ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಫೆ.7ರಂದು ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ

ಅಗತ್ಯ ಸಿದ್ಧತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಸೂಚನೆ
Last Updated 12 ಜನವರಿ 2021, 15:52 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರುವರಿ 7ರಂದು ನಗರದ ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯವಿರುವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ತಜ್ಞರ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವುದು ಸಂತೋಷದ ಸಂಗತಿ. ಈ ಸಮಾರಂಭವನ್ನು ವೈಶಿಷ್ಟ್ಯವಾಗಿ ಆಯೋಜನೆ ಮಾಡಬೇಕು’ ಎಂದರು.

‘ಅಕಾಡೆಮಿಯ ಈಗಾಗಲೇ ಪ್ರಶಸ್ತಿ ಘೋಷಣೆ ಮಾಡಿದೆ. ಪ್ರದಾನ ಕಾರ್ಯಕ್ರಮವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಯಾವುದೇ ಲೋಪಗಳಿಗೆ ಅವಕಾಶವಾಗದ ಹಾಗೆ ಎಲ್ಲ ಪೂರ್ವಭಾವಿ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು’ ಎಂದರು.

‘ಪ್ರಶಸ್ತಿ ಪುರಸ್ಕೃತರನ್ನು ಕಲಾತಂಡಗಳ ಮೆರವಣಿಗೆ ಮೂಲಕ ಸಮಾರಂಭದ ಸ್ಥಳಕ್ಕೆ ಕರೆತರಲು ತೀರ್ಮಾನಿಸಲಾಗಿದೆ. ವೇದಿಕೆಯಲ್ಲಿ ಜಿಲ್ಲೆಯ ಜಾನಪದ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಏರ್ಪಾಡು ಮಾಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಪ್ರಶಸ್ತಿ ಪುರಸ್ಕೃತರು ಜಿಲ್ಲೆಗೆ ಆಗಮಿಸಲಿರುವುದರಿಂದ ಅವರ ಆತಿಥ್ಯಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಕೊರತೆ ಬಾರದಂತೆ ವಾಸ್ತವ್ಯ, ಊಟ ಉಪಹಾರ ಸೇರಿದಂತೆ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ಇರಬೇಕು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲಾ ಕ್ರಮಗಳನ್ನು ಹೊಣೆಗಾರಿಕೆಯಿಂದ ನಿರ್ವಹಿಸಬೇಕು’ ಎಂದು ಎಸ್.ಸುರೇಶ್‌ಕುಮಾರ್ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಅವರು ಮಾತನಾಡಿ, ‘ಪ್ರಶಸ್ತಿ ಪುರಸ್ಕೃತರು, ಅಕಾಡೆಮಿಯ ಸದಸ್ಯರು ಸೇರಿದಂತೆ ಗಣ್ಯರ ವಾಸ್ತವ್ಯಕ್ಕೆ ಅಗತ್ಯ ಏರ್ಪಾಡು ಮಾಡಲಾಗುತ್ತದೆ. ಇಲ್ಲಿನ ಸಂಸ್ಕೃತಿ ವೈಶಿಷ್ಟ್ಯ ಪರಿಚಯಿಸುವ ನೆನಪಿನ ಕಾಣಿಕೆ ನೀಡಲಾಗುತ್ತದೆ. ಜಿಲ್ಲೆಗೆ ಒಳ್ಳೆಯ ಹೆಸರು ತರುವ ಸ್ಮರಣೀಯ ಕಾರ್ಯಕ್ರಮ ಆಯೋಜನೆಗೆ ಸಕಲ ಕ್ರಮ ವಹಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದರು.

ಶಾಸಕರಾದ ಎನ್.ಮಹೇಶ್, ಸಿ.ಎಸ್.ನಿರಂಜನ್‌ಕುಮಾರ್, ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಎಸ್.ವಿನಯ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್‌ ಎನ್.ನಮ್ರತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ನಿಜಧ್ವನಿ ಗೋವಿಂದರಾಜು, ಚಾ.ಗು.ನಾಗರಾಜು, ಆಲೂರು ನಾಗೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT