳ್ಳುವ ಉದ್ದೇಶದಿಂದ ವಿವಿಧ ಕ್ಷೇತ್ರಗಳಿಗೆ ಬರುತ್ತಾರೆ. ಪುಣ್ಯದಾನ ಮಾಡಲು ಎಲ್ಲರೂ ಮುಂದೆ ಬರುತ್ತಾರೆ. ಆದರೆ, ದೋಷವನ್ನು ಪಡೆಯಲು ಯಾರೂ ಸಿದ್ಧರಿರುವುದಿಲ್ಲ. ಹಾಗಾಗಿ, ಭಕ್ತರು ಕ್ಷೇತ್ರಗಳಿಗೆ ಬಂದು ದೇವರ ದರ್ಶನ ಮಾಡಿ ಇಲ್ಲವೇ ಸ್ವಾಮೀಜಿಗಳನ್ನು ಕಂಡು ತಮ್ಮ ಸಮಸ್ಯೆ ತಾಪತ್ರಯಗಳನ್ನು ಹೇಳಿಕೊಳ್ಳುತ್ತಾರೆ. ಅವುಗಳು ಪರಿಹಾರಗೊಂಡರೆ ಸಂತೋಷದಿಂದ ವಾಪಸ್‌ ಹೋಗುತ್ತಾರೆ’ ಎಂದರು. 

ಜೈನೇಂದ್ರ ಸಿದ್ಧಾಂತ ಕೋಶ ಲೋಕಾರ್ಪಣೆ

ಡಾ. ಸರಸ್ವತಿ ವಿಜಯ್‌ಕುಮಾರ್‌ ಹಾಗೂ ಕೌಸಲ್ಯ ಭರಣೇಂದ್ರ ಅವರು ಅನುವಾದ ಮಾಡಿ ಸಂಪಾದಿಸಿರುವ ‘ಜೈನೇಂದ್ರ ಸಿದ್ಧಾಂತ ಕೋಶ’ದ ನಾಲ್ಕು ಸಂಪುಟಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ, ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಇತರ ಗಣ್ಯರು ಲೋಕಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಕೃತಿಯನ್ನು ಸಂಪಾದಿಸಿರುವ ಡಾ.ಸರಸ್ವತಿ ವಿಜಯ್‌ಕುಮಾರ್‌ ಹಾಗೂ ಕೌಸಲ್ಯ ಭರಣೇಂದ್ರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.  

ಮುನಿಶ್ರೀ 108 ಅಮೋಘ ಕೀರ್ತಿ ಮುನಿಮಹಾರಾಜರು, 108 ಅಮರಕೀರ್ತಿ ಮುನಿಮಹಾರಾಜರು, ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ಬಾಮೀಜಿ, ಮೂಡಬಿದಿರೆಯ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಅರಹಂತಗಿರಿಯ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಶಾಸಕ ಎನ್‌.ಮಹೇಶ್‌,  ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡ  ಸಿ.ಎಚ್‌.ವಿಜಯಶಂಕರ್‌, ಮಲೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ಎಡಿಸಿ ಕಾತ್ಯಾಯಿನಿದೇವಿ, ಎಸಿ ಡಾ.ಗಿರೀಶ್‌ ದಿಲೀಪ್‌ ಬದೋಲೆ, ಎಎಸ್‌ಪಿ ಸುಂದರ್‌ರಾಜ್‌ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು