ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಹಸೆಮಣೆ ಏರಿದ ಜೋಡಿ

ಲಾಕ್‌ಡೌನ್‌–ಅಂತರರಾಜ್ಯ ಸಂಚಾರ ನಿರ್ಬಂಧ, ಪುಣಜನೂರಿನಲ್ಲಿ ಎರಡನೇ ಮದುವೆ
Last Updated 21 ಮೇ 2020, 16:07 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಲಾಕ್‌ಡೌನ್‌ ಅಂಗವಾಗಿ ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಕರ್ನಾಟಕ ಮತ್ತು ತಮಿಳುನಾಡಿನ ಗಡಿಭಾಗವಾದ ಪುಣಜನೂರಿನಲ್ಲಿ ಜೋಡಿಯೊಂದು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.

ತಮಿಳುನಾಡಿನ ಮೆಟ್ಟುಪಾಳ್ಯಂನ ನಿವಾಸಿ ಸತೀಶ್‌ಕುಮಾರ್‌ ಹಾಗೂ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಯಶಸ್ಮಿತಾ ಅವರು ಪುಣಜನೂರಿನ‌ಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿವಾಹ ಬಂಧನಕ್ಕೆ ಒಳಗಾದರು.

ಮೆಟ್ಟುಪಾಳ್ಯಂನ ಶಕ್ತಿವೇಲು–ಲತಾ ದಂಪತಿಯ ಮಗ ಸತೀಶ್‌ ಕುಮಾರ್‌ ಹಾಗೂ ಗೋಣಿಕೊಪ್ಪದ ಹೊಂಬಾಳಯ್ಯ–ತ್ರಿವೇಣಿ ಅವರ ಮಗಳು ಯಶಸ್ಮಿತಾ ಅವರ ಮದುವೆಯನ್ನು ಮೇ 21ರಂದು ನಡೆಸಲು ಎರಡೂ ಕುಟುಂಬದವರು ನಿರ್ಧರಿಸಿದ್ದರು. ಆದರೆ, ಲಾಕ್‌ಡೌನ್‌ ಕಾರಣಕ್ಕೆ ಅಂತರರಾಜ್ಯ ಸಂಚಾರ ಸ್ಥಗಿತಗೊಂಡಿದೆ. ಹಾಗಾಗಿ ಎರಡೂ ಕಡೆಯರಿಗೂ ಸಂಚರಿಸಲು ಸಾಧ್ಯವಾಗಿಲ್ಲ.

ಇದನ್ನು ಅರಿತ ಎರಡೂ ಕುಟುಂಬದವರು ಗಡಿ ಭಾಗಕ್ಕೆ ಬಂದು ನಿಗದಿತ ಮುಹೂರ್ತಕ್ಕೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದರು.

ಅದರಂತೆ ಗುರುವಾರ ವಧು ವರರ ಕುಟುಂಬದವರು ಪುಣಜನೂರಿನ ಗಣಪತಿ ದೇವಸ್ಥಾನಕ್ಕೆ ಬಂದು ಮದುವೆ ಮಾಡಿದರು. ವಧು, ವರ ಸೇರಿದಂತೆ ಎಲ್ಲರೂ ಮಾಸ್ಕ್‌ ಧರಿಸಿದ್ದು ವಿಶೇಷವಾಗಿತ್ತು. ಮದುವೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಚೆಕ್‌ಪೋಸ್ಟ್‌ನ ಸಿಬ್ಬಂದಿಯೂ ಸಾಕ್ಷಿಯಾದರು.

ವರ ಮನೆಗೆ‌, ವಧು ತವರಿಗೆ: ಹೊರ ರಾಜ್ಯಗಳಿಗೆ ಹೋಗಲು ಅವಕಾಶ ಇಲ್ಲದೇ ಇರುವುದರಿಂದ ಮದುವೆ ನಂತರ ವರ ಹಾಗೂ ಕುಟುಂಬದ ಸದಸ್ಯರು ಮೆಟ್ಟು‍ಪಾಳ್ಯಂಗೆ ತೆರಳಿದರೆ, ವಧು ಹಾಗೂ ಆಕೆಯ ಮನೆಯವರು ಗೋಣಿಕೊಪ್ಪಕ್ಕೆ ಹಿಂದಿರುಗಿದರು.

ಎರಡನೇ ಮದುವೆ: ಲಾಕ್‌ಡೌನ್‌ ಅವಧಿಯಲ್ಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ಎರಡನೇ ಮದುವೆ ಇದು. ಒಂದೂವರೆ ತಿಂಗಳ ಹಿಂದೆ, ಇದೇ ದೇವಸ್ಥಾನದಲ್ಲಿ ತಮಿಳುನಾಡಿನ ವರ, ಹಾಸನದ ವಧು ಹಸೆಮಣೆ ಏರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT