ಸೋಮವಾರ, ಜನವರಿ 27, 2020
27 °C
ಸಿಬ್ಬಂದಿಯಿಂದ ಕರಪತ್ರ ಹಂಚಿಕೆ, ಇಂದಿನಿಂದಲೇ ಜಾರಿ? ಜಿಲ್ಲಾಧಿಕಾರಿ ಸಭೆ ಇಂದು

ಕಣ್ಣೇಗಾಲದಲ್ಲೂ ಕೊಡಬೇಕಿನ್ನು ಟೋಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೊಳ್ಳೇಗಾಲ ಮತ್ತು ಕಲ್ಲಿಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿ 766ರಲ್ಲಿ (ಹಳೆ ಸಂಖ್ಯೆ 212) ಬರುವ ಗುಂಡ್ಲುಪೇಟೆ ತಾಲ್ಲೂಕಿನ ಕಣ್ಣೇಗಾಲ ಗ್ರಾಮದ ಬಳಿಯ ಟೋಲ್‌ ಕೇಂದ್ರದಲ್ಲಿ ಇನ್ನು ಮುಂದೆ ಟೋಲ್‌ ಸಂಗ್ರಹಿಸುವುದು ಖಚಿತವಾಗಿದೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಟೋಲ್‌ ಸಂಗ್ರಹ ಆರಂಭವಾಗುತ್ತದೆ ಎಂದು ಹೇಳುವ ಸೂಚನಾ ಪತ್ರವನ್ನು ಸವಾರರಿಗೆ ಹಂಚಲು ಆರಂಭಿಸಿದ್ದಾರೆ. ಮಂಗಳವಾರದಿಂದಲೇ ಟೋಲ್‌ ಪಾವತಿಸಬೇಕು ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ, ಇದಿನ್ನೂ ದೃಢಪಟ್ಟಿಲ್ಲ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಂಗಳವಾರ ಸಭೆ ನಡೆಸಲಿದ್ದಾರೆ. ಆ ಬಳಿಕ ದಿನಾಂಕ ಸ್ಪಷ್ಟವಾಗಲಿದೆ.

‘ಟೋಲ್‌ ಸಂಗ್ರಹದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ. ಇದೇ ವಿಚಾರವಾಗಿ ಮಂಗಳವಾರ ಸಭೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೊಳ್ಳೇಗಾಲ ಮತ್ತು ಕಲ್ಲಿಕೋಟೆ ನಡುವಿನ ರಾಷ್ಟ್ರೀಯ ಹೆದ್ದಾರಿ ಪೈಕಿ ರಾಜ್ಯದಲ್ಲಿ ಹಾದುಹೋಗಿರುವ 150 ಕಿ.ಮೀ ವ್ಯಾಪ್ತಿಯಲ್ಲಿರುವ ಮೂರು ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಕಣ್ಣೇಗಾಲದ ಬಳಿ ನಿರ್ಮಿಸಿರುವ ಕೇಂದ್ರವೂ ಒಂದು.

ಸಿದ್ಧತೆ ನಡೆದಿರಲಿಲ್ಲ: ಡಿಸೆಂಬರ್‌ 1ರವರೆಗೆ ಇಲ್ಲಿ ಟೋಲ್‌ ಸಂಗ್ರಹಕ್ಕೆ ಯಾವುದೇ ಸಿದ್ಧತೆ ನಡೆದಿರಲಿಲ್ಲ. ಹಾಗಾಗಿ ಟೋಲ್‌ ಸಂಗ್ರಹಿಸುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಟೋಲ್‌ ಪ್ಲಾಜಾ ಆರಂಭದ ಸೂಚನಾ ಪತ್ರವನ್ನು ಪ್ರಕಟಿಸಿದ್ದು, ಅದರಲ್ಲಿ ದಿನಾಂಕ: ಡಿಸೆಂಬರ್‌ 7. ಬೆಳಿಗ್ಗೆ 8ಗಂಟೆ ಎಂದು ಇದೆ.  

ಸೋಮವಾರ ಈ ರಸ್ತೆಯಲ್ಲಿ ಹೋಗುವ ವಾಹನಗಳನ್ನು ತಡೆಯುತ್ತಿದ್ದ ಸಿಬ್ಬಂದಿ, ಸೂಚನಾ ಪತ್ರವನ್ನು ನೀಡಿ ಮಂಗಳವಾರದಿಂದಲೇ ಟೋಲ್‌ ಆರಂಭವಾಗುತ್ತದೆ ಎಂದು ಹೇಳುತ್ತಿದ್ದರು.

ಪ್ರತಿಕ್ರಿಯಿಸಿ (+)