ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಿಜೆಪಿ ಪರ ಅಲೆ: ವಿಜಯೇಂದ್ರ

ಚಾಮರಾಜನಗರದಲ್ಲಿ ಕಾರ್ಯಕರ್ತರ ಸಭೆ; ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
Published 7 ಜನವರಿ 2024, 6:22 IST
Last Updated 7 ಜನವರಿ 2024, 6:22 IST
ಅಕ್ಷರ ಗಾತ್ರ

ಚಾಮರಾಜನಗರ: ‘ಆರೇಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ರಾಜಕೀಯ ವಾತಾವರಣ ಬದಲಾಗಿದ್ದು, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯ ಫಲಿತಾಂಶ ಇಡೀ ದೇಶದಲ್ಲಿ ಮಾತ್ರವಲ್ಲದೆ, ರಾಜ್ಯದಲ್ಲೂ ಬಿಜೆಪಿ ಪರವಾಗಿ ಅಲೆ ಸೃಷ್ಟಿಸುವಂತೆ ಮಾಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಹೇಳಿದರು. 

ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆಯಲ್ಲಿ ಏನೇನು ನಡೆಯಿತು ಎಂದು ಚರ್ಚೆ ಮಾಡಲು ನಾನು ಬಯಸುವುದಿಲ್ಲ. ಆದರೆ, ನಾನು ಭವಿಷ್ಯದ ಬಗ್ಗೆ ವಿಶ್ವಾಸ ಇರಿಸಿಕೊಂಡಿದ್ದೇನೆ. ಆರೇಳು ತಿಂಗಳ ಹಿಂದೆ ರಾಜ್ಯದಲ್ಲಿ ಯಾವ ರೀತಿಯ ವಾತಾವರಣ ಇತ್ತು? ಈಗ ಯಾವ ರೀತಿ ಬದಲಾವಣೆಯಾಗಿದೆ?  ಅಧ್ಯಕ್ಷನಾದ ಬಳಿಕ ನಂತರ ಒಂದೂವರೆ ತಿಂಗಳುಗಳಿಂದ ರಾಜ್ಯದಾದ್ಯಂತ ಸಂಚರಿಸುತ್ತಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಬಂದಿದೆ’ ಎಂದರು. 

‘ಕೇಂದ್ರದಲ್ಲಿ ಒಂಬತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಸರ್ಕಾರದ ಮೇಲೆ ಯಾರೊಬ್ಬರಿಗೂ ಭ್ರಷ್ಟಾಚಾರದ ಆರೋಪ ಮಾಡಲು ಸಾಧ್ಯವಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗೆದ್ದು, ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲ 28 ಕಜ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಬೇಕು’ ಎಂದರು. 

ಅಭಿವೃದ್ಧಿ ಶೂನ್ಯ: ‘ಕಾಂಗ್ರೆಸ್‌ ಆಡಳಿತಕ್ಕೆ ಬಂದು ಏಳು ತಿಂಗಳಾದರೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆರಂಭವಾಗಿಲ್ಲ. ಹೊಸ ಯೋಜನೆ ಜಾರಿಗೆ ತಂದಿಲ್ಲ. ಚಾಮರಾಜನಗರ ಕ್ಷೇತ್ರದ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು. ಯಾವುದೇ ಅನುದಾನ, ಯೋಜನೆ ತರುವುದಕ್ಕೆ ಅವರಿಗೆ ಆಗಿಲ್ಲ’ ಎಂದರು.  

‘ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಜನ ನೋಡುತ್ತಿದ್ದಾರೆ. ಕಾಂಗ್ರೆಸ್‌ ಅನ್ನು ಯಾಕೆ ಗೆಲ್ಲಿಸಿದೆವೋ ಎಂಬ ಭಾವನೆ ಜನರಲ್ಲಿ ಬಂದಿದೆ. ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯ ಸುರಕ್ಷಿತವಾಗಿಲ್ಲ’ ಎಂದರು.

‘31 ವರ್ಷಗಳ ಹಿಂದಿನ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತನನ್ನು ಸರ್ಕಾರ ಬಂಧಿಸಿದೆ. ಆತನ ವಿರುದ್ಧ 15 ಪ್ರಕರಣಗಳಿವೆ ಎಂದು ಸರ್ಕಾರ ಹೇಳಿತ್ತು. ಆದರೆ 14 ಪ್ರಕರಣಗಳು ಖುಲಾಸೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದ ಎಫ್ಐಆರ್ ಕೂಡ ಪೊಲೀಸರ ಬಳಿ ಇಲ್ಲ. ಹಿಂದೂ ಕಾರ್ಯಕರ್ತರನ್ನು ಸದೆಬಡಿಯುವ, ರಾಮಭಕ್ತರನ್ನು ಹೆದರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ’ ಎಂದು ವಿಜಯೇಂದ್ರ ದೂರಿದರು.

ಅಧಿಕಾರ ಮಾತ್ರ ಬೇಕು: ‘ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇದೆ. ವಿಧಾನಸಭಾ ಚುನಾವಣೆ ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಜಾತಿಗೊಬ್ಬ ಉಪ ಮುಖ್ಯಮಂತ್ರಿ ಬೇಕು ಎಂದು ಶಾಸಕರು, ಸಚಿವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಅಧಿಕಾರ ಬೇಕೇ ವಿನಾ ಬಡವರ ಕಲ್ಯಾಣ ಅಲ್ಲ. ಅಧಿಕಾರದ ದರ್ಪದಿಂದ ಮೆರೆಯುವ ಕಾಂಗ್ರೆಸ್‌ನವರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ’ ಎಂದರು.  

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌, ಮಾಜಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಮಾತನಾಡಿದರು. 

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಉಪಾಧ್ಯಕ್ಷ ರಾಜೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಮಾಜಿ ಶಾಸಕ ಎಸ್‌.ಬಾಲರಾಜ್‌, ಮಾಜಿ ಸಚಿವ ಕೋಟೆ ಶಿವಣ್ಣ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ರಾಮಚಂದ್ರ, ಕಾಂಪೋಸ್ಟ್‌ ನಿಗಮದ ಮಾಜಿ ಅಧ್ಯಕ್ಷ ಮಹದೇವಯ್ಯ, ಕಾಡಾ ಮಾಜಿ ಅಧ್ಯಕ್ಷ ನಿಜಗುಣ ರಾಜು, ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ದತ್ತೇಶ್‌ ಕುಮಾರ್‌, ಛಲವಾದಿ ಮಹಸಭಾದ ಕೆ.ಶಿವರಾಂ, ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್‌ ಸೇರಿದಂತೆ ಪದಾಧಿಕಾರಿಗಳು, ಮುಖಂಡರು ಇದ್ದರು. 

ಸಮಾರಂಭದಲ್ಲಿ ಪಾಲ್ಗೊಂಡ ಮುಖಂಡರು ಹಾಗೂ ಕಾರ್ಯಕರ್ತರು
ಸಮಾರಂಭದಲ್ಲಿ ಪಾಲ್ಗೊಂಡ ಮುಖಂಡರು ಹಾಗೂ ಕಾರ್ಯಕರ್ತರು

ಬೂತು ಅಧ್ಯಕ್ಷರ ಮನೆಗೆ ಭೇಟಿ: ಕಾರ್ಯಕ್ರಮದ ಬಳಿಕ ವಿಜಯೇಂದ್ರ ನಗರದ 25ನೇ ವಾರ್ಟ್‌ನ ಬೂತ್‌ ಅಧ್ಯಕ್ಷ ಪಿ.ಮಹದೇವ್‌ ಮನೆಗೆ ಭೇಟಿ ನೀಡಿ ಊಟ ಮಾಡಿದರು. 

ರಾಜ್ಯದಲ್ಲಿ ಭರವಸೆ ಹೀನ ಕಾಂಗ್ರೆಸ್‌ ಸರ್ಕಾರ ಇದ್ದರೆ ಕೇಂದ್ರದಲ್ಲಿ ಮೋದಿ ನೇತೃತ್ವದ ಭರವಸೆಪೂರ ಬಿಜೆಪಿ ಸರ್ಕಾರ ಇದೆ
–ಎನ್‌.ಮಹೇಶ್‌ ಬಿಜೆಪಿ ರಾಜ್ಯ ಉಪಾಧ್ಯಕ್ಷ
ಕಾಂಗ್ರೆಸ್‌ನ ಕುತಂತ್ರ ಜನರಿಗೆ ಗ್ಯಾರಂಟಿ ಯೋಜನೆಗಳ ಮಂಕುಬೂದಿ ಎರಚಿದ್ದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ
–ಸಿ.ಎಸ್‌.ನಿರಂಜನಕುಮಾರ್‌ ಮಾಜಿ ಶಾಸಕ

ಅದ್ದೂರಿ ಸ್ವಾಗತ:

ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ವಿಜಯೇಂದ್ರ ಅವರನ್ನು ಕಾರ್ಯಕರ್ತರು ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು.  ಸಂತೇಮರಹಳ್ಳಿ ವೃತ್ತದಲ್ಲಿ ಬೃಹತ್‌ ಸೇಬಿನ ಹಾರ ಹಾಕಿದ ಕಾರ್ಯಕರ್ತರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆದುಕೊಂಡು ಬಂದರು. ಅಲ್ಲೂ ಕ್ರೇನ್‌ ಮೂಲಕ ಸೇಬಿನ ಹಾರ ಹಾಕಿದರು. ಬಳಿಕ ಅಂಬೇಡ್ಕರ್‌ ಭವನದ ಮುಂಭಾಗೂ ಬೃಹತ್‌ ಸೇಬಿನ ಹಾರ ಹಾಕಿದರು.  ವೇದಿಕೆಯಲ್ಲಿ ಹೊಸ ಅಧ್ಯಕ್ಷರನ್ನು ಅಭಿನಂದಿಸಲು ಮುಖಂಡರು ಮತ್ತು ಕಾರ್ಯಕರ್ತರ ನಡುವೆ ಪೈಪೋಟಿಯೇ ನಡೆಯಿತು.  ಕಾರ್ಯಕರ್ತರಿಗೆ ಅವಕಾಶ: ‘ವಿಧಾನಸಭಾ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ನಾಯಕರ ಪರವಾಗಿ ಕೆಲಸ ಮಾಡುತ್ತಾರೆ. ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಕಾರ್ಯಕರ್ತರ ಚುನಾವಣೆಗಳಾಗಿದ್ದು ಅವುಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು’ ಎಂದು ವಿಜಯೇಂದ್ರ ಭಾಷಣದಲ್ಲಿ ಹೇಳಿದರು.

‘ಎಲ್ಲವೂ ಸರಿಯಾಗಲಿದೆ’

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  ಬಸನಗೌಡ ಪಾಟೀಲ ಯತ್ನಾಳ್‌ ಮತ್ತು ವಿ.ಸೋಮಣ್ಣ ಅವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ‘ಸಮಸ್ಯೆ ಪೂರ್ತಿಯಾಗಿ ಬಗೆಹರಿದಿದೆ ಎಂದು ನಾನು ಹೇಳುವುದಿಲ್ಲ. ಆದರೆ ಸ್ವಲ್ಪ ಬಗೆಹರಿದಿದೆ. ಶೀಘ್ರದಲ್ಲಿ ಎಲ್ಲವೂ ಸರಿಯಾಗಲಿದೆ.  ತಮ್ಮ ಸೋಲಿಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ನೇರ ಕಾರಣ ಎಂದು ವಿ.ಸೋಮಣ್ಣ ಆರೋಪ ಮಾಡುತ್ತಿರುವ ಬಗ್ಗೆ ಕೇಳಿದ್ದಕ್ಕೆ ‘ಸೋಮಣ್ಣ ಅವರು ಹಿರಿಯ ನಾಯಕರು. 45 ವರ್ಷಗಳ ಅನುಭವ ಹೊಂದಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಸೋತಿರುವುದರಿಂದ ಸಹಜವಾಗಿ ನೋವು ಆಗುತ್ತದೆ’ ಎಂದು ಉತ್ತರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT