ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತಿಳಿಯಿರಿ; ಜವಾಬ್ದಾರಿಯಾಗಿ ವರ್ತಿಸಿ: ಎಎಸ್‌ಪಿ

ಕಾನೂನು ಸಬಲೀಕರಣ, ಮೆಗಾ ಕಾನೂನು ಅರಿವು ನೆರವು ಶಿಬಿರ ಮತ್ತು ಸೌಲಭ್ಯ ವಿತರಣೆ ಕಾರ್ಯಕ್ರಮ
Last Updated 6 ನವೆಂಬರ್ 2022, 14:31 IST
ಅಕ್ಷರ ಗಾತ್ರ

ಚಾಮರಾಜನಗರ: ‘ಶಿಕ್ಷಣದ ರೀತಿಯಲ್ಲಿ ಪ್ರತಿಯೊಬ್ಬರೂ ಕಾನೂನಿನ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಕಾನೂನುಗಳ ಬಗ್ಗೆ ಅರಿವು ಹೊಂದಿರಬೇಕು’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌ ಭಾನುವಾರ ಹೇಳಿದರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಾಗರಿಕರಿಗೆಕಾನೂನು ಸಬಲೀಕರಣ, ಮೆಗಾ ಕಾನೂನುಅರಿವುನೆರವು ಶಿಬಿರ ಮತ್ತು ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೊದಲೆಲ್ಲ ನ್ಯಾಯ ಪಡೆಯುವುದಕ್ಕಾಗಿ ಜನರು ನ್ಯಾಯಾಲಯ, ವಕೀಲರ ಬಳಿಗೆ ಹೋಗುತ್ತಿದ್ದರು. ಆದರೆ, ಈಗ ನ್ಯಾಯಾಂಗ ವ್ಯವಸ್ಥೆಯೇ ಜನರ ಬಳಿಗೆ ಬರುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ‍್ತಿಯಲ್ಲೂ ತೊಂದರೆಗೆ ಸಿಲುಕಿರುವವರಿಗೆ ಕಾನೂನಿನ ಬಗ್ಗೆ ತಿಳಿವಳಿಕೆ ನೀಡುವ, ನ್ಯಾಯ ದಾನ ಮಾಡಲು ಪ್ರಯತ್ನ ಮಾಡುತ್ತಿದೆ’ ಎಂದರು.

ಮೈ ಮಮರೆಯಬೇಡಿ: ಸಮಾಜದಲ್ಲಿ ಅಥವಾ ನಿತ್ಯ ಜೀವನದಲ್ಲಿ ಒಂದು ಕ್ಷಣ ಮೈಮರೆಯುವುದರಿಂದ ಹಲವರು ಕಾನೂನಿನ ಕುಣಿಕೆಗೆ ಸಿಲುಕುತ್ತಾರೆ. ಜನರು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಶಿಕ್ಷಣ ಪಡೆದವರು ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡರೆ, ಅನಕ್ಷರಸ್ಥರು ಇತರೆ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡು ನರಳುತ್ತಿರುತ್ತಾರೆ’ ಎಂದರು.

‘ಕಾನೂನು ಸೇವಾ ಪ್ರಾಧಿಕಾರವು ವಿವಿಧ ಕಾರ್ಯಕ್ರಮಗಳ ಮೂಲಕ ತೊಂದರೆಯಲ್ಲಿ ಸಿಲುಕಿದವರಿಗೆ ಕಾನೂನಿನ ನೆರವು ನೀಡುತ್ತದೆ. ಸಮಸ್ಯೆಯ ಸುಳಿಯಲ್ಲಿ ಸಿಲುಕಿದವರು ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದರೆ ಸಾಕು, ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಆದರೆ, ಪ್ರತಿಯೊಬ್ಬರು ತಪ್ಪು ಮಾಡುವುದಕ್ಕೂ ಮೊದಲೇ ಯೋಚಿಸಬೇಕು’ ಎಂದರು.

‘ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ದೇಶದಾದ್ಯಂತ ಜನರಿಗೆ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಸುಂದರ್‌ರಾಜ್‌ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಮಾತನಾಡಿ, ‘ಜನರಿಗೆ ಕಾನೂನುಗಳ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ ಆಗಾಗ ಅರಿವು ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಒಂದು ಬಾರಿ ಹೇಳಿದರೆ ಜನರಿಗೆ ಮರೆತು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ನಿಯಮಿತವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ವಿವಿಧ ಸಲಕರಣೆಗಳು, ಇ–ಕಾರ್ಡ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ತಹಶೀಲ್ದಾರ್‌ ಬಸವರಾಜು, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಗಂಗಾಧರ್‌ ಇದ್ದರು.

‘ಮಕ್ಕಳ ಮೇಲೆ ಗಮನ ಇಡಿ’
ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಪೋಕ್ಸೊ ಪ್ರಕರಣಗಳನ್ನು ಉಲ್ಲೇಖಿಸಿ ಮಾತನಾಡಿದ ಸುಂದರ್‌ರಾಜ್‌, ‘ಶಾಲೆಗೆ ಹೋಗುವ ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಗಮನಹರಿಸಬೇಕು. ಒಂದು ಕ್ಷಣ ಮೈಮರತರೆ ನಡೆಯಬಾರದ್ದು ನಡೆದು, ಜೀವನ ಪೂರ್ತಿ ನರಳಾಡಬೇಕಾಗುತ್ತದೆ. ಕಾನೂನಿನ ಅಡಿ ಪರಿಹಾರ ಸಿಕ್ಕಿದರೂ, ಮಾನಸಿಕವಾಗಿ ಆಗಿರುವ ನೋವು, ಆಘಾತದಿಂದ ಹೊರಬರುವುದಕ್ಕೆ ಆಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT