ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ನರೇಗಾ: ಶೇ 55.01ರಷ್ಟು ಪ್ರಗತಿ, ಜಿಲ್ಲೆಗೆ 6ನೇ ರ‍್ಯಾಂಕ್‌

ಜಲ ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ, ₹3.08 ಕೋಟಿ ಸಂಬಳ ಪಾವತಿ
Last Updated 3 ಮೇ 2020, 1:50 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ‌ (ನರೇಗಾ) ಪ್ರಗತಿಯಲ್ಲಿ ಗಡಿ ಜಿಲ್ಲೆಯು ಆರನೇ ರ‍್ಯಾಂಕ್‌ ಗಳಿಸಿದೆ. 2020–21ನೇ ಸಾಲಿನ ಮೊದಲ ತಿಂಗಳಲ್ಲಿ ಜಿಲ್ಲೆಯಲ್ಲಿ 1,09,952 ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದು, ಶೇ 55.01ರಷ್ಟು ಪ್ರಗತಿ ಸಾಧಿಸಿದೆ.

ಶೇ 145.32ರಷ್ಟು ಪ್ರತಿ ಸಾಧಿಸಿರುವ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ (ಶೇ 130.31) ಎರಡನೇ ಸ್ಥಾನದಲ್ಲಿದೆ. ಮೈಸೂರು (ಶೇ 87.43) ಮೂರು, ಶಿವಮೊಗ್ಗ (ಶೇ 72.56) ನಾಲ್ಕು ಮತ್ತು ಚಿಕ್ಕಬಳ್ಳಾಪುರ (ಶೇ 72.23) ಐದನೇ ಸ್ಥಾನದಲ್ಲಿವೆ.

ಕಾಮಗಾರಿ ಪೂರ್ಣಗೊಂಡ ಪ್ರಮಾಣ, ಸಂಬಳ ಪಾವತಿ, ಮಾನದ ದಿನಗಳ ಸೃಷ್ಟಿ ಹಾಗೂ ಕೂಲಿ ಸಾಮಗ್ರಿ ಅನುಪಾತ ಎಂಬನಾಲ್ಕು ಮಾನದಂಡಗಳ ಅಡಿಯಲ್ಲಿ ಈ ರ‍್ಯಾಂಕಿಂಗ್‌ ನೀಡಲಾಗುತ್ತದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2020-21ರ ಅವಧಿಗೆ‌ ಜಿಲ್ಲೆಯಲ್ಲಿ ನರೇಗಾ ಅಡಿ ₹32.86 ಲಕ್ಷ ಮಾನವ ದಿನಗಳಷ್ಟು ಕಾಮಗಾರಿ ನಡೆಸಲು ಗುರಿ ನೀಡಿದೆ. ಏಪ್ರಿಲ್ ತಿಂಗಳಿಗೆ 1.91 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿತ್ತು. ತಿಂಗಳ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯು 1,01,957 ಮಾನವ ದಿನಗಳನ್ನು ಸೃಷ್ಟಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನರೇಗಾ ಅಡಿಯಲ್ಲಿ ಹೆಚ್ಚು ಹೆಚ್ಚು ಕೆಲಸ ನೀಡುವಂತೆ ಕೇಂದ್ರ ಸರ್ಕಾರವೂ ಸೂಚಿಸಿತ್ತು.

‘ಗರಿಷ್ಠ ಪ್ರಮಾಣದ ಮಾನವ ದಿನಗಳನ್ನು ಸೃಷ್ಟಿಸಲು ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಪ್ರತಿದಿನ ಭೇಟಿಕೊಟ್ಟು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ 11,386 ಕುಟುಂಬಗಳು ಕೆಲಸಕ್ಕೆ ಬೇಡಿಕೆ ಸಲ್ಲಿಸಿದ್ದವು. 10,799 ಕುಟುಂಬಗಳಿಗೆ ಕೆಲಸ ನೀಡಲಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹೆಚ್ಚು ಪ್ರಗತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.

ಜಲ ಸಂರಕ್ಷಣೆ ಕಾಮಗಾರಿಗೆ ಒತ್ತು: ‘ಸದ್ಯ ಜಲ ಸಂರಕ್ಷಣೆಗೆ ಸಂಬಂಧಿಸಿದ ಕೆಲಸಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಈ ಕಾಮಗಾರಿಗಳಲ್ಲಿ ಹೆಚ್ಚು ಜನರಿಗೆ ಕೆಲಸ ಕೊಡುವುದಕ್ಕೆ ಸಾಧ್ಯವಾಗುತ್ತದೆ. ಚರಂಡಿ, ರಸ್ತೆ ಮುಂತಾದ ಕೆಲಸಗಳನ್ನು ನಂತರ ಕೈಗೆತ್ತಿಕೊಳ್ಳಲಾಗುವುದು’ ಎಂದು ಸಿಇಒ ಹೇಳಿದರು.

ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಕೆರೆಗಳ ಹೂಳು ತೆಗೆಯುವಿಕೆ, ಏರಿ ನಿರ್ಮಾಣ, ಕಂದಕ- ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಮಳೆ ನೀರು ಸಂಗ್ರಹ ಕಾಮಗಾರಿ, ಕೊಳವೆ ಬಾವಿಗೆ ಜಲ ಮರುಪೂರಣ ಗುಂಡಿ, ಸಸಿ ನೆಡುವಿಕೆ ಕಾಮಗಾರಿಗಳು ಬಿರುಸಿನಿಂದ ನಡೆಯುತ್ತಿವೆ.

ಕೂಲಿ ಬೇಡಿಕೆಗೆ ‘ಕಾಯಕ ಮಿತ್ರ’ ಆ್ಯಪ್

ನರೇಗಾ ಯೋಜನೆಯ ಅಡಿ ಕೂಲಿ ಬೇಕು ಎಂದು ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ‘ಕಾಯಕ ಮಿತ್ರ’ ಎಂಬ ಆ್ಯಪ್ ಅನ್ನು ಹೊರತಂದಿದೆ.

ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಹಾಗೂ ಇಲಾಖೆಯ ವೆಬ್ ಸೈಟ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ವತಃ ತಮ್ಮ ಬಳಿ ಸ್ಮಾರ್ಟ್‌ಫೋನ್‌ ಇಲ್ಲದಿದ್ದರೂ ಬೇರೆಯವರ ನೆರವಿನಿಂದ ಬೇಡಿಕೆ ಸಲ್ಲಿಸುವುದಕ್ಕೆ ಅವಕಾಶ ಇದೆ.

* ಲಾಕ್‌ಡೌನ್ ಅವಧಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸದ ಅವಶ್ಯಕತೆ ಇದ್ದು, ಹೆಚ್ಚು ಹೆಚ್ಚು ಕೆಲಸ ಮಾಡಿಸಲು ಪ್ರಯತ್ನಿಸಲಾಗುತ್ತಿದೆ.

- ಹರ್ಷಲ್ ಭೋಯರ್ ನಾರಾಯಣ ರಾವ್, ಜಿಲ್ಲಾ ಪಂಚಾಯಿತಿ ಸಿಇಒ

ಅಂಕಿ ಅಂಶ

1.91 ಲಕ್ಷ

ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಗೆ ಕೊಟ್ಟ ಮಾನವ ದಿನಗಳ ಗುರಿ

1.019 ಲಕ್ಷ

ಸೃಷ್ಟಿಯಾಗಿರುವ ಮಾನವ ದಿನಗಳು

₹3.08 ಕೋಟಿ

ಕೂಲಿ ಕಾರ್ಮಿಕರಿಗೆ ಪಾವತಿ ಮಾಡಿದ ವೇತನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT