ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಜಾತ್ರೆ: ಕೆಎಸ್‌ಆರ್‌ಟಿಸಿಗೆ ₹1.14 ಕೋಟಿ ಆದಾಯ

ಹಳಿಗೆ ಮರಳಿದ ಸಾರಿಗೆ ಸಂಸ್ಥೆಯ ದಿನ ಗಳಿಕೆ, ದಸರಾ ಸಂದರ್ಭದಲ್ಲೂ ಉತ್ತಮ ಆದಾಯ
Last Updated 7 ಅಕ್ಟೋಬರ್ 2022, 15:44 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಸೆಪ್ಟೆಂಬರ್‌ ಕೊನೆಯ ವಾರ ನಡೆದಿದ್ದ ಮಹಾಲಯ ಅಮಾವಾಸ್ಯೆ ಜಾತ್ರೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ₹1.14 ಕೋಟಿ ಆದಾಯ ಗಳಿಸಿದೆ.

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಬೆಟ್ಟದಲ್ಲಿ ಅದ್ದೂರಿ ಜಾತ್ರೆಗಳು ನಡೆದಿರಲಿಲ್ಲ. ಕೆಎಸ್‌ಆರ್‌ಟಿಸಿಗೂ ಆದಾಯ ಹೆಚ್ಚು ಬಂದಿರಲಿಲ್ಲ.ಈ ಬಾರಿ ವಿಜೃಂಭಣೆಯಿಂದ ಜಾತ್ರೆ ನಡೆದಿದ್ದು, ಲಕ್ಷಾಂತರ ಭಕ್ತರು ಭೇಟಿ ನೀಡಿ, ಮಾದಪ್ಪನ ಸ್ವಾಮಿಯ ದರ್ಶನ ಪಡೆದಿದ್ದಾರೆ.ಕೆಎಸ್‌ಆರ್‌ಟಿಸಿ ಕೂಡ ಮೂರು ದಿನಗಳ ಕಾಲ ಹೆಚ್ಚುವರಿಯಾಗಿ 250 ಬಸ್‌ಗಳನ್ನು ಓಡಿಸಿತ್ತು. ಮೂರು ದಿನಗಳಲ್ಲಿ ₹1.14 ಕೋಟಿ ಸಂಗ್ರಹವಾಗಿದೆ.

2019ರ ಮಹಾಲಯ ಅಮಾವಾಸ್ಯೆ ಜಾತ್ರೆಯ ಅವಧಿಯಷ್ಟೇ ಆದಾಯ ಬಂದಿದೆ ಎಂದು ಹೇಳುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.2019ರಲ್ಲಿ ₹1.16 ಕೋಟಿಯಷ್ಟು ಆದಾಯ ಬಂದಿತ್ತು.

ರಾಜ್ಯದ ಕೆಎಸ್‌ಆರ್‌ಟಿಸಿಯ ವಿವಿಧ ವಿಭಾಗಗಳ ಪೈಕಿ ಲಾಭದಾಯಕವಾಗಿ ಕಾರ್ಯಾಚರಿಸುತ್ತಿರುವ ವಿಭಾಗದಲ್ಲಿ ಚಾಮರಾಜನಗರ ವಿಭಾಗ ಪ್ರಮುಖವಾದುದು. ಮಹದೇಶ್ವರ ಬೆಟ್ಟದಂತಹ ಯಾತ್ರಾ ಸ್ಥಳ ಇರುವುದು ಕೆಎಸ್‌ಆರ್‌ಟಿಸಿ ಉತ್ತಮ ಆದಾಯ ಗಳಿಸುವುದಕ್ಕೆ ಕಾರಣವಾಗಿದೆ.

‘ಮಹಾಲಯ ಅಮಾವಾಸ್ಯೆ ಜಾತ್ರೆ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 250 ಹೆಚ್ಚುವರಿ ಬಸ್‌ಗಳನ್ನು ಹಾಕಿದ್ದೆವು. ಒಟ್ಟು 800 ಟ್ರಿಪ್‌ಗಳು ಆಗಿವೆ. 2019ರ ಮಹಾಲಯ ಅಮಾವಾಸ್ಯೆ ಜಾತ್ರೆ ಸಮಯದಲ್ಲಿ ಬಂದ ಆದಾಯಷ್ಟೇ ಆದಾಯ ಈ ಬಾರಿ ಬಂದಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಳ್ಳೇಗಾಲ ಹಾಗೂ ಬೆಟ್ಟದ ನಡುವೆ ನೇರವಾಗಿ ಹೆಚ್ಚುವರಿ ಬಸ್‌ ಓಡಿಸಿದ್ದೆವು. ಹಾಗಾಗಿ, ಜನರಿಗೂ ಅನುಕೂಲವಾಗಿದೆ. ಖಾಸಗಿ ಬಸ್‌ಗಳ ಓಡಾಟವೂ ಹೆಚ್ಚಿತ್ತು. ಸ್ಥಳೀಯ ಪರವಾನಗಿ ಹೊಂದಿರುವ ಬಸ್‌ಗಳಲ್ಲದೆ, ಮಂಡ್ಯ, ಮೈಸೂರು ಮುಂತಾದ ಕಡೆಯಿಂದ ಬಂದ ಬಸ್‌ಗಳು ಸಂಚರಿಸುತ್ತಿದ್ದವು. ಸಂಚಾರ ಪರವಾನಗಿ ಇಲ್ಲದ ಬಸ್‌ಗಳಿಗೆ ಕಡಿವಾಣ ಹಾಕಿದ್ದರೆ, ನಮ್ಮ ಆದಾಯ ಇನ್ನಷ್ಟು ಹೆಚ್ಚುತ್ತಿತ್ತು’ ಎಂದು ಅವರು ಹೇಳಿದರು.

ದಸರಾಗೂ ಹೆಚ್ಚುವರಿ ಬಸ್‌: ಮೈಸೂರು ದಸರಾ ಅಂಗವಾಗಿಯೂ ಮೈಸೂರು ಹಾಗೂ ಜಿಲ್ಲೆಯ ಇತರ ಕಡೆಗಳಿಗೆ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಹಾಕಿತ್ತು.

‘ಮೈಸೂರು ವಿಭಾಗದವರು 50 ಹೆಚ್ಚುವರಿ ಬಸ್‌ಗಳನ್ನು ಕೇಳಿದ್ದರು. ನಾವು ಕೂಡ 40 ಹೆಚ್ಚುವರಿ ಬಸ್‌ಗಳನ್ನು ಹಾಕಿದ್ದೆವು. ಮೈಸೂರಿನಲ್ಲಿ ದೀಪಾಲಂಕಾರ ಇನ್ನೂ ಮುಂದುವರಿದಿರುವುದರಿಂದ ಅದರ ವೀಕ್ಷಣೆಗಾಗಿ ಜನರು ಈಗಲೂ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಹಾಗಾಗಿ ಹೆಚ್ಚುವರಿ ಬಸ್‌ಗಳಿಂದ ಬಂದ ಆದಾಯವನ್ನು ನಿಖರವಾಗಿ ಲೆಕ್ಕಹಾಕಿಲ್ಲ. ₹65 ಲಕ್ಷದಿಂದ ₹70 ಲಕ್ಷ ಬಂದಿರಬಹುದು’ ಎಂದು ಶ್ರೀನಿವಾಸ ಮಾಹಿತಿ ನೀಡಿದರು.

ದಿನದ ಗಳಿಕೆ ಕೋವಿಡ್‌ ಪೂರ್ವ ಸ್ಥಿತಿಗೆ

ಈ ಮಧ್ಯೆ, ಕೆಎಸ್‌ಆರ್‌ಟಿಸಿಯ ದಿನದ ಆದಾಯ ಕೂಡ ಕೋವಿಡ್‌ ಹಾವಳಿ ಆರಂಭವಾಗುವುದಕ್ಕಿಂತಲೂ ಮೊದಲಿದ್ದ ಸ್ಥಿತಿಗೆ ತಲುಪಿದೆ.

ಜಿಲ್ಲೆಯಲ್ಲಿ 467 ಮಾರ್ಗಗಳಿವೆ. 509 ಬಸ್‌ಗಳಿವೆ. ಈಗ ಪ್ರತಿ ದಿನ ಸರಾಸರಿ ₹55 ಲಕ್ಷ ಮೊತ್ತ ಸಂಗ್ರಹವಾಗುತ್ತಿದೆ. ಕೋವಿಡ್‌ ಪೂರ್ವದಲ್ಲಿ ದಿನಂಪ್ರತಿ ₹55 ಲಕ್ಷದಿಂದ ₹58 ಲಕ್ಷದವರೆಗೆ ಆದಾಯ ಬರುತ್ತಿತ್ತು.

--

ಕೋವಿಡ್‌ ಹಾವಳಿ ಕಡಿಮೆಯಾದ ಬಳಿಕ ಸಂಸ್ಥೆಯ ವಹಿವಾಟು ಸುಧಾರಿಸಿದೆ. ಆದಾಯ ಬಹುತೇಕ ಮೊದಲಿನ ಸ್ಥಿತಿಗೆ ಮರಳಿದೆ
ಶ್ರೀನಿವಾಸ ಬಿ. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT