ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Results: ಹನೂರು ತಾಲ್ಲೂಕಿಗೆ ಕೊನೆಯ ಸ್ಥಾನ

ಆರು ವರ್ಷಗಳಿಂದ ಮೊದಲಸ್ಥಾನ ಗಳಿಸಿದ್ದ ಶೈಕ್ಷಣಿಕ ವಲಯದ ಫಲಿತಾಂಶ 2 ವರ್ಷಗಳಿಂದ ಕುಸಿತ
Published 10 ಮೇ 2024, 4:47 IST
Last Updated 10 ಮೇ 2024, 4:47 IST
ಅಕ್ಷರ ಗಾತ್ರ

ಹನೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತವಾಗಿ ಆರು ಬಾರಿ ಪ್ರಥಮ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದ ಹನೂರು ಶೈಕ್ಷಣಿಕ ವಲಯವು ಎರಡು ವರ್ಷಗಳಿಂದ ಫಲಿತಾಂಶದಲ್ಲಿ ಹಿನ್ನಡೆ ಸಾಧಿಸುತ್ತಿದೆ. ಈ ಬಾರಿ ಜಿಲ್ಲೆಯಲ್ಲೇ ಕೊನೆಯ ಸ್ಥಾನ ಗಳಿಸಿದೆ.

ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಯಶಸ್ಸು ಸಾಧಿಸುತ್ತಿದ್ದ ಹನೂರು ಶೈಕ್ಷಣಿಕ ವಲಯ ಕಳೆದ ವರ್ಷದಿಂದ ಫಲಿತಾಂಶದಲ್ಲಿ ಕುಸಿಯುತ್ತಿರುವುದು ಪೋಷಕರಲ್ಲಿ ಆತಂಕವನ್ನುಂಟು ಮಾಡಿದೆ.

2018-19 ರಿಂದ ಸತತವಾಗಿ ಆರು ವರ್ಷಗಳ ಕಾಲ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಗಮನ ಸಳೆದಿತ್ತು. ಕಳೆದ ವರ್ಷ  ನಾಲ್ಕನೇ ಸ್ಥಾನ ಪಡೆದಿತ್ತು.

ಶೈಕ್ಷಣಿಕ ವಲಯದಲ್ಲಿ 18 ಸರ್ಕಾರಿ ಪ್ರೌಢಶಾಲೆಗಳಿವೆ, 4 ವಸತಿ ಶಾಲೆಗಳಿವೆ. ಉಳಿದಂತೆ 21 ಅನುದಾನಿತ ಹಾಗೂ ಖಾಸಗಿ ಶಾಲೆಗಳಿವೆ.

ಈ ಬಾರಿ 1,147 ಬಾಲಕರು, 1,115 ಬಾಲಕಿಯರು ಸೇರಿ 2,262 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1,599 ವಿದ್ಯಾರ್ಥಿಗಳು ಮಾತ್ರ ತೇರ್ಗಡೆಯಾಗಿದ್ದು ಶೇ 70.69 ಫಲಿತಾಂಶ ಬಂದಿದೆ.

ರಾಮಾಪುರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ  ಶೇ 98.00  ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಶೇ 20.00 ಫಲಿತಾಂಶ ಪಡೆದಿರುವ ಬಿಎಂಜಿ ಪ್ರೌಢಶಾಲೆ ಕೊನೆ ಸ್ಥಾನ ಪಡೆದಿದೆ.

ಶಿಕ್ಷಕರ ಕೊರತೆ: ಎರಡು ವರ್ಷಗಳಿಂದ ಫಲಿತಾಂಶ ಕುಸಿಯಲು ಶಿಕ್ಷಕರ ಕೊರತೆಯೂ ಕಾರಣವಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದ ಜೂನ್, ಜುಲೈ ತಿಂಗಳಲ್ಲಿ ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ಶೈಕ್ಷಣಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಹುತೇಕ ಶಿಕ್ಷಕರು ಬೇರೆಡೆ ವರ್ಗಾವಣೆಯಾದರು. ಇದನ್ನು ಸರಿದೂಗಿಸುವ ಸಲುವಾಗಿ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಆದರೆ, ಕೆಲವು ಕಡೆಗಳಲ್ಲಿ ಅತಿಥಿ ಶಿಕ್ಷಕರ ಅಲಭ್ಯತೆ ಕೂಡ ಫಲಿತಾಂಶ ಕುಸಿಯಲು ಕಾರಣ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ವಿದ್ಯಾರ್ಥಿಗಳಲ್ಲಿ ಆತಂಕ: ಈ ಬಾರಿ ವಿದ್ಯಾರ್ಥಿಗಳು ಆತಂಕದಲ್ಲೇ ಪರೀಕ್ಷೆ ಬರೆದಿದ್ದು ಕೂಡ ಫಲಿತಾಂಶ ಕುಸಿಯಲು ಕಾರಣ ಎನ್ನುತ್ತಾರೆ ಶಿಕ್ಷಕರು.

‘ಪರೀಕ್ಷಾ ಕೊಠಡಿಯೊಳಗೆ ಸಿಸಿ ಕ್ಯಾಮರಾ ಅಳವಡಿಕೆ ಮಕ್ಕಳಲ್ಲಿ ಆತಂಕ ಮೂಡಿಸಿದ ಪರಿಣಾಮ ಕೆಲವು ವಿದ್ಯಾರ್ಥಿಗಳು ಆತಂಕದಲ್ಲೇ ಪರೀಕ್ಷೆ ಎದುರಿಸಿರಬಹುದು. ಮೊದಲ ಬಾರಿ ಕ್ಯಾಮೆರಾ ಮುಂದೆ ಪರೀಕ್ಷೆ ಬರೆದುದ್ದರಿಂದ ಈ ರೀತಿ ಆಗಿದೆ. ಮುಂದಿನ ದಿನಗಳಲ್ಲಿ ಇದು ಅಭ್ಯಾಸವಾದರೆ ಫಲಿತಾಂಶವೂ ಏರಿಕೆಯಾಗಗಲಿದೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ನಂದಿನಿ ಬಿ.
ನಂದಿನಿ ಬಿ.

ತಾಲ್ಲೂಕಿಗೆ ಪ್ರಥಮ

ಪಟ್ಟಣದ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ಸೌಜನ್ಯ 599 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇದೇ ಶಾಲೆಯ ಬಿ. ನಂದಿನಿ 588 ಎಂ. ಭೂಮಿಕ 587 ಉತ್ತಮ್ ಗೌಡ 571 ನಂತರ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.

ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅಲ್ಲಿಗೆ ಅತಿಥಿ ಶಿಕ್ಷಕರು ಇಲ್ಲ ಇದರಿಂದಾಗಿ ಫಲಿತಾಂಶದಲ್ಲಿ ಇಳಿಮುಖವಾಗಿದೆ.
-ಮಹೇಶ್, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT