ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಅನುಮಾನ ಹುಟ್ಟಿಸಿದೆ ಇಬ್ಬರು ಬಾಲಕಿಯರ ಸಾವು

ಶಿರಗೂಡು ಲಂಬಾಣಿ ತಾಂಡದಲ್ಲಿ ಘಟನೆ, ಆಹಾರ ಸೇವಿಸಿ ರಾತ್ರಿ ಮಲಗಿದ್ದ ಹೆಣ್ಣುಮಕ್ಕಳು
Last Updated 14 ಫೆಬ್ರುವರಿ 2020, 15:25 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಶಿರಗೂಡು ಲಂಬಾಣಿ ತಾಂಡದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಲಂಬಾಣಿ ತಾಂಡದ ಬಾಲಾಜಿ ನಾಯ್ಕ ಎಂಬುವವರ ಮಕ್ಕಳಾದ ಕೀರ್ತಿ (11), ಲಕ್ಷ್ಮಿ (6) ಮೃತಪಟ್ಟ ಬಾಲಕಿಯರು.

ಗುರುವಾರ ರಾತ್ರಿ ಪೋಷಕರೊಂದಿಗೆ ಊಟ ಮಾಡಿ ಮಲಗಿದ ನಾಲ್ವರು ಮಕ್ಕಳ ಪೈಕಿ ಇಬ್ಬರು ಮೃತಪಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಬಾಲಾಜಿ ನಾಯ್ಕ ಐವರಿಗೆ ಐದು ಮಕ್ಕಳಿದ್ದು, ಈ ಪೈಕಿ ನಾಲ್ವರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ. ದೊಡ್ಡ ಮಗಳು ಹನೂರಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದಾಳೆ.

‘ಗುರುವಾರ ರಾತ್ರಿ ನಮ್ಮ ಅಣ್ಣನ ಮನೆಯಲ್ಲಿ ಚಿಕನ್ ಸಾಂಬರ್ ಊಟವನ್ನು ಕುಟುಂಬದ ಎಲ್ಲ ಸದಸ್ಯರು ಸೇವಿಸಿ ಮಲಗಿದ್ದೆವು.ಮಧ್ಯೆ ರಾತ್ರಿ ವೇಳೆ ಒಬ್ಬಳು ಉಸಿರಾಟವುದಕ್ಕೆ ಕಷ್ಟವಾಗುತ್ತಿದೆ ಎಂದು ಹೇಳಿದಾಗ ನೀರು ಕುಡಿಸಿದೆವು. ಬಹಿರ್ದೆಸೆಗೆ ಹೋಗುವುದಕ್ಕಾಗಿ ಪತ್ನಿ ಜೊತೆ ಹೋಗುತ್ತಿದ್ದಾಗ ಕುಸಿದು ಬಿದ್ದಳು. ಹನೂರು ಆಸ್ಪತ್ರೆಗೆ ಕರೆ ತರುವ ವೇಳೆ ಮೃತಪಟ್ಟಳು. ವಾಪಸ್ ಮನೆಗೆ ಬರುವಾಗ ಮತ್ತೊಬ್ಬಳೂ ಸುಸ್ತಾಗಿ ಬಿದ್ದಿದ್ದಳು. ಆಕೆಯನ್ನೂ ಆಸ್ಪತ್ರೆಗೆಕರೆದುಕೊಂಡು ಬರುವಾಗ ಮೃತಪಟ್ಟಳು’ ಎಂದು ಬಾಲಾಜಿ ನಾಯ್ಕ ಅವರು ಶವಾಗಾರದ ಬಳಿಕ ಶಾಸಕ ಆರ್‌.ನರೇಂದ್ರ ಮುಂದೆ ಗೋಳಾಡಿದರು.

ಆರು ಜನರೂ ಒಟ್ಟಿಗೆ ಊಟ ಮಾಡಿದ್ದರು. ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರ ಬಾಯಲ್ಲಿ ನೊರೆ ಕಂಡು ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಂದು ವೇಳೆ ಆಹಾರದಲ್ಲಿ ವಿಷ ಬೆರೆತಿದ್ದರೆ, ಎಲ್ಲರೂ ಅಸ್ವಸ್ಥರಾಗಬೇಕಿತ್ತು. ಆದರೆ ಇಬ್ಬರಿಗೆ ಬಿಟ್ಟು ಬೇರೆ ಯಾರ ಆರೋಗ್ಯದಲ್ಲೂ ಏರುಪೇರಾಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪ್ರಕರಣದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಹನೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ರವಿನಾಯಕ್‌ ಅವರು, ‘ಗುರುವಾರ ರಾತ್ರಿ ಊಟ ಮಾಡಿ ಮಲಗಿದ್ದ ಮಕ್ಕಳು ಮೃತಪಟ್ಟಿರುವ ಬಗ್ಗೆ ಬಗ್ಗೆ ಸಂದೇಹವಿದ್ದು, ತನಿಖೆ ನಡೆಸುವಂತೆ ಮಕ್ಕಳ ತಂದೆ ದೂರು ನೀಡಿದ್ದಾರೆ. ಶುಕ್ರವಾರ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT