ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ| ಟಿಕೆಟ್‌ ಯಾರಿಗೆ?: ಸಂದೇಶ ನೀಡದ ವರಿಷ್ಠರು

ಕೊಳ್ಳೇಗಾಲ: ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು
Last Updated 23 ಫೆಬ್ರುವರಿ 2023, 4:22 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂಬ ಸಂದೇಶವನ್ನು ವರಿಷ್ಠರು ಮಂಗಳವಾರದ ಪ್ರಜಾಧ್ವನಿ ಯಾತ್ರೆಯಲ್ಲಿ ನೀಡಬಹುದು ಎಂಬ ಕ್ಷೇತ್ರದ ‘ಕೈ’ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.

ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಕೊಳ್ಳೇಗಾಲದಲ್ಲಿ ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ಸವಾಲಾಗಿದೆ.

ಕೊಳ್ಳೇಗಾಲ ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿದ್ದ ಎ.ಆರ್.ಕೃಷ್ಣಮೂರ್ತಿ, ಎಸ್‌.ಜಯಣ್ಣ ಹಾಗೂ ಎಸ್.ಬಾಲರಾಜು ಅವರು ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮೂವರು ತಮ್ಮದೇ ಬೆಂಬಲಿಗರ ಪಡೆ ಹೊಂದಿರುವುದರಿಂದ ಒಬ್ಬರಿಗೆ ಟಿಕೆಟ್‌ ಕೊಟ್ಟರೆ ಇನ್ನಿಬ್ಬರಿಗೆ ಅಸಮಾಧಾನವಾಗಲಿದೆ. ಇದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಹೊಡೆತ ಬೀಳಲಿದೆ ಎಂಬ ಚಿಂತೆ ವರಿಷ್ಠರನ್ನು ಕಾಡುತ್ತಿದೆ.

ಫೆಬ್ರುವರಿ ಮೊದಲ ವಾರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಕೂಡ ಹೇಳಿದ್ದರು. ಕನಿಷ್ಠ ಪಕ್ಷ ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಿಸದೇ ಇದ್ದರೂ, ಕೆಪಿಸಿಸಿ ಅಧ್ಯಕ್ಷರು ಪರೋಕ್ಷವಾಗಿ ಸಂದೇಶ ಕೊಡಬಹುದು ಎಂದು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಮೂವರ ಬೆಂಬಲಿಗರು ನಿರೀಕ್ಷೆಯಲ್ಲಿದ್ದರು.

ಆದರೆ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಅವರು ಮೂವರಲ್ಲಿ ಒಬ್ಬರಿಗೆ ಟಿಕೆಟ್‌ ನೀಡಲಾಗುತ್ತದೆ. ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಮೂವರೂ ಸರ್ಕಾರಿ ಕಾರಲ್ಲಿ ಓಡಾಡಲಿದ್ದಾರೆ ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

ಇದರ ನಡುವೆಯೇ, ಬಿಜೆಪಿಯ ಜಿ.ಎನ್‌.ನಂಜುಂಡಸ್ವಾಮಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲು ಒಲವು ತೋರಿದ್ದಾರೆ ಎಂಬುದನ್ನು ಸ್ವತಃ ಶಿವಕುಮಾರ್‌ ಅವರೇ ಬಹಿರಂಗಪಡಿಸಿರುವುದು ಕಾರ್ಯಕರ್ತರನ್ನು ಗೊಂದಲಕ್ಕೆ ಸಿಲುಕಿಸಿದೆ.

‘ಈಗಲೇ ಮೂರು ಜನ ಆಕಾಂಕ್ಷಿಗಳಿದ್ದಾರೆ. ಈಗ ಅವರು ಬಂದರೆ, ಈ ಸಂಖ್ಯೆ ನಾಲ್ಕಕ್ಕೆ ಏರುತ್ತದೆ’ ಎಂದು ಅವರು ಮಾತನಾಡಿಕೊಳ್ಳುತ್ತಿದ್ದಾರೆ. ನಂಜುಂಡಸ್ವಾಮಿ ಕಾಂಗ್ರೆಸ್‌ಗೆ ಬಂದರೆ ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ, ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂದೂ ಹೇಳಲಾಗುತ್ತಿದೆ.

ಒಗ್ಗಟ್ಟಿನ ಕೊರತೆ: ಕೊಳ್ಳೇಗಾಲ ಕ್ಷೇತ್ರದಲ್ಲಿ ಮೂವರೂ ಮುಖಂಡರದ್ದು ಪ್ರತ್ಯೇಕ ಬಣಗಳಿವೆ. ವರಿಷ್ಠರು ಎಲ್ಲರನ್ನೂ ಒಂದು ಗೂಡಿಸಲು ಮಾಡುವ ಪ್ರಯತ್ನಗಳು ಪೂರ್ಣವಾಗಿ ಸಾಫಲ್ಯ ಕಂಡಿಲ್ಲ.

ಮಂಗಳವಾದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಎ.ಆರ್.ಕೃಷ್ಣಮೂರ್ತಿ ಹೆಸರು ಹೇಳಿದಾಗ ಅವರ ಅಭಿಮಾನಿಗಳು ಚಪ್ಪಾಳೆ, ಶಿಳ್ಳೆ ಹೊಡೆದು ಜೈಕಾರ ಹಾಕಿದರು. ಬಾಲರಾಜು ಹಾಗೂ ಜಯಣ್ಣ ಹೆಸರು ಪ್ರಸ್ತಾಪಿಸುವ ಸಂದರ್ಭದಲ್ಲಿ ಅವರವರ ಅಭಿಮಾನಿಗಳು ಜೈಕಾರ ಕೂಗಿದರು.

ಡಿಕೆಶಿ ಭಾಷಣ ಮಾಡುವುದಕ್ಕು ಮೊದಲೇ ಕೃಷ್ಣಮೂರ್ತಿ ರಾಜ್ಯ ನಾಯಕರುಗಳಿಗೆ ಹಾರ ಶಾಲು ಹಾಕಿ ಸನ್ಮಾನಿಸಿದರು. ಬಾಲರಾಜು ಕೂಡ ಇದನ್ನೇ ಅನುಸರಿಸಿದರು.

ಭಾವುಕರಾಗಿ ಮತ ಭಿಕ್ಷೆ ಕೇಳಿದ ಎಆರ್‌ಕೆ

ಮೂವರೂ ಟಿಕೆಟ್‌ ಆಕಾಂಕ್ಷಿಗಳು ಸಮಾವೇಶದಲ್ಲಿ ಮಾತನಾಡಿದ್ದರು.

ವಿಶೇಷವೆಂದರೆ ಎ.ಆರ್‌.ಕೃಷ್ಣಮೂರ್ತಿ ಮಾತ್ರ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು.

ಜಯಣ್ಣ ಅವರು ಶಾಸಕ ಎನ್‌.ಮಹೇಶ್‌ ವಿರುದ್ಧ ಮಾತನಾಡಿದರೆ, ಬಾಲರಾಜು ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಭಾಷಣದ ವೇಳೆ ಭಾವುಕರಾದ ಕೃಷ್ಣಮೂರ್ತಿ ಸಂತೇಮರಹಳ್ಳಿಯಲ್ಲಿ ಧ್ರುವನಾರಾಯಣ ವಿರುದ್ಧ ಒಂದು ಮತದಿಂದ ಸೋಲು ಕಂಡಿದ್ದನ್ನು ಉಲ್ಲೇಖಿಸಿ, ‘ಒಂದು ಮತದ ಅಂತರದಿಂದ ಸೋಲನ್ನು ಅನುಭವಿಸಿದ್ದೇನೆ. ಚುನಾವಣೆಯಲ್ಲಿ ಒಂದು ಮತವೂ ಅಮೂಲ್ಯ. ಆ ಸೋಲಿನಿಂದ ರಾಜಕೀಯ ಜೀವನ ಹಾಳಾಗಿದೆ. ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ. ನನಗೆ ಒಂದು ಬಾರಿ ಅವಕಾಶ ಮಾಡಿ ಕೊಡಿ. ನಾನು ಮತ ಭಿಕ್ಷೆ ಕೇಳುತ್ತಿದ್ದೇನೆ’ ಎಂದು ಹೇಳುತ್ತಾ, ಜನರನ್ನು ಸೆಳೆಯಲು ಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT