ಬುಧವಾರ, ನವೆಂಬರ್ 20, 2019
20 °C
ಉದ್ಯಮ ಶೀಲತಾ ಜಾಗೃತಿ ಶಿಬಿರದಲ್ಲಿ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಎನ್.‌ಮರುಳೇಶ್ ಹೇಳಿಕೆ

220 ಕೈಗಾರಿಕಾ ಯೋಜನೆಗಳಿಗೆ ಸಮ್ಮತಿ

Published:
Updated:
Prajavani

ಚಾಮರಾಜನಗರ: ‘ಕೈಗಾರಿಕಾ ಪ್ರದೇಶಗಳು ಹೆಚ್ಚಾದಂತೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗಲಿದ್ದು, ಉದ್ಯೋಗಕ್ಕೂ ಅವಕಾಶವಾಗುತ್ತದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ.ಎನ್.ಮರುಳೇಶ್ ಅವರು ಶುಕ್ರವಾರ ಹೇಳಿದರು. 

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜೆಎಸ್ಎಸ್ ರುಡ್ ಸಂಸ್ಥೆ ಹಾಗೂ ಜೆಎಸ್ಎಸ್ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉದ್ಯಮಶೀಲತಾ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. 

‘ಜಿಲ್ಲಾ ಕೈಗಾರಿಕೆ ಕೇಂದ್ರ ಜಿಲ್ಲೆಯಲ್ಲಿ ಈಗಾಗಲೇ 220 ಯೋಜನೆಗಳಿಗೆ ಅನುಮೋದನೆ ನೀಡಿದೆ. 40 ಯೋಜನೆಗಳಿಗೆ ಭೂಮಿಗೆ ಹಣ ಪಾವತಿ ಮಾಡಲಾಗಿದೆ. ಕೈಗಾರಿಕೆ ನಿರ್ಮಾಣದ ಹಂತದಲ್ಲಿ ವಿವಿಧ ಇಲಾಖೆಗಳ ಸಂಪರ್ಕ ಅತ್ಯವಶ್ಯಕವಾಗಿರುತ್ತದೆ’ ಎಂದರು.

ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎ.ಜಿ. ಶಿವಕುಮಾರ್ ಅವರು ಮಾತನಾಡಿ, ‘ಜೀವನದಲ್ಲಿ ಉದ್ಯೋಗ ಬಹಳ ಮುಖ್ಯವಾಗಿದೆ. ಪ್ರಸ್ತುತದಲ್ಲಿ ಪದವಿ ಮುಗಿಸಿದ ನಂತರ ಸರ್ಕಾರಿ ಕೆಲಸ ಸಿಗದಿದ್ದಲ್ಲಿ ಸ್ವ ಉದ್ಯೋಗ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೆಲವರು ಸಣ್ಣ ಪುಟ್ಟ ವ್ಯಾಪಾರವನ್ನು ಮಾಡಿ ದೊಡ್ಡ ಉದ್ಯಮಿಗಳಾಗಿರುವ ನಿದರ್ಶನಗಳಿವೆ. ಸ್ವಂತ ಉದ್ಯೋಗದಿಂದ ಮಾಲೀಕರಾಗುವ ಜೊತೆಗೆ ಅನ್ಯರಿಗೆ ಉದ್ಯೋಗವನ್ನು ನೀಡಬಹುದಾಗಿದೆ. ಅನುಭವದಿಂದ ಸ್ವಂತ ಉದ್ಯೋಗಳಿಂದ ಯಶಸ್ಸು ಸಾಧ್ಯ’ ಎಂದರು.

ಕೈಗಾರಿಕಾ ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗದ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ‘ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ ಬಹಳಷ್ಟು ಉತ್ತಮವಾಗಿದೆ. ಸ್ವ ಉದ್ಯೋಗದ ನಿರ್ವಹಣೆಗೆ ತಿಳಿವಳಿಕೆ ಅತ್ಯಗತ್ಯವಾಗಿದ್ದು, ಉದ್ಯಮ ಶೀಲತಾ ಶಿಬಿರದ ಪ್ರಯೋಜನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಜಯಸಿಂಹ ಅವರು ಮಾತನಾಡಿ, ‘ಜಿಲ್ಲಾ ಕೈಗಾರಿಕಾ ಕೇಂದ್ರ ನೀಡುವ ಸ್ವ ಉದ್ಯೋಗದ ಯೋಜನೆಯನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಬೇಕು. ಸ್ವಂತ ಉದ್ಯೋಗದಿಂದ ಸ್ವಾವಲಂಬನೆಯ ಜೀವನ ನಡೆಸಬಹುದಾಗಿದೆ’ ಎಂದರು.

ಜೆಎಸ್ಎಸ್ ರುಡ್ ಸಂಸ್ಥೆಯ ನಿರ್ದೇಶಕ ಕೆ.ಚಂದ್ರಶೇಖರ್, ಯೋಜನಾಧಿಕಾರಿ ಬಿ.ಎಂ.ಚಂದ್ರಶೇಖರ್, ಸಂಯೋಜಕ ಬಿ.ಚಿನ್ನಸ್ವಾಮಿ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುನಂದ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ವೈ.ಕೆ.ವೆಂಕಟೇಶ್, ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ ಅಧಿಕಾರಿ ರಾಜ್ ಕುಮಾರ್, ಸಿಡಾಕ್ ಕೇಂದ್ರ ವ್ಯವಸ್ಥಾಪಕ ಎಂ.ಕೆ.ಕಿಶೋರ್, ಕೆಎಸ್ಎಫ್‌ಸಿ ಸಂಸ್ಥೆಯ ಪುಟ್ಟಮಣಿ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಉಮಾ, ಪುಷ್ಪಲತಾ ಇದ್ದರು.

ಪ್ರತಿಕ್ರಿಯಿಸಿ (+)