ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಂದು ದೀಪಾವಳಿ ರಥೋತ್ಸವ: ತೇರು ಸಿದ್ಧ

ಜಾತ್ರೆಯ ಎರಡನೇ ದಿನ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ, ವಿಶೇಷ ಪೂಜೆ
Last Updated 24 ಅಕ್ಟೋಬರ್ 2022, 6:59 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾಸ್ಥಳ ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಎರಡನೇ ದಿನದ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಭಾನುವಾರ ರಜಾ ದಿನವಾಗಿದ್ದರೂ, ಭಾರಿ ಪ್ರಮಾಣದಲ್ಲಿ ಭಕ್ತರು ಕಂಡು ಬರಲಿಲ್ಲ. ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಭಾನುವಾರ ಮಹದೇಶ್ವರಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಮುಂಜಾನೆಯಿಂದಲೇ ವಿಶೇಷ ಅರ್ಚನೆ, ಅಭಿಷೇಕಗಳನ್ನು ನೆರವೇರಿಸಲಾಯಿತು. ಮಂಗಳಾರತಿ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.ಸೋಮವಾರ ಅಮಾವಾಸ್ಯೆಯ ವಿಶೇಷ ಪೂಜೆಗಳು ನಡೆಯಲಿವೆ.

ರಥೋತ್ಸವಕ್ಕೆ ಸಿದ್ಧತೆ: ಜಾತ್ರೆಯ ಪ್ರಯುಕ್ತ 26ರಂದು ಬುಧವಾರ ರಥೋತ್ಸವ ನಡೆಯಲಿದೆ. ಇದಕ್ಕಾಗಿ ರಥವನ್ನು ಸಿದ್ಧಪಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.

ಬೇಡಗಂಪಣ ಸಮುದಾಯದ 108 ಹೆಣ್ಣು ಮಕ್ಕಳಿಂದ ನಡೆಯುವ ಹಾಲರವಿ ಉತ್ಸವ ಹಾಗೂ ಮಹಾರಥೋತ್ಸವವು ದೀಪಾವಳಿ ಜಾತ್ರೆಯ ಪ್ರಮುಖ ಆಚರಣೆಗಳು. ಹಾಲರವಿ ಉತ್ಸವ ಅ.25 ರಂದು ನಡೆಯಲಿದೆ. ಅ.26ರಂದು ರಥೋತ್ಸವ ನಡೆಯಲಿದೆ. ಜಾತ್ರೆ ಪ್ರಾರಂಭವಾಗುವುದಕ್ಕೂ ಮೊದಲು ಬೇಡಗಂಪಣ ಸಮುದಾಯದವರು ತೇರು ನಿರ್ಮಾಣ ಕೆಲಸ ಆರಂಭಿಸುತ್ತಾರೆ.ಅರಣ್ಯ ಇಲಾಖೆಯ ಸಹಕಾರ ಪಡೆದು ಕಾಡಿನಿಂದ ಬಿದಿರು ತರುತ್ತಾರೆ. ಆಮೆ ತಲೆಗೆ ಚಿನ್ನದ ನಾಣ್ಯ ಇಟ್ಟು ಬಂಗಾರದ ಪೂಜೆ ಸಲ್ಲಿಸಿ, ನಿರ್ಮಾಣ ಕಾರ್ಯಕ್ಕೆ ಆರಂಭಿಸುತ್ತಾರೆ.

ಈ ಬಾರಿ ಬಿದಿರು ಹಾಗೂ ಹುರಿಯ ಹಗ್ಗಗಳಿಂದ ತೇರು ಸಿದ್ಧವಾಗಿದೆ. 52 ಅಡಿ ತೇರಿನಲ್ಲಿ 5 ಚೌಕ ಪೆಟ್ಟಿಗೆ ನಿರ್ಮಾಣವಾಗಿದೆ. ಮೊದಲ ಪೆಟ್ಟಿಗೆ, ಗುಬುರು, ಬಾಗಲವಾಡಿ, ದುಂಡದೂಡು, ತಾಳಗಳನ್ನು ಹೊಂದಿದೆ. ಇದಕ್ಕೆ ಸುಂದರ ವಸ್ತ್ರ ಧಾರಣೆ ಮಾಡಲಾಗಿದ್ದು, ತಳಿರು ತೋರಣ ಹಾಗೂ ಛತ್ರ, ಕಳಸಗಳನ್ನು ಅಳವಡಿಸಿರುವ ತೇರು ಕಂಗೊಳಿಸುತ್ತಿದೆ. ರಥ ಕಟ್ಟುವ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ಬುಧವಾರ ಬೆಳಿಗ್ಗೆ 9ರಿಂದ 9.45ರ ನಡುವೆ ಮಹಾರಥೋತ್ಸವ ನಡೆಯಲಿದೆ.

87 ವರ್ಷಗಳ ಹಳೆಯ ರಥ
ಮಹದೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಬಳಸುವ ಬ್ರಹ್ಮರಥಕ್ಕೆ ಈಗ 87 ವರ್ಷಗಳ ಸಂಭ್ರಮ.1835ರ ಏ.4ರಂದು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರು ಯುಗಾದಿ ಹಬ್ಬದ ಮೊದಲ ದೊಡ್ಡ ಜಾತ್ರೆಗೆ ರಥವನ್ನು ಕೊಡುಗೆ ನೀಡಿದ್ದರು.

ಅಂದಿನ ಕಾಲದ ದೇವಸ್ಥಾನದ ಸಮಿತಿ ಸದಸ್ಯ ರಾವ್‌ಸಾಹೇಬ್, ಕೊಳ್ಳೇಗಾಲ ಜಿಪಿ ಮಲ್ಲಪ್ಪ, ಸಾಲೂರು ಮಠದ ಶಾಂತಲಿಂಗಸ್ವಾಮಿಗಳು, ಪುಟ್ಟಮಾದತಂಬಡಯ್ಯ, ಒಮಾದತಂಬಡಯ್ಯ ಹೆಸರುಗಗಳನ್ನು ರಥದ ಹಿಂಭಾಗ ಬರೆಯಲಾಗಿದೆ. ಮೈಸೂರು ಅರಮನೆ ಗುತ್ತಿಗೆದಾರರಾದ ತಿಮ್ಮಯ್ಯಚಾರ್ಯರ ಮಗ ಅಪ್ಪಾಜಿ ಆಚಾರ್ಯ ಅವರು ರಥ ನಿರ್ಮಿಸಿದ್ದಾರೆ ಎಂಬ ಮಾಹಿತಿಯನ್ನೂ ರಥದಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT