ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ತಂಗುದಾಣದಲ್ಲಿ ನವಜಾತ ಶಿಶು ಇಟ್ಟು ಹೋದ ತಾಯಿ

ಕೊಳ್ಳೇಗಾಲ: ಪೊಲೀಸರ ಮಧ್ಯಪ್ರವೇಶ: ಮಗು ಸಾಕುವ ಭರವಸೆ ನೀಡಿದ ತಾಯಿ
Last Updated 4 ಜುಲೈ 2022, 12:29 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಹೆತ್ತ ತಾಯಿಯೇ ನವಜಾತ ಗಂಡು ಶಿಶುವನ್ನು ಬಸ್‌ ತಂಗುದಾಣದಲ್ಲಿ ಇಟ್ಟು ಹೋದ ಘಟನೆ ತಾಲ್ಲೂಕಿನ ಮತ್ತೀಪುರ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಪೊಲೀಸರ ಮಧ್ಯಪ್ರವೇಶದ ಬಳಿಕ, ತಾಯಿಯು ಮಗುವನ್ನು ಸಾಕಲು ಒಪ್ಪಿಕೊಂಡರು. ತಾಯಿ ಹಾಗೂ ಮಗುವಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಇಬ್ಬರೂ ಆರೋಗ್ಯದಿಂದ ಇದ್ದಾರೆ.

ಮತ್ತೀಪುರ ಗ್ರಾಮದ ಮಂಗಳಮ್ಮ (27) ಅವರುಸೋಮವಾರಮುಂಜಾನೆ 4 ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ತನಗೆ ಮಗು ಬೇಡ ಎಂದು ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗ್ರಾಮದ ಬಸ್‌ ತಂಗುದಾಣದಲ್ಲಿ ಇಟ್ಟಿದ್ದರು.

ಬೆಳಿಗ್ಗೆ 5 ಗಂಟೆ ಸುಮಾರಿಗೆ ತಂಗುದಾಣದಲ್ಲಿ ಮಗು ಅಳುತ್ತಿದ್ದುದನ್ನು ಗಮನಿಸಿದ ಕೆಲವು ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ಮಾಡುತ್ತಿದ್ದಾಗ, ಮಂಗಳಮ್ಮ ಬಂದು, ‘ಇದು ನನ್ನ ಮಗು’ ಎಂದು ಹೇಳಿದರು.

ತಾಯಿ ಹೇಳಿದ್ದೇನು?: ‘10 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೆ. ಈ ಸಂದರ್ಭದಲ್ಲಿ ಒಬ್ಬರ ಪರಿಚಯವಾಗಿ ಸ್ನೇಹ ಬೆಳೆಯಿತು. ನಂತರ ಅವರನ್ನು ಮದುವೆಯಾಗಿದ್ದೆ. ಮದುವೆಯಾದ ಕೆಲವು ದಿನಗಳ ನಂತರ ಅವರು ನನ್ನನ್ನು ಬಿಟ್ಟಿ ಹೋದರು. ಸೋಮವಾರ ಮುಂಜಾನೆ ನನಗೆ ಸಹಜ ಹೆರಿಗೆಯಾಗಿದೆ. ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂದು ಶಿಶುವನ್ನು ಬಸ್‌ ತಂಗುದಾಣದಲ್ಲಿ ಇಟ್ಟು ಬಂದೆ’ ಎಂದು ಮಂಗಳಮ್ಮ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ.

ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ್, ಮಂಗಳಮ್ಮ ಅವರಿಗೆ ಬುದ್ಧಿವಾದ ಹೇಳಿ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆ ತಂದು ತಾಯಿ ಮತ್ತು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.ಬಳಿಕ ಮಂಗಳಮ್ಮ ಅವರು ‘ನಾನೇ ಮಗುವನ್ನು ನೋಡಿಕೊಳ್ಳೂತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ಘಟನೆ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT