ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ: ಕುತೂಹಲಕ್ಕೆ ಗುರುವಾರ ತೆರೆ

ಮಧ್ಯಾಹ್ನ 2 ಗಂಟೆಗೆ ಚುನಾವಣೆ, ಅಭ್ಯರ್ಥಿ ಕಣಕ್ಕಿಳಿಸಿದ ಬಿಎಸ್‌ಪಿ
Last Updated 28 ಅಕ್ಟೋಬರ್ 2020, 14:28 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಗುರುವಾರ ನಡೆಯಲಿದ್ದು, ಆಡಳಿತ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

31 ಸದಸ್ಯ ಬಲದ ನಗರಸಭೆಯಲ್ಲಿ ಬಹುಮತ ಪಡೆಯಲು 16 ಸದಸ್ಯರ ಬೆಂಬಲ ಬೇಕು. 11 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌, ನಾಲ್ವರು ಪಕ್ಷೇತರರರು ಹಾಗೂ ಬಿಎಸ್‌ಪಿಯ ಬೆಂಬಲ ಪಡೆದು ಅಧಿಕಾರಕ್ಕೆ ಏರಲು ಪ್ರಯತ್ನ ನಡೆಸುತ್ತಿದೆ.

ಬಿಎಸ್‌ಪಿ ಒಂಬತ್ತು ಸದಸ್ಯರನ್ನು ಹೊಂದಿದ್ದರೂ, ಏಳು ಮಂದಿ ಸ್ಥಳೀಯ ಶಾಸಕ ಎನ್‌.ಮಹೇಶ್‌ ಅವರ ಬೆಂಬಲಿಗರಿದ್ದಾರೆ. ಇಬ್ಬರು ಮಾತ್ರ ಬಿಎಸ್‌ಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.

ಬಿಎಸ್‌ಪಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, 23ನೇ ವಾರ್ಡ್‌ ಸದಸ್ಯೆ ಜಯಮರಿ ಅವರನ್ನು ಅಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಎಲ್ಲ 9 ಮಂದಿ ಸದಸ್ಯರಿಗೆ ವಿಪ್‌ ಜಾರಿ ಮಾಡಿದೆ. ಸದಸ್ಯರ ಮನೆಗೆ ಅಂಚೆ ಮೂಲಕ ಹಾಗೂ ಮನೆಗೆ ತೆರಳಿ ನೋಟಿಸ್‌ ನೀಡಿದೆ. ಒಂದು ವೇಳೆ ಬಿಎಸ್‌ಪಿ ಚುನಾವಣಾ ಕಣದಿಂದ ಹಿಂದೆ ಸರಿಯದೇ ಇದ್ದರೆ, ಕಾಂಗ್ರೆಸ್‌ಗೆ ಗೆಲುವು ಕಷ್ಟವಾಗಲಿದೆ.

ಇತ್ತ ಬಿಜೆಪಿ ಹಾಗೂ ಎನ್‌.ಮಹೇಶ್‌ ಅವರು ಮೈತ್ರಿ ಮಾಡಿಕೊಂಡಿದ್ದು, ಎನ್‌.ಮಹೇಶ್‌ ಬೆಂಬಲಿಗರು ಏಳು ಹಾಗೂ ಬಿಜೆಪಿ ಸದಸ್ಯರು ಏಳು ಸೇರಿದಂತೆ 14 ಮಂದಿ ಸದಸ್ಯರಾಗುತ್ತಾರೆ. ಅಧಿಕಾರಕ್ಕೆ ಏರಲು ಇನ್ನೂ ಇಬ್ಬರ ಬೆಂಬಲ ಬೇಕಿದೆ. ಪಕ್ಷೇತರರ ಬೆಂಬಲ ಪಡೆಯಲು ಅವರು ಯಶಸ್ವಿಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕು.

ಕಾಂಗ್ರೆಸ್‌ ಮುಖಂಡರು, ಬಿಜೆಪಿ ಮುಖಂಡರು, ಎನ್‌.ಮಹೇಶ್‌ ಅವರಾಗಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡಲಾಗಿದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಗುರುವಾರವಷ್ಟೇ ಅದು ತಿಳಿಯಲಿದೆ.

ಗೋಪ್ಯ ಸಭೆ: ಈ ಮಧ್ಯೆ ಪಕ್ಷಗಳ ಮುಖಂಡರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ.ಮಂಗಳವಾರ ರಾತ್ರಿ ಬಿ.ಎಸ್.ಪಿ ರಾಜ್ಯ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ ಅವರೊಂದಿಗೆ ಕಾಂಗ್ರೆಸ್‍ ಮುಖಂಡರಾದ ಎಸ್.ಜಯಣ್ಣ, ಎಸ್.ಬಾಲರಾಜು ಅವರು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಎಸ್‌ಪಿ ತನ್ನ ಕಾರ್ಯತಂತ್ರವನ್ನು ಇನ್ನೂ ರಹಸ್ಯವಾಗಿ ಇರಿಸಿಕೊಂಡಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಅವರು, ‘ನಾವು ಯಾರೊಂದಿಗೂ ಸೇರಿಲ್ಲ. ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ಎಲ್ಲ ಸದಸ್ಯರಿಗೂ ವಿಪ್‌ ಜಾರಿ ಮಾಡಿದ್ದೇವೆ. ಪಕ್ಷೇತರರ ಬೆಂಬಲ ಕೇಳಿದ್ದೇವೆ. ಅವರು ಮತ ಹಾಕುವ ವಿಶ್ವಾಸವಿದೆ’ ಎಂದು ಹೇಳಿದರು.

ಕೊಳ್ಳೇಗಾಲದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ‘ವಿಪ್‌ ಜಾರಿ ಮಾಡಿ, ನೋಟಿಸ್‌ ನೀಡಿದ್ದೇವೆ. ಯಾರಾದರೂ ಅಡ್ಡ ಮತದಾನ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT