ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

20 ವರ್ಷಗಳ ವನವಾಸಕ್ಕೆ ಮುಕ್ತಿ ಕೊಡಿ: ಬಾಲರಾಜ್‌

ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ
Published 23 ಮಾರ್ಚ್ 2024, 4:29 IST
Last Updated 23 ಮಾರ್ಚ್ 2024, 4:29 IST
ಅಕ್ಷರ ಗಾತ್ರ

ಹನೂರು/ಕೊಳ್ಳೇಗಾಲ: '20 ವರ್ಷಗಳಿಂದ ರಾಜಕೀಯ ವನವಾಸ ಅನುಭವಿಸಿದ್ದೇನೆ. ಈ ಬಾರಿ ಲೋಸಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದೆ.  ನನ್ನ ವನವಾಸಕ್ಕೆ ಕ್ಷೇತ್ರದ ಜನರು ಮುಕ್ತಿ ನೀಡಬೇಕು’ ಎಂದು  ಚಾಮರಾಜನಗರ ಮೀಸಲು ಕ್ಷೇತ್ರದ ಅಭ್ಯರ್ಥಿ ಎಸ್‌.ಬಾಲರಾಜ್‌ ಶುಕ್ರವಾರ ಮನವಿ ಮಾಡಿದರು. 

ಹನೂರು ಮತ್ತು ಕೊಳ್ಳೇಗಾಲದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವಶ್ಯಕತೆ ಇದೆ. ಹಾಗಾಗಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಬೇಕು. ಅದಕ್ಕಾಗಿ ಜನರು ಕಾತರರಾಗಿದ್ದಾರೆ. ಕಾಂಗ್ರೆಸ್ ಪಕ್ಷವು ನನಗೆ ದ್ರೋಹ ಮಾಡಿದೆ. ಅದಲ್ಲದೆ ನನಗೆ ಯಾವ ಅಧಿಕಾರವನ್ನು ಸಹ ನೀಡಿಲ್ಲ. ಅಲ್ಲಿ ಜೀತ ಮಾಡಿದ್ದು ಸಾಕಾಯಿತು. ನಾನು ಅಲ್ಲೇ ಇದ್ದಿದ್ದರೆ ಉಳಿದಿದ್ದರೆ ನನ್ನ ರಾಜಕೀಯವನ್ನು ಮುಗಿಸುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣ ಮಾಡುತ್ತಿದೆ. ಅಳಿಯ, ಮಗ, ಸೊಸೆ, ಹೆಂಡತಿಗೆ, ಸಹೋದರರಿಗೆ ಟಿಕೆಟ್ ನೀಡುತ್ತಿದೆ’ ಎಂದರು. 

‘ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ಸಿಕ್ಕಿದೆ. ಕೇಂದ್ರದ ನಾಯಕರು, ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಾರೆ. ರಾಜಕೀಯದಲ್ಲಿ ಮುಂದೆ ಏನಾಗುತ್ತದೆ ಎಂಬುದು ತಿಳಿದಿಲ್ಲ. ಇದೊಂದು ಅವಕಾಶ ಸಿಕ್ಕಿದೆ. ಕ್ಷೇತ್ರದ ಜನರು ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಮಾತನಾಡಿ, ‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2004ರಿಂದ 2014ರವರೆಗೆ ದೇಶವನ್ನು ನಿರಂತರವಾಗಿ ಲೂಟಿ ಮಾಡುವ ಮೂಲಕ ಜನರ ತಲಾದಾಯವನ್ನು ₹241 ತಂದು ನಿಲ್ಲಿಸಿತ್ತು. ಆದರೆ ಹತ್ತು ವರ್ಷಗಳ ಅವಧಿಯಲ್ಲಿ  ವಿವಿಧ ಯೋಜನೆಯಡಿ ₹30 ಲಕ್ಷ ಕೋಟಿ ಹಣವನ್ನು ನೇರ ನಗದು ಮೂಲಕ ಜಮೆ ಮಾಡುವ ಮೂಲಕ ನರೇಂದ್ರ ಮೋದಿಯವರು ತಲಾ ಆದಾಯವನ್ನು ₹961ಕ್ಕೆ ಏರಿಕೆ ಮಾಡಿದ್ದಾರೆ. ಮೂರನೇ ಅವಧಿಗೆ ಅವರನ್ನು ಪ್ರಧಾನಿ ಮಾಡಿದರೆ ತಲಾ ಆದಾಯವನ್ನು ₹1500ಕ್ಕೆ ಏರಿಕೆ ಮಾಡಲಿದ್ದಾರೆ’ ಎಂದರು. 

‘ಲೋಕಸಭಾ ಚುನಾವಣಾ ಯುದ್ಧಕ್ಕೆ ನಾವು ಸಿದ್ಧರಿದ್ದೇವೆ. ಈ ಬಾರಿ ಬಿಜೆಪಿ ಗೆಲ್ಲುವುದು ಖಚಿತ. ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗಾಗಲೇ ಜನರು ರೊಚ್ಚಿಗೆದ್ದಿದ್ದಾರೆ. ಅದಲ್ಲದೆ ಕಾಂಗ್ರೆಸ್ ಸರ್ಕಾರ ಲೂಟಿ ಸರ್ಕಾರ ಎಂದು ಹೆಸರು ವಾಸಿಯಾಗುತ್ತಿದೆ. ಹಾಗಾಗಿ, ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೇ ಇಲ್ಲ’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್ ಮಾತನಾಡಿ, ‘ಬಾಲರಾಜ್ ಉತ್ತಮ ಅಭ್ಯರ್ಥಿ. ಒಳ್ಳೆಯ ಕೆಲಸಗಾರರು. ಒಳ್ಳೆಯ ನಾಯಕನನ್ನು ಕಳೆದುಕೊಂಡೆವಲ್ಲ ಎಂದು ಕಾಂಗ್ರೆಸ್‌ನವರಯ ಪಶ್ಚಾತ್ತಾಪ ಪಡುತ್ತಿದ್ದಾರೆ. ಸಿದ್ದರಾಮಯ್ಯ ಬರಪರಿಹಾರ ಕೊಡುತ್ತೇವೆ ಎಂದರು ಇನ್ನೂ ಕೊಟ್ಟಿಲ್ಲ. ಗ್ಯಾರಂಟಿ ಯೋಜನೆ ವಿಫಲವಾಗಿದೆ. ದಲಿತರ ಹಣವನ್ನು ಬೇರೆಯ ಕಾರ್ಯಕ್ರಮಗಳಿಗೆ ಬಳಸಿಕೊಂಡಿದೆ. ಇದು ದಲಿತ ವಿರೋಧಿ ಸರ್ಕಾರ. ಯುವಕರಿಗೆ ವಂಚಿಸಿದ ಸರ್ಕಾರ’ ಎಂದು ಟೀಕಿಸಿದರು.

ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ  ಜನಧ್ವನಿ ಬಿ. ವೆಂಕಟೇಶ್ ಮಾತನಾಡಿದರು.

ಚುನಾವಣೆ ಉಸ್ತುವಾರಿ ಫಣೇಶ್, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನಪ್ಪ, ರಾಷ್ಟ್ರೀಯ ಪರಿಷತ್ ಸದಸ್ಯ ಬೂದುಬಾಳು ವೆಂಕಟಸ್ವಾಮಿ, ಮುಖಂಡರಾದ ಡಾ.ಪ್ರೀತನ್ ನಾಗಪ್ಪ, ನಿಶಾಂತ್, ನೂರೊಂದು ಶೆಟ್ಟಿ, ದತ್ತೇಶ್‌ ಕುಮಾರ್‌ ಹನೂರು ಮಂಡಲ ಅಧ್ಯಕ್ಷ ವೃಷಭೇಂದ್ರ, ಮಲೆ ಮಹದೇಶ್ವರ ಬೆಟ್ಟ  ಮಂಡಲದ ಅಧ್ಯಕ್ಷ ಚಂಗವಾಡಿ ರಾಜು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಬಾಲರಾಜ್‌ ಮತ್ತು ಮುಖಂಡರು ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. 

‘ಪ್ರಿಯಾಂಕ್‌ ಖರ್ಗೆ ಎಳಸು ಗಂಡು’

ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಎನ್‌.ಮಹೇಶ್‌ ‘ಆತ ಇನ್ನೂ ಎಳಸು ಗಂಡು. ಆ ಯುವಕನಿಗೆ ಸಚಿವನಾಗುವ ಅರ್ಹತೆಯೇ ಇಲ್ಲ ಒಬ್ಬ ಪ್ರಧಾನಿ ವಿರುದ್ಧ ಲಘುವಾಗಿ ಮಾತನಾಡಿದ್ದಾರೆ. ಇದಕ್ಕೆ ಅವರ ತಂದೆ ಉತ್ತರಿಸಬೇಕು’ ಎಂದು ಹೇಳಿದರು.  ‘ಬಿಜೆಪಿಯವರು ಚುನಾವಣೆಯ ಸಂದರ್ಭದಲ್ಲೇ ಐಟಿ–ಇಡಿ ದಾಳಿ ಮಾಡಿಸುತ್ತಾರೆ ಎಂದು ಪ್ರಿಯಾಂಕ್‌ ಹೇಳುತ್ತಿದ್ದಾರೆ. ಇದು ಶುದ್ಧ ಸುಳ್ಳು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿನಿತ್ಯ ಸುಳ್ಳು ಆರೋಪಗಳ ಮಳೆಯನ್ನೇ ಸುರಿಸುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಂದು ಭ್ರಷ್ಟಾಚಾರದ ವಿರುದ್ಧ ಮಾತನಾಡಿದರು. ಆದರೆ ಇಂದು ಅವರೇ ಭ್ರಷ್ಟಾಚಾರದಲ್ಲೇ ತೊಡಗಿದ್ದಾರೆ. ಹಾಗಾಗಿ ಇಡಿ- ಐಟಿ ದಾಳಿ ಮಾಡಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT