ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದನೆ ಕುಸಿತ, ಹೈನುಗಾರರ ಆದಾಯಕ್ಕೆ ಕುತ್ತು

ತಾಪಮಾನ ಏರಿಕೆ, ಚರ್ಮಗಂಟು ರೋಗ ಪರಿಣಾಮ, ಎರಡು ವಾರದಿಂದ ಹಾಲಿನ ಪೂರೈಕೆ ಚೇತರಿಕೆ
Last Updated 15 ಮಾರ್ಚ್ 2023, 4:00 IST
ಅಕ್ಷರ ಗಾತ್ರ

ಚಾಮರಾಜನಗರ, ಯಳಂದೂರು: ದಿನೇ ದಿನೇ ಹೆಚ್ಚುತ್ತಿರುವ ಬಿಸಿಲು, ಜಾನುವಾರುಗಳನ್ನು ಕಾಡಿದ ಚರ್ಮಗಂಟು ರೋಗದ ಕಾರಣದಿಂದ ನವೆಂಬರ್‌ನಿಂದೀಚೆಗೆ ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗಿದ್ದು, ಹೈನುಗಾರರ ಆದಾಯವೂ ಕುಸಿತವಾಗಿದೆ.

‘ಆದರೆ, ಎರಡು ವಾರಗಳಿಂದೀಚೆಗೆ ಹಾಲಿನ ಉತ್ಪಾದನೆಯಲ್ಲಿ ಕೊಂಚ ಏರಿಕೆ ಕಂಡಿದ್ದು, ಪೂರೈಕೆಯೂ ಹೆಚ್ಚಾಗಿದೆ. ಒಂದೆರಡು ಮಳೆ ಬಂದು ಹಸಿರು ಮೇವು ಲಭ್ಯವಾಗಲು ಶುರುವಾದರೆ ಹಾಲಿನ ಉತ್ಪಾದನೆ ಇನ್ನಷ್ಟು ಹೆಚ್ಚಾಗಲಿದೆ’ ಎಂದು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ (ಚಾಮುಲ್‌) ವ್ಯವಸ್ಥಾಪಕ ನಿರ್ದೇಶಕ ಎಂ.ರಾಜಶೇಖರಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ, ಈ ಬಾರಿ ಹಾಲಿನ ಉತ್ಪಾದನೆ ಹೆಚ್ಚಿದೆ. ಕಳೆದ ವರ್ಷ ಮಾರ್ಚ್‌ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ 2.05 ಲಕ್ಷ ಲೀಟರ್‌ ಹಾಲು ಪೂರೈಕೆಯಾಗುತ್ತಿತ್ತು. ಈಗ 2.12 ಲಕ್ಷ ಲೀಟರ್‌ ಹಾಲು ಬರುತ್ತಿದೆ’ ಎಂದು ಅವರು ಹೇಳಿದರು.

ಕಳೆದ ನವೆಂಬರ್‌ನಲ್ಲಿ ಪ್ರತಿ ದಿನ 2.09 ಲಕ್ಷ ಲೀಟರ್‌ ಹಾಲು ಪೂರೈಕೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಇದು ಕಡಿಮೆಯಾಗುತ್ತ ಕನಿಷ್ಠ 2.04 ಲಕ್ಷ ಲೀಟರ್‌ಗೆ ಇಳಿದಿತ್ತು. ಆ ಬಳಿಕ ಮತ್ತೆ ಚೇತರಿಕೆ ಕಂಡಿದ್ದು, ಸದ್ಯ 2.12 ಲಕ್ಷ ಲೀಟರ್‌ ಹಾಲು ಚಾಮುಲ್‌ಗೆ ಬರುತ್ತಿದೆ. ಬೇಸಿಗೆಗೂ ಮೊದಲು ಪ್ರತಿ ದಿನ ಜಿಲ್ಲೆಯ ಹೈನುಗಾರರು ಚಾಮುಲ್‌ಗೆ ಸರಾಸರಿ 2.60 ಲಕ್ಷ ಲೀಟರ್‌ ಹಾಲು ಪೂರೈಸುತ್ತಿದ್ದರು.

ಆದಾಯ ಕುಂಠಿತ: ಚಾಮುಲ್‌ ವ್ಯಾಪ್ತಿಯಲ್ಲಿ 466 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 1.05 ಲಕ್ಷ ಸದಸ್ಯರಿದ್ದಾರೆ. ಸಕ್ರಿಯ ಹಾಲು ಉತ್ಪಾದಕರು 35 ಸಾವಿರದಷ್ಟಿದ್ದಾರೆ.

ಬಿಸಿಲಿನ ಕಾರಣದಿಂದ ಹಸಿರು ಮೇವಿನ ಕೊರತೆ ಉಂಟಾಗಿದೆ. ರೈತರು ಒಣಹುಲ್ಲು, ಕಬ್ಬಿನ ಸೋಗೆ ನೀಡುತ್ತಿದ್ದಾರೆ. ಇದರ ಜೊತೆಗೆ ಜಿಲ್ಲೆಯಾದ್ಯಂತ ರಾಸುಗಳನ್ನು ಚರ್ಮಗಂಟು ರೋಗ ಬಾಧಿಸಿದ್ದು, ಇದು ಕೂಡ ಹಾಲು ಉತ್ಪಾದನೆ ಮೇಲೆ ಪರಿಣಾಮಬೀರಿದೆ.

ಹಾಲಿನ ಉತ್ಪಾದನೆ ಕಡಿಮೆಯಾಗಿರುವುದರಿಂದ ರೈತರಿಗೆ ಹಿಂದಿನಷ್ಟು ಆದಾಯ ಬರುತ್ತಿಲ್ಲ.

‘ರಾಸುಗಳಿಗೆ ಪಶು ಆಹಾರ, ಹಸಿಮೇವು ಒದಗಿಸಲು ಹೆಚ್ಚು ಖರ್ಚು ಮಾಡಬೇಕಿದೆ. ಇದರ ಜೊತೆಗೆ ಪಶು ಆಹಾರದ ಬೆಲೆಯೂ ಹೆಚ್ಚಾಗುತ್ತಿದ್ದು, ಹೈನುಗಾರರ ಆತಂಕ ಹೆಚ್ಚಿಸಿದೆ. ಮೇವಿನ ಬೆಲೆ ದುಬಾರಿಯಾಗಿದ್ದು. ಹಸಿ ಮೇವು ನೀಡದಿದ್ದರೆ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ’ ಎನ್ನುವುದು ರೈತರ ಅಳಲು.

'ಪ್ರತಿನಿತ್ಯ 20 ಲೀಟರ್ ಹಾಲು ಕರೆಯುವ ಹಸುವಿನಿಂದ ₹600 ಸಂಪಾದನೆ ಆಗುತ್ತದೆ. ಇದರಲ್ಲಿ ಖರ್ಚು ಕಳೆದು ₹250 ಉಳಿಯುತ್ತದೆ. ಲಾಭದ ಪ್ರಮಾಣ ಏರಿಕೆ ಆಗುತ್ತಿಲ್ಲ. ಇದರಲ್ಲಿ ಕುಟುಂಬದ ನಿರ್ವಹಣೆ ಮಾಡಬೇಕಿದೆ’ ಎನ್ನುತ್ತಾರೆ ಮಲಾರಪಾಳ್ಯದ ರೈತ ಮಹಿಳೆ ಸುಧಾ ಚಂದ್ರಶೇಖರ್‌.

'ಹಾಲು ಉತ್ಪಾದನೆ ಕಡಿಮೆಯಾಗಿದೆ. ಪ್ರತಿದಿನ 420 ಲೀಟರ್ ಪೂರೈಕೆಯಾಗುತ್ತಿತ್ತು. ಈಗ 380 ಲೀಟರ್‌ಗೆ ಕುಸಿದಿದೆ. ಸಮೃದ್ಧ ಮೇವಿನ ಕೊರತೆ ಸಾಕಣೆದಾರರನ್ನು ಕಾಡಿದೆ’ ಎಂದು ಕೆಸ್ತೂರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

3 ಲಕ್ಷ ಲೀಟರ್ ಸಂಗ್ರಹಿಸುವ ಗುರಿ: ‘ಜಿಲ್ಲೆಯಲ್ಲಿ ಈವರೆಗೆ ಒಂದು ದಿನದಲ್ಲಿ ಗರಿಷ್ಠ ಎಂದರೆ 3.11 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿದೆ. ಪ್ರತಿ ದಿನ ಸರಾಸರಿ 3 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಬೇಕು ಎಂಬುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ರಾಜಶೇಖರಮೂರ್ತಿ ಹೇಳಿದರು.

ಪ್ಯಾಕೆಟ್‌ ಹಾಲು, ಮೊಸರಿಗೆ ಬೇಡಿಕೆ

ಚಾಮುಲ್‌ ಉತ್ಪಾದಿಸುವ ಪ್ಯಾಕೆಟ್‌ ಹಾಲು, ಮೊಸರಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ದಿನ 25 ಸಾವಿರ ಲೀಟರ್‌ಗಳಷ್ಟು ಹೆಚ್ಚು ಮಾರಾಟವಾಗುತ್ತಿದೆ.

ಕಳೆದ ವರ್ಷ ಈ ಅವಧಿಯಲ್ಲಿ ಹಾಲು ಮತ್ತು ಮೊಸರು ಸೇರಿ 55 ಸಾವಿರ ಲೀಟರ್‌ಗಳಷ್ಟು ಪ್ರತಿ ದಿನ ಮಾರಾಟವಾಗುತ್ತಿತ್ತು. ಈ ವರ್ಷ ಇದು 75 ಸಾವಿರ ಲೀಟರ್‌ಗೆ ಏರಿದೆ. ಪ್ರತಿ ದಿನ 56 ಸಾವಿರ ಲೀಟರ್‌ ಪ್ಯಾಕೆಟ್‌ ಹಾಲಿಗೆ ಬೇಡಿಕೆ ಇದೆ. 19 ಸಾವಿರ ಲೀಟರ್‌ ಮೊಸರು ಮಾರಾಟವಾಗುತ್ತಿದೆ. ಬೇಸಿಗೆಯಾಗಿರುವುದರಿಂದ 3000 ಲೀಟರ್‌ ಮಸಾಲ ಮಜ್ಜಿಗೆಗೆ ಬೇಡಿಕೆ ಇದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ರಾಜಶೇಖರಮೂರ್ತಿ ಹೇಳಿದರು.

***

ಬೇಸಿಗೆಯಲ್ಲಿ ದಿನದ ಹಾಲಿನ ಪೂರೈಕೆ 2.10 ಲಕ್ಷ ಲೀಟರ್‌ಗೆ ಕುಸಿದಿದೆ. ಒಂದೆರಡು ಮಳೆ ಸುರಿದರೆ ಹಾಲು ಪೂರೈಕೆ ಮೊದಲಿನ ಸ್ಥಿತಿಗೆ ಬರಲಿದೆ
- ವೈ,ಸಿ.ನಾಗೇಂದ್ರ, ಚಾಮುಲ್ ಅಧ್ಯಕ್ಷ

***

ರಾಜ್ಯದಾದ್ಯಂತ ಹಾಲು ಉತ್ಪಾದನೆ ಕಡಿಮೆಯಾಗಿರುವುದು ನಿಜ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ನಮ್ಮಲ್ಲಿ ಉತ್ಪಾದನೆಯಲ್ಲಿ ಹೆಚ್ಚು ಕುಸಿತವಾಗಿಲ್ಲ.

- ಎಂ.ರಾಜಶೇಖರಮೂರ್ತಿ, ಚಾಮುಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT