ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಮೂಲಸೌಕರ್ಯ ಕಲ್ಪಿಸುವ ಭರವಸೆ

ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಚಿವ ಕೆ.ಜೆ. ಜಾರ್ಜ್‌ ಭೇಟಿ
Last Updated 23 ಜುಲೈ 2018, 14:15 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಬದನಗುಪ್ಪೆ ಮತ್ತು ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕಲ್ಪಿಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಅವರು ಸೋಮವಾರ ಇಲ್ಲಿ ಹೇಳಿದರು.

ಕೈಗಾರಿಗಾ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಅಧಿಕಾರಿಗಳು ಹಾಗೂ ಉದ್ಯಮಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಸುದ್ದಿಗೋಷ್ಠಿ ನಡೆಸಿದರು.

‘1,460 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಇಲ್ಲಿ ಸುಸಜ್ಜಿತ ಪ್ರದೇಶವನ್ನು ನಿರ್ಮಿಸಲಾಗಿದೆ. ಬಹುತೇಕ ಎಲ್ಲ ಮೂಲಸೌಕರ್ಯಗಳು ಈಗ ಇವೆ. ನೀರು ಮತ್ತು ವಿದ್ಯುತ್‌ ವ್ಯವಸ್ಥೆ ತಕ್ಷಣಕ್ಕೆ ಆಗಬೇಕಿದೆ’ ಎಂದರು.

‘66/11 ಕೆವಿಎ ಸಾಮರ್ಥ್ಯದ ವಿದ್ಯುತ್‌ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು, ಎರಡ್ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಂಜನಗೂಡಿನಲ್ಲಿ ಕಬಿನಿಯಿಂದ ನೀರೆತ್ತುವ ಸ್ಥಳಕ್ಕೆ ಸಂಬಂಧಿಸಿದಂತೆ ಸಣ್ಣ ಸಮಸ್ಯೆ ಇದ್ದು, ಜಾಕ್‌ವೆಲ್‌ ನಿರ್ಮಾಣವಾಗಲಿರುವ ಸ್ಥಳದ ಭೂಮಾಲೀಕರಿಗೆ₹ 75 ಲಕ್ಷ ಪರಿಹಾರ ನೀಡಬೇಕಾಗಿದೆ. ಅದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೈಪ್‌ಲೈನ್‌ ಹಾದು ಹೋಗುವುದರಿಂದ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದಕ್ಕೆ ಟೆಂಡರ್‌ ಕರೆದು ಕಾಮಗಾರಿ ನಡೆಸಬೇಕಾಗಿದೆ. ಮುಖ್ಯ ಎಂಜಿನಿಯರ್‌ ಜೊತೆ ಮಾತನಾಡಿದ್ದೇನೆ. ಅವರು ಶೀಘ್ರದಲ್ಲಿ ಟೆಂಡರ್‌ ಕರೆಯಲಿದ್ದಾರೆ’ ಎಂದು ಹೇಳಿದರು.

ತುರ್ತಾಗಿ ನಾಲ್ಕು ಉದ್ದಿಮೆಗಳು ಬರಬೇಕು: ‘ಕೈಗಾರಿಕೆ ಸ್ಥಾಪನೆಗೆ ಬೇಕಾದ ಎಲ್ಲ ವ್ಯವಸ್ಥೆಯೂ ಇಲ್ಲಿದೆ. ಟೇಕ್‌ ಆಫ್‌ ಆಗಬೇಕಿದೆ. ಈಗಾಗಲೇ ಕೆಲವು ಉದ್ಯಮಿಗಳು ಇಲ್ಲಿ ಕೈಗಾರಿಕೆ ಆರಂಭಿಸಲು ಆಸಕ್ತಿ ತೋರಿದ್ದಾರೆ. ತುರ್ತಾಗಿ ಮೂರು ನಾಲ್ಕು ಉದ್ದಿಮೆಗಳು ಬಂದರೆ, ನಂತರ ಉಳಿದವುಗಳು ಬರುತ್ತವೆ’ ಎಂದು ಅವರು ಹೇಳಿದರು.

‘ಜಿಲ್ಲೆಯಲ್ಲಿ ಉದ್ಯಮದ ಅಭಿವೃದ್ಧಿ ಬಗ್ಗೆ ನಾವು ಬದ್ಧರಾಗಿದ್ದೇವೆ. ಬೆಂಗಳೂರು ಬಿಟ್ಟು ಹೊರಗಡೆ ಉದ್ದಿಮೆಗಳು ಬೆಳೆಯಬೇಕು ಎಂಬುದು ಸರ್ಕಾರ‌‌ದ ನೀತಿ. ಈಗಲೇ ಇಲ್ಲಿ ಘಟಕ ಸ್ಥಾಪಿಸುವ ಉದ್ದಿಮೆಗಳಿಗೆ ಬೋರ್‌ವೆಲ್‌ ಮೂಲಕ ನೀರು ಪೂರೈಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪರಿಸರಕ್ಕೆ ಹಾನಿ–ಅವಕಾಶ ಇಲ್ಲ: ಪರಿಸರಕ್ಕೆ ಧಕ್ಕೆ ಮಾಡುವ ಕೈಗಾರಿಕೆಗಳಿಗೆ ಅವಕಾಶ ಇಲ್ಲ. ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಕೈಗಾರಿಕೆಗಳಿಗಾಗಿ ಕಾಡು ಕಡಿಯುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

‘ಜಿಲ್ಲೆಯಲ್ಲಿ ಲಭ್ಯವಿರುವ ಕರಿ ಗ್ರಾನೈಟ್‌ಗೆ ತುಂಬಾ ಬೇಡಿಕೆ ಇದೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ಕೈಗಾರಿಕಾ ಘಟಕಗಳನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಲು ಅವಕಾಶವಿದೆ. ಜತೆಗೆ ಫುಡ್ ಪಾರ್ಕ್ ಸ್ಥಾಪನೆಯಿಂದಲೂ ಹೆಚ್ಚಿನ ಉದ್ಯಮಿಗಳನ್ನು ಆಕರ್ಷಿಸಬಹುದು. ಅಲ್ಲದೆ ಅರಿಸಿನ ಬೆಳೆಯೂ ಜಿಲ್ಲೆಯಲ್ಲಿ ಪ್ರಮುಖವಾಗಿ ಇರುವುದರಿಂದ ಸಂಸ್ಕರಣೆಯಂತಹ ಘಟಕಗಳನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸ್ಥಾಪಿಸಬಹುದು. ಈ ಎಲ್ಲ ಅವಶ್ಯಕತೆಗಳಿಗೆ ಪೂರಕವಾಗಿ ಸ್ಥಳೀಯವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತ್ಯೇಕ ಸಭೆ ನಡೆಸಬೇಕು’ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಮಾತನಾಡಿದಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗ ಶೆಟ್ಟಿ, ‘ಕೈಗಾರಿಕಾ ಪ್ರದೇಶಕ್ಕೆ ನೀರು ಮತ್ತು ವಿದ್ಯುತ್‌ ಪೂರೈಕೆಗೆ ಶಾಶ್ವತ ವ್ಯವಸ್ಥೆ ಆಗಬೇಕು. ಇದು ಅತ್ಯಂತ ತುರ್ತಾಗಿ ಆಗಬೇಕಾದ ಕೆಲಸ’ ಎಂದರು.

ಶಾಸಕ ಆರ್. ನರೇಂದ್ರ, ವಿಧಾನಪರಿಷತ್‌ ಸದಸ್ಯಆರ್. ಧರ್ಮಸೇನ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಶಿವಮ್ಮ ಕೃಷ್ಣ, ನಗರಸಭೆ ಅಧ್ಯಕ್ಷೆ ಶೋಭಾ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಎಂ.ಎನ್. ಮರುಳೇಶ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.

‘ಕಾಟಾಚಾರಕ್ಕೆ ಬಂದಿಲ್ಲ; ಗಂಭೀರವಾಗಿದ್ದೇನೆ’

ಇದಕ್ಕೂ ಮುನ್ನ ಅವರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದರು. ಕೇವಲ ಆರು ನಿಮಿಷಗಳಲ್ಲಿ ಅವರು ಅಲ್ಲಿಂದ ತೆರಳಿದರು. ಕಾರಿನಿಂದ ಇಳಿಯುತ್ತಿದ್ದಂತೆಯೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೂಗುಚ್ಛ ನೀಡಿ ಅವರನ್ನು ಸ್ವಾಗತಿಸಿದರು. ಅಲ್ಲೇ ಇದ್ದ ಸ್ಥಳೀಯರ ಅಹವಾಲು ಸ್ವೀಕರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದರು.

ಈ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಕಾಟಾಚಾರಕ್ಕಾಗಿ ಬಂದಿಲ್ಲ. ಆ ಪ್ರದೇಶದಲ್ಲಿರುವ ಮೂಲಸೌಕರ್ಯ ಕೊರತೆಗಳ ಬಗ್ಗೆ ಎಲ್ಲ ಮಾಹಿತಿ ನನ್ನ ಬಳಿ ಇದೆ. ಈ ವಿಚಾರದಲ್ಲಿ ನಾನು ಗಂಭೀರವಾಗಿದ್ದೇನೆ. ಇಲ್ಲಿಗೆ ಮಾತ್ರ ಅಲ್ಲ, ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಎಕರೆಗೆ₹ 20 ಲಕ್ಷ ಪರಿಹಾರ

ಸಭೆಯಲ್ಲಿ ಮಾತನಾಡಿದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್‌, ‘ರೈತರಿಂದ ಪಡೆದ ಜಮೀನಿಗೆ ಎಕರೆಗೆ ₹ 20 ಲಕ್ಷ ಪರಿಹಾರ ನೀಡಿದ್ದೇವೆ. ಅಲ್ಲಿಗೆ ಮೂಲಸೌಲಭ್ಯ ಕಲ್ಪಿಸಲು ₹ 35 ಲಕ್ಷ ಖರ್ಚಾಗಲಿದೆ. ಹಾಗಾಗಿ, ಒಂದು ಎಕರೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ₹ 50 ಲಕ್ಷ ಬೇಕು’ ಎಂದು ಹೇಳಿದರು.

‘ಸರಳ ವ್ಯವಸ್ಥೆ ಬೇಕು’

ಸಭೆಯಲ್ಲಿ ಮಾತನಾಡಿದ ಪಂಜಾಬ್‌ ಉದ್ಯಮಿ ಮಹೇಶ್‌ ಭಾರದ್ವಾಜ್‌, ‘ಇಲ್ಲಿ ಉದ್ದಿಮೆ ಸ್ಥಾಪಿಸಲು ನಾವು ಉತ್ಸುಕರಾಗಿದ್ದೇವೆ. ಆದರೆ, ಸರ್ಕಾರ ಉದ್ಯಮ ಸ್ಥಾಪನೆಗೆ, ಬೇರೆ ರಾಜ್ಯಗಳಲ್ಲಿ ಇರುವಂತೆಇನ್ನಷ್ಟು ಸರಳ ನಿಯಮಗಳನ್ನು ಜಾರಿಗೆ ತರಬೇಕು. ಏಕಗವಾಕ್ಷಿ ವ್ಯವಸ್ಥೆ ಇದ್ದರೂ, ಅನುಮತಿಯಾಗಿ ಎಲ್ಲ ಇಲಾಖೆಗಳು ಉದ್ಯಮಿಗಳು ತಮ್ಮ ಬಳಿಗೆ ಬರಬೇಕು ಎಂದು ಬಯಸುತ್ತೇವೆ. ಎಲ್ಲ ಇಲಾಖೆಗಳನ್ನು ಒಂದೇ ಕಡೆ ಸಂಪರ್ಕಿಸುವ ವ್ಯವಸ್ಥೆ ಬಂದರೆ ಉದ್ಯಮಿಗಳಿಗೆ ಸುಲಭ’ ಎಂದು ಹೇಳಿದರು.

ಸ್ಥಳೀಯರಿಗೇ ಉದ್ಯೋಗ ನೀಡಬೇಕು ಎಂ‌ದು ನಮ್ಮ ಕೈಗಾರಿಕಾ ನೀತಿ ಹೇಳುತ್ತದೆ. ಹಾಗಾಗಿ ಅದಕ್ಕೆ ಆದ್ಯತೆ ನೀಡುತ್ತೇವೆ
–ಕೆ.ಜೆ. ಜಾರ್ಜ್‌, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT