ಬುಧವಾರ, ಅಕ್ಟೋಬರ್ 28, 2020
20 °C

ಕೊಳ್ಳೇಗಾಲ ಸಂಪೂರ್ಣ ಸ್ತಬ್ಧ, ಶಾಸಕರು ಪ್ರತಿಭಟನೆಯಲ್ಲಿ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಖಂಡಿಸಿ ಕರೆನೀಡಲಾಗಿದ್ದ ಕರ್ನಾಟಕ ಬಂದ್‌ ಅಂಗವಾಗಿ ಕೊಳ್ಳೇಗಾಲದಲ್ಲೂ ಪ್ರತಿಭಟನೆ ನಡೆಯಿತು. 

ನಗರದ ಆರ್.ಎಂ.ಸಿ ಆವರಣದಲ್ಲಿ ಸಮಾವೇಶಗೊಂಡ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷದ ಮುಖಂಡರು ನಗರದ ಐಬಿ ರಸ್ತೆ, ಡಾ.ರಾಜ್‍ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಹೆದ್ದಾರಿಯಲ್ಲಿ ಮಾನವ ಸರಪಣಿ ನಿರ್ಮಿಸಿದ ರೈತ ಸಂಘ, ಮೋದಿ ವೇಷಧರಿಸಿದ್ದ ರೈತನ ಎದೆಗೆ ಕಲ್ಲು ಇಡುವ ಮೂಲಕ ಪ್ರತಿಭಟಿಸಿದರು. ಶಾಸಕರಾದ ಎನ್.ಮಹೇಶ್ ಮತ್ತು ಆರ್.ನರೇಂದ್ರ ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಶಾಸಕ ಎನ್.ಮಹೇಶ್ ಮಾತನಾಡಿ ಅವರು, ‘ನಾನು ಯಾವಾಗಲೂ ರೈತ ಪರ ನಿಲ್ಲುತ್ತೇನೆ. ನನಗೆ ಯಾವ ಪಕ್ಷವೂ ಮುಖ್ಯವಲ್ಲ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಸಮಗ್ರವಾಗಿ ಮಾತನಾಡಲು ನನಗೆ ಸದನದಲ್ಲಿ ಅವಕಾಶ ಸರಿಯಾಗಿ ಸಿಗಲಿಲ್ಲ. ಸಿಕ್ಕ ಸಮಯದಲ್ಲಿ ತಿದ್ದುಪಡಿ ಕಾಯ್ದೆಗಳಿಂದ ರೈತರಿಗಿರುವ ಅನನುಕೂಲದ ಬಗ್ಗೆ ಮಾತನಾಡಿದ್ದೇನೆ’ ಎಂದರು. 

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ ಅವರು ಮಾತನಾಡಿ, ‘ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಇನ್ನಷ್ಟು ಉಗ್ರ ಹೋರಾಟ ಮಾಡುತ್ತೇನೆ’ ಎಂದು ಎಚ್ಚರಿಸಿದರು. 

 

ಸಂರ್ಪೂರ್ಣ ಬಂದ್: ಬಂದ್‌ನಿಂದಾಗಿ ಕೊಳ್ಳೇಗಾಲ ನಗರ ಸ್ತಬ್ಧಗೊಂಡಿತ್ತು. ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು.

ನಗರದ ಡಾ.ಬಿ.ಆರ್ .ಅಂಬೇಡ್ಕರ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳಲ್ಲಿರುವ ಅಂಗಡಿಗಳು ಮುಚ್ಚಿದ್ದವು. ಆಟೊ, ಲಾರಿ, ಕಾರು ಮಾಲೀಕರ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ್ದರಿಂದ ಯಾವ ವಾಹನಗಳೂ ರಸ್ತೆಗಿಳಿಯಲಿಲ್ಲ.

ಹಾಲು, ತರಕಾರಿ, ಔಷಧ ಅಂಗಡಿಗಳು ತೆರೆದಿದ್ದವು. ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ನಂತರ ಪ್ರತಿಭಟನಕಾರರು ಅವುಗಳನ್ನು ಮುಚ್ಚಿಸಿದರು. 

ಪ್ರತಿಭಟನೆಯಲ್ಲಿ ನುಸುಳಿದ ರಾಜಕೀಯ

ವಿಧಾನಸಭೆ ಅಧಿವೇಶನದಲ್ಲಿ ರೈತರ ಪರವಾಗಿ, ಕಾಯ್ದೆ ವಿರುದ್ಧವಾಗಿ ಮಾತನಾಡಲು ಸಮಯ ಸಿಗಲಿಲ್ಲ ಎಂದು ಶಾಸಕ ಎನ್‌.ಮಹೇಶ್‌ ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ನ ಮುಖಂಡರು ವ್ಯಂಗ್ಯ ಮಾಡಿದ ಪ್ರಸಂಗವೂ ನಡೆಯಿತು.  

ಮಹೇಶ್‌ ಅವರ ನಂತರ ಮಾತನಾಡಿದ ಕಾಂಗ್ರೆಸ್‌ ಮುಖಂಡರಾದ ಎಸ್‌.ಬಾಲರಾಜು, ಎ.ಆರ್‌.ಕೃಷ್ಣಮೂರ್ತಿ ಅವರು, ‘ಮಹೇಶ್‌ ಅವರು ವಿರೋಧ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಸದನದಲ್ಲಿ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಲು ಅವಕಾಶ ದೊರೆಯುತ್ತಿತ್ತು. ಸ್ವತಂತ್ರ ಶಾಸಕರಾಗಿ ಇರುವುದ್ದರಿಂದ ಹೆಚ್ಚಿನ ಮಾನ್ಯತೆ ದೊರಕಿಲ್ಲ. ಹಾಗಿದ್ದರೂ ಮಹೇಶ್‌ ಅವರು ಬಿಜೆಪಿ ಪರವಾಗಿಯೇ ನಿಲ್ಲುತ್ತಾರೆ. ಹಲವು ಸಚಿವರ ಹಾಗೂ ಮುಖ್ಯಮಂತ್ರಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ’ ಎಂದರು. 

‘ಸದನದಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಅಥವಾ ಅವಕಾಶ ಸಿಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಬೇಕು. ಗೆದ್ದು ಎರಡೂವರೆ ವರ್ಷ ಕಳೆದರೂ ಯಾವ ಅಭಿವೃದ್ಧಿ ಮಾಡಿಲ್ಲ, ಅನುದಾನಗಳನ್ನು ತಂದಿಲ್ಲ’ ಎಂದು ಆರೋಪಿಸಿದರು. 

ಇದರಿಂದ ಅಸಮಾಧಾಗೊಂಡ ಮಹೇಶ್‌ ಅವರು, ಪ್ರತಿಭಟನೆ ಕೈಬಿಟ್ಟು ಹೊರ ನಡೆದರು. ಅವರು ಹೋದ ನಂತರ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಪೊಲೀಸರು ಸ್ಥಳದಿಂದ ಎಲ್ಲರನ್ನೂ ಕಳುಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು