ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊನೆ ಕ್ಷಣದಲ್ಲಿ ಟಿಕೆಟ್‌ ತಪ್ಪಿದೆ, ಪಕ್ಷದಲ್ಲೇ ಇರುವೆ: ರಾಜು

Published 28 ಮಾರ್ಚ್ 2024, 3:15 IST
Last Updated 28 ಮಾರ್ಚ್ 2024, 3:15 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನಿರೀಕ್ಷಿಸಿದ್ದೆ. ಕೊನೆ ಗಳಿಗೆಯಲ್ಲಿ ಟಿಕೆಟ್‌ ತಪ್ಪಿದೆ. ಇದರಿಂದ ಬೇಸರವಾಗಿಲ್ಲ. ಪಕ್ಷದಲ್ಲೇ ನಾನು ಮುಂದುವರಿಯುವೆ. ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವೆ. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು’ ಎಂದು ಬಿಜೆಪಿ ಮುಖಂಡ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ಆರ್‌.ರಾಜು ಬುಧವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು ವರ್ಷಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕಳೆದ ಬಾರಿಯೂ ನಾನು ಆಕಾಂಕ್ಷಿಯಾಗಿದ್ದೆ. ಶ್ರೀನಿವಾಸ ಪ್ರಸಾದ್‌ ಅವರಿಗೆ ಟಿಕೆಟ್‌ ನೀಡಿದ್ದರಿಂದ ನಾನು ‌ಹಿಂದೆ ಸರಿದಿದ್ದೆ. ಈ ಬಾರಿ ಟಿಕೆಟ್‌ ನೀಡುವ ಭರವಸೆಯನ್ನು ವರಿಷ್ಠರು ನೀಡಿದ್ದರು. ಕೊನೆ ಗಳಿಗೆಯಲ್ಲಿ ಬಾಲರಾಜ್‌ ಅವರು ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ವರಿಷ್ಠರ ತೀರ್ಮಾನಕ್ಕೆ ಪ್ರತಿರೋಧ ವ್ಯಕ್ತಪಡಿಸುವ ವ್ಯಕ್ತಿ ನಾನಲ್ಲ’ ಎಂದರು. 

‘ಬಡವರು, ನಿರ್ಗತಿಕರು ಧ್ವನಿಯಾಗಬೇಕು ಎಂಬ ಚಿಂತನೆಯಿಂದ ನಾನು ರಾಜಕಾರಣಕ್ಕೆ ಬಂದೆ. ಮುಂದೆಯೂ ಜನಸಾಮಾನ್ಯರೊಂದಿಗೆ ನಾನು ಇರುತ್ತೇನೆ. ಕ್ಷೇತ್ರದಲ್ಲೇ ಇರುತ್ತೇನೆ. ಪಕ್ಷದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇನೆ’ ಎಂದು ರಾಜು ಹೇಳಿದರು. 

‘ಪ್ರಧಾನಿ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬುದು ನನ್ನ ಆಶಯ. ಅದಕ್ಕಾಗಿ ನಾವು ಗರಿಷ್ಠ ಸ್ಥಾನಗಳನ್ನು ಗೆಲ್ಲಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವೆ. ಬಿಜೆಪಿ ಯಾವುದಾದರೂ ಜವಾಬ್ದಾರಿ ನೀಡಿದರೆ ಖಂಡಿತವಾಗಿ ನಿರ್ವಹಿಸುವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಮುಖಂಡರಾದ ಬಸವರಾಜು, ತೊರವಳ್ಳಿ ಶಿವಕುಮಾರಸ್ವಾಮಿ, ವಿ. ಶ್ರೀನಿವಾಸಪ್ರಸಾದ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT