ಶುಕ್ರವಾರ, ಜನವರಿ 17, 2020
24 °C
ಈರುಳ್ಳಿ ದರ ಕುಸಿತ, ಗ್ರಾಹಕರು ಕೊಂಚ ನಿರಾಳ, ಮಾಂಸ ಮಾರುಕಟ್ಟೆಯಲ್ಲಿ ದರ ಏರಿಳಿತ

ಶೂನ್ಯಮಾಸ: ಮಾರುಕಟ್ಟೆ ಧಾರಣೆ ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಧನುರ್ಮಾಸ ಆರಂಭವಾಗುತ್ತಿದ್ದಂತೆಯೇ ತರಕಾರಿ, ಹೂವು, ಹಣ್ಣುಗಳಿಗೆ ಬೇಡಿಕೆ ಕಡಿಮೆಯಾಗಿದೆ.

ಶೂನ್ಯಮಾಸ ಆರಂಭವಾಗಿರುವುದರಿಂದ ಗೃಹಪ್ರವೇಶ, ಮದುವೆ ನಾಮಕರಣದಂತಹ ಶುಭ ಸಮಾರಂಭಗಳು ನಡೆಯುವುದಿಲ್ಲ. ಹಾಗಾಗಿ ಯಾವುದಕ್ಕೂ ಹೆಚ್ಚು ಬೇಡಿಕೆಗಳಿಲ್ಲ. ಇದರಿಂದಾಗಿ ಧಾರಣೆ ಇಳಿಮುಖವಾಗಿದೆ.

ತರಕಾರಿಗಳ ಪೈಕಿ ಹಾಪ್‌ಕಾಮ್ಸ್‌ನಲ್ಲಿ ಬೀಟ್‌ರೂಟ್‌, ಚಪ್ಪರದ ಬದನೆಕಾಯಿ, ತೊಗರಿಕಾಯಿ ₹ 5 ಹೆಚ್ಚಳವಾಗಿದೆ. ಉಳಿದ ಎಲ್ಲ ತರಕಾರಿಗಳ ಬೆಲೆ ಇಳಿಕೆ ಕಂಡಿದೆ.

ಟೊಮೆಟೊ ₹ 15, ಮರಗೆಣಸು, ಹಸಿ ಬಟಾಣಿ, ಹಸಿಮೆಣಸಿನಕಾಯಿ ₹ 10. ನಿಂಬೆ ಹಣ್ಣು ₹ 1. ದಪ್ಪ ಮೆಣಸಿನಕಾಯಿ ₹ 20 ಕಡಿಮೆಯಾಗಿದೆ.

‘ಶೂನ್ಯಮಾಸದಲ್ಲಿ ತರಕಾರಿಗಳ ಬೆಲೆ ಇಳಿಕೆ ಸಾಮಾನ್ಯ ಸಂಗತಿ. ಪ್ರತಿ ವರ್ಷ ಇದೇ ರೀತಿ ಇರುತ್ತದೆ' ಎಂದು ತರಕಾರಿ ವ್ಯಾಪಾರಿ ಚೆನ್ನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಹಣ್ಣುಗಳ ಪೈಕಿ ಕಿತ್ತಳೆ, ದ್ರಾಕ್ಷಿ  ₹ 20, ಪಚ್ಚೆಬಾಳೆ ₹ 5 ಹೆಚ್ಚಳವಾಗಿದೆ. ಅನಾನಸು ₹ 10‌, ಮೂಸಂಬಿ ₹ 20 ಕಡಿಮೆಯಾಗಿದೆ. 

ಹೂವುಗಳ ಬೆಲೆ ಗಣನೀಯ ಇಳಿಕೆ: ಮಾರುಕಟ್ಟೆಯಲ್ಲಿ ಕಳೆದ ವಾರದವರೆಗೂ ತುಟ್ಟಿಯಾಗಿದ್ದ ಹೂವುಗಳ ಬೆಲೆ ಈ ವಾರ ಗಣನೀಯವಾಗಿ ಕುಸಿದಿದೆ. 

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕಳೆದ ವಾರ ಕೆಜಿಗೆ ₹ 1,000ದಷ್ಟಿದ್ದ ಕನಕಾಂಬರ, ಈ ವಾರ ₹ 400–₹ 500 ಇದೆ.

ಚೆಂಡು ಹೂ ₹ 20, ಸುಗಂಧ ರಾಜ ₹ 60, ಹಾರಗಳು ₹ 50, ಮಲ್ಲಿಗೆ ₹ 80, ಗುಲಾಬಿ (100ಕ್ಕೆ) ₹ 200, ಕಾಕಡ ₹ 150ರಷ್ಟು ಬೆಲೆ ಇಳಿಕೆಯಾಗಿದೆ.

‘ಕಳೆದ ವಾರದವರೆಗೂ ದೇವಾಲಯಗಳಲ್ಲಿ ವಿಶೇಷ ಪೂಜೆಗಳಿದ್ದವು. ಶುಭ ಸಮಾರಂಭಗಳು ನಡೆಯುತ್ತಿದ್ದವು. ಹಾಗಾಗಿ, ಹೂವುಗಳಿಗೆ ಬೇಡಿಕೆ ಇತ್ತು. ಈ ವಾರದಿಂದಲೇ ಧನುರ್ಮಾಸ ಆರಂಭವಾದುದರಿಂದ ಬೇಡಿಕೆ ಕುಸಿದಿದೆ. ಮುಂದೆಯೂ ಇದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ರವಿ ಹೇಳಿದರು.

ಪ್ರತಿ ಮೂರು ದಿನಗಳಿಗೊಮ್ಮೆ ಧಾರಣೆ ವ್ಯತ್ಯಾಸ ಕಂಡುಬರುವ ಮೊಟ್ಟೆಗೆ ಈ ವಾರ ₹ 9 ಹೆಚ್ಚಳವಾಗಿದೆ. ಕಳೆದ ವಾರ 100 ಮೊಟ್ಟೆಗೆ ₹ 455 ಇತ್ತು. ಈ ವಾರ ₹ 464 ಬೆಲೆ ಇದೆ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ಏರಿಳಿತ ಕಂಡು ಬರುತ್ತಿದೆ. ಕಳೆದ ವಾರ ₹ 120ರಿಂದ ₹ 160 ಇದ್ದ ಚಿಕನ್‌ ಬೆಲೆ ಈ ವಾರ ₹ 92ರಿಂದ ₹ 160ರ ವರೆಗೆ ಇದೆ. ಉಳಿದಂತೆ ಮಾಂಸ ಮಾರುಕಟ್ಟೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. 

ಪ್ರತಿಕ್ರಿಯಿಸಿ (+)