ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳಿಗಿರಿರಂಗನಬೆಟ್ಟದಲ್ಲಿ ‌ಶನಿವಾರದಿಂದ ರಂಗನಾಥನ ದರ್ಶನಕ್ಕೆ ಅವಕಾಶ

ರಂಗನಾಥಸ್ವಾಮಿ ದೇವಾಲಯದಲ್ಲಿ ಸಂಪ್ರೋಕ್ಷಣಾ ಕಾರ್ಯ ಸಂಪನ್ನ, ಉಸ್ತುವಾರಿ ಸಚಿವ, ಶಾಸಕರು ಭಾಗಿ
Last Updated 2 ಏಪ್ರಿಲ್ 2021, 13:12 IST
ಅಕ್ಷರ ಗಾತ್ರ

ಚಾಮರಾಜನಗರ: ಯಳಂದೂರು ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಮಹಾ ಸಂಪ್ರೋಕ್ಷಣೆ ಕಾರ್ಯ ಶುಕ್ರವಾರ ಸಂಪನ್ನಗೊಂಡಿತು.

ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿ ಬಹುತೇಕ ಮುಕ್ತಾಯವಾದ ಬಳಿಕ, ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶಕ್ಕೆ ಕಲ್ಪಿಸುವುದಕ್ಕೂ ಮುನ್ನ ದೇವಾಲಯದಲ್ಲಿ ರಂಗನಾಥಸ್ವಾಮಿಯ ಪುನರ್‌ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಮಾರ್ಚ್‌ 29ರಂದೇ ಆರಂಭಗೊಂಡಿತ್ತು.

ಐದನೇ ಹಾಗೂ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆಯಿಂದಲೇ ಅಂತಿಮ ಹಂತದ ವಿಧಿ ವಿಧಾನಗಳು ನಡೆದವು.

ದೇವತಾ ಪ್ರಾರ್ಥನೆ, ವಿಷ್ಪಕ್ಷೇನಾರಾಧನೆ, ಪುಣ್ಯಾಹವಾಚನ, ಕಳಶಾರಾಧನ, ನಿತ್ಯಾಗ್ನಿ ಪ್ರಣಯನ, ಪ್ರಧಾನಗೋಪುರ ಉದ್ವಾಸನಾ, ರಾಜಗೋಪುರದಲ್ಲಿ ಕಳಶ ಪ್ರತಿಷ್ಠಾಪನೆ, ಜೀವಕಳಾವಹನ, ಪ್ರಾಣಪ್ರತಿಷ್ಠೆ, ಅಷ್ಟವಾಧಾನ ಸೇವೆ. ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನೆರವೇರಿದವು. ‌

ಮೈಸೂರಿನ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಡಾ.ಭಾಷ್ಯಂ ಸ್ವಾಮೀಜಿ ಅವರ ಸಾನಿಧ್ಯದಲ್ಲಿಆಗಮಿಕರು, ಅರ್ಚಕರ ವೃಂದದವರು ಐದು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.ನಾಲ್ಕು ವರ್ಷಗಳ ಬಳಿಕ ದೇವಾಲಯವು ಶನಿವಾರದಿಂದ ಭಕ್ತರಿಗೆ ಮುಕ್ತವಾಗಲಿದೆ.

ಸಚಿವರು, ಶಾಸಕರು ಭಾಗಿ:ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಪತ್ನಿ ಸಮೇತರಾಗಿ ಕೊನೆ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಶಾಸಕರಾದ ಎನ್.ಮಹೇಶ್, ಆರ್.ನರೇಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಇತರೆ ಗಣ್ಯರು ಭಾಗಿಯಾದರು.

ಕಾರ್ಯಕ್ರಮದ ಭಾಗವಾಗಿದೇವಾಲಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ನಾಲ್ಕು ವರ್ಷಗಳಿಂದ ಭಕ್ತರಿಗೆ ದೇವಾಲಯದ ದರ್ಶನ ಸಾಧ್ಯವಾಗಿರಲಿಲ್ಲ. ಶನಿವಾರದಿಂದಲೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವಾಗಲಿದೆ’ ಎಂದು ಹೇಳಿದರು.

‘ಪ್ರವಾಸೋದ್ಯಮ, ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿ ದೇವಾಲಯ ಕಾಮಗಾರಿ ಪೂರ್ಣಗೊಳಿಸಿದೆ. ಹಲವಾರು ದಾನಿಗಳು ಶಕ್ತಿ ಮೀರಿ ಸೇವೆ ಮಾಡಿರುವ ಕಾರಣದಿಂದಲೂ ದೇವಾಲಯದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿದೆ. ದೇವಾಲಯದ ಕಾರ್ಯಗಳು ಉತ್ತಮವಾಗಿ ನಡೆದಿವೆ. ಉಳಿದಿರುವ ಸಣ್ಣ ಪುಟ್ಟ ಕೆಲಸಗಳು ಶೀಘ್ರವಾಗಿ ಪೂರ್ಣವಾಗಲಿದೆ’ ಎಂದರು.

ಶಾಸಕ ಎನ್.ಮಹೇಶ್ ಅವರು ಮಾತನಾಡಿ, ‘ಮಹಾಸಂಪ್ರೋಕ್ಷಣೆ ಹಾಗೂ ದೇವಾಲಯದ ಎಲ್ಲ ಕಾರ್ಯಗಳ ಯಶಸ್ಸು ದಾನಿಗಳಿಗೆ ಸಲ್ಲಬೇಕು. ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಶೇ 70ರಷ್ಟು ಖರ್ಚನ್ನು ದಾನಿಗಳು ವಹಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ, ಉಪವಿಭಾಧಿಕಾರಿ ಅವರೂ ಶ್ರಮವಹಿಸಿದ್ದಾರೆ’ ಎಂದರು.

ಸಮಾರಂಭದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು. ಆಗಮಿಕರು, ಪಂಡಿತರು, ಸ್ವಾಮೀಜಿ ಅವರನ್ನು ಗೌರವಿಸಲಾಯಿತು.

ಪ್ರಧಾನ ಅರ್ಚಕ ಹಾಗೂ ಆಗಮಿಕರಾದ ಎಸ್.ನಾಗರಾಜಭಟ್ಟ, ಮೈಸೂರಿನ ಮಹಾರಾಜ ಸಂಸ್ಕೃತ ಮಹಾಪಾಠಶಾಲೆಯ ವೈಖಾನಸಾಗಮ ಪ್ರಾಧ್ಯಾಪಕರಾದ ಡಾ.ಎಸ್.ಶ್ರೀನಿಧಿ, ಡಾ.ಎಸ್.ರಾಜಗೋಪಾಲ್, ಡಾ.ಪಿ.ಸತ್ಯನಾರಾಯಣ, ನಾಗೇಂದ್ರ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಗಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ,ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ತಹಶೀಲ್ದಾರ್ ಜಯಪ್ರಕಾಶ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಕುಮಾರ್‌ ಇದ್ದರು.

ರಥ ನಿರ್ಮಾಣ ಪೂರ್ಣ: 10ರಂದು ಕ್ಷೇತ್ರಕ್ಕೆ

ಈ ಮಧ್ಯೆ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯದ ಬ್ರಹ್ಮರಥ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ‘ರಥ ನಿರ್ಮಾಣ ಕಾಮಗಾರಿ ಬೆಂಗಳೂರಿನಲ್ಲಿ ಪೂರ್ಣವಾಗಿದೆ. ಇದೇ 10ರಂದು ಕ್ಷೇತ್ರಕ್ಕೆ ತರಲಾಗುವುದು. 26ರಂದು ರಂಗನಾಥಸ್ವಾಮಿ ರಥೋತ್ಸವ ನಡೆಯಲಿದೆ. ಕೋವಿಡ್‌ ಕಾರಣಕ್ಕೆ ಸಾಂಪ್ರದಾಯಿಕ ಹಾಗೂ ಸರಳ ಆಚರಣೆಗೆ ಸೀಮಿತವಾಗಲಿದೆ’ ಎಂದು ಹೇಳಿದರು.

ರಥೋತ್ಸವದ ಮೊದಲು ಕಾಮಗಾರಿ ಮುಕ್ತಾಯ: ‘ದೇವಾಲಯದಲ್ಲಿ ಬಾಕಿ ಉಳಿದಿರುವನೆಲಹಾಸು, ತಡೆಗೋಡೆ ಇತರೆ ಕೆಲಸ ಸೋಮವಾರದಿಂದ ಆರಂಭವಾಗಲಿದೆ. ಇದೇ 26 ರಂದು ನಡೆಯಲಿರುವ ರಥೋತ್ಸವ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಶಾಸಕ ಎನ್.ಮಹೇಶ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT