ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ ನಮ್ಮ ಧ್ವನಿ: ಬೀದಿನಾಯಿ, ಜಾನುವಾರುಗಳ ಕಾಟ: ಬೇಸತ್ತ ಜನ

Last Updated 18 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ವಾರ ನಗರದ 12ನೇ ವಾರ್ಡ್‌ ವ್ಯಾಪ್ತಿಯ ಕೆ.ಪಿ.ಮೊಹಲ್ಲಾ ಪ್ರದೇಶದಲ್ಲಿ ಆಟವಾಡುತ್ತಿದ್ದ ಇಬ್ಬರು ಚಿಣ್ಣರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ತೀವ್ರ ಗಾಯಗೊಳಿಸಿದವು. ಒಂದು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಮೈಸೂರಿಗೂ ಕರೆದುಕೊಂಡು ಹೋದರು. ಅದೃಷ್ಟವಶಾತ್‌ ಇಬ್ಬರೂ ಮಕ್ಕಳಿಗೆ ಪ್ರಾಣಕ್ಕೆ ಅಪಾಯವಾಗಲಿಲ್ಲ.

ಇದು ಇತ್ತೀಚೆಗೆ ವರದಿಯಾಗಿರುವ ಒಂದು ಪ್ರಕರಣ. ತೀವ್ರತರ ಗಾಯಗಳಾಗಿದ್ದರಿಂದ ಬೆಳಕಿಗೆ ಬಂತು. ನಗರಸಭೆಯ ವ್ಯಾಪ್ತಿಯಲ್ಲಿ ಆಗಾಗ ಬೀದಿನಾಯಿಗಳು ಜನರ, ವಾಹನ ಸವಾರರ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಆದರೆ, ಪ್ರಕರಣಗಳು ವರದಿಯಾಗುತ್ತಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಗರದ ಹೃದಯ ಭಾಗ, ಬಡಾವಣೆಗಳು ಸೇರಿದಂತೆ ಎಲ್ಲ ಕಡೆ ನಾಯಿಗಳ ಗುಂಪು ಕಂಡು ಬರುತ್ತಿವೆ. ಮಾಂಸಗಳ ಅಂಗಡಿ, ಹೋಟೆಲ್‌ಗಳ ಬಳಿ ಇವು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಉಳಿದ ಮಾಂಸದ ಚೂರು, ಹೋಟೆಗಳಲ್ಲಿ ಉಳಿದ ಆಹಾರ ಸಿಗುವುದರಿಂದ ದಷ್ಟಪುಷ್ಟವಾಗಿ ಬೆಳೆದಿರುತ್ತವೆ.

ನಗರಸಭೆ ವ್ಯಾಪ್ತಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಲೆಕ್ಕ ನಿಖರವಾಗಿ ಲಭ್ಯವಿಲ್ಲ. ಸಾವಿರಕ್ಕೂ ಹೆಚ್ಚು ಇರಬಹುದು ಎಂಬುದು ಅಧಿಕಾರಿಗಳ ಅಂದಾಜು.2019ರಲ್ಲಿ ಸ್ವಲ್ಪ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಬಳಿಕ ಇಂತಹ ಪ್ರಯತ್ನ ಆಗಿಲ್ಲ.

ಇವುಗಳ ಜೊತೆಗೆ ಬಿಡಾಡಿ ಜಾನುವಾರುಗಳು ಕೂಡ ನಗರದಲ್ಲಿ ಓಡಾಡುತ್ತಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ‌. ಬೀದಿನಾಯಿಗಳು, ಹಸುಗಳು, ಕುದುರೆಗಳು, ಗೂಳಿಗಳ ಹಾವಳಿಯಿಂದಾಗಿ ಹಲವು ಅಪಘಾತಗಳೂ ಸಂಭವಿಸಿವೆ. ಆದರೂ ನಗರಸಭೆ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರು.

ಬಿ.ರಾಚಯ್ಯ ಜೋಡಿ ರಸ್ತೆ, ಡೀವಿಯೇಷನ್‌ ರಸ್ತೆ, ಗುಂಡ್ಲುಪೇಟೆ ರಸ್ತೆ, ನ್ಯಾಯಾಲಯ ರಸ್ತೆ ಸೇರಿದಂತೆ ಬಹುತೇಕ ಎಲ್ಲ ರಸ್ತೆಗಳಲ್ಲಿ ಬೀದಿ ನಾಯಿಗಳು, ಬಿಡಾಡಿ ಜಾನುವಾರುಗಳು ಕಾಣಸಿಗುತ್ತವೆ.ಭ್ರಮರಾಂಭ, ಶಂಕರಪುರ, ಹೌಸಿಂಗ್‌ ಬೋರ್ಡ್‌ ಕಾಲೊನಿ, ರಾಮಸಮುದ್ರ, ಕರಿನಂಜನಪುರ, ರೈಲ್ವೆ, ಗಾಳಿಪುರ... ಹೀಗೆ ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲೂ ಇವುಗಳ ಉಪಟಳ ಇದೆ.

ಕೆಲವು ನಾಯಿಗಳು, ಜಾನುವಾರುಗಳಿಗೆ ಮಾಲೀಕರೇ ಇಲ್ಲ. ವರ್ಷದ 364 ದಿನವೂ ಅವು ನಗರದಲ್ಲೇ ಸುತ್ತಾಡುತ್ತಿರುತ್ತವೆ. ಇನ್ನೂ ಕೆಲವುಗಳಿಗೆ ಮಾಲೀಕರಿದ್ದಾರೆ. ಅವರು ಇವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟ ಬಿಡುತ್ತಿದ್ದಾರೆ.

ನಾಯಿಗಳು, ಹಸುಗಳು ಸೇರಿದಂತೆ ಇನ್ನಿತರ ಸಾಕು ಪ್ರಾಣಿಗಳನ್ನು ಯಾವುದೇ ಕಾರಣಕ್ಕೂ ಹೊರಗಡೆ ಬಿಡಬಾರದು ಎಂದು ನಗರಸಭೆ ಮಾಧ್ಯಮಗಳಲ್ಲಿ ಪ್ರಕಟಣೆ ಕೊಟ್ಟು ಸುಮ್ಮನಾಗುತ್ತಿದೆ. ಜಾನುವಾರುಗಳನ್ನು ಹಿಡಿಯುವುದಾಗಲಿ, ಮಾಲೀಕರಿಗೆ ನೋಟಿಸ್‌ ನೀಡುವುದಾಗಲಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಲಿ ಮಾಡಿಲ್ಲ. ಇದರಿಂದಾಗಿ ನಗರದ ನಿವಾಸಿಗಳು ಹಾಗೂ ದಿನ ನಿತ್ಯದ ವ್ಯವಹಾರಕ್ಕೆ ಬರುವ ಜನರು ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕ ಪ್ರದೇಶಗಳೇ ಅಡ್ಡಗಳು: ನಾಯಿಗಳು ಹಾಗೂ ಜಾನುವಾರುಗಳು ಜನರು ಹೆಚ್ಚು ಓಡಾಡುವ ಪ್ರದೇಶಗಳನ್ನೇ ತಮ್ಮ ಅಡ್ಡಗಳನ್ನಾಗಿ ಮಾಡಿಕೊಂಡಿವೆ. ಬೆಳ್ಳಂಬೆಳಗ್ಗೆಯೇ ರಸ್ತೆ ಬದಿಯಲ್ಲಿ ಮಲಗುವುದು, ಓಡಾಡುವುದು, ಆಹಾರ ಹುಡುಕುವುದು.. ಮಾಡುತ್ತಿರುವುತ್ತವೆ. ದಿಢೀರ್‌ ಆಗಿ ರಸ್ತೆಯತ್ತ ನುಗ್ಗುತ್ತವೆ. ವಾಹನಗಳು ಸಂಚರಿಸುವಾಗಲೂ ಅಡ್ಡಾದಿಡ್ಡಿ ಓಡಾಡುತ್ತಾ ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿವೆ.

ತ್ಯಾಜ್ಯವೂ ಕಾರಣ: ನಗರದಲ್ಲಿ ತ್ಯಾಜ್ಯಗಳು ಸರಿಯಾಗಿ ವಿಲೇವಾರಿಯಾಗದೆ ಇರುವುದು ಕೂಡ ಇವುಗಳ ಹಾವಳಿಗೆ ಕಾರಣ. ಮಾಂಸದ ಅಂಗಡಿಗಳು, ಹೋಟೆಲ್‌ಗಳಲ್ಲಿ‌ಅಳಿದುಳಿದ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ನಾಯಿಗಳಿಗೆ ಇವು ಸುಲಭವಾಗಿ ಸಿಗುವುದರಿಂದ ಮಾಂಸದ ಅಂಗಡಿಗಳು, ಹೋಟೆಲ್‌ಗಳ ಮುಂದೆ ಬೀಡು ಬಿಟ್ಟಿರುತ್ತವೆ.

ಅಂಗಡಿ ಹಾಗೂ ಹೋಟೆಲ್‌ ಮಾಲೀಕರು ಉತ್ಪತ್ತಿಯಾಗುವ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂಬುದು ಜನರ ಒತ್ತಾಯ.

ಬಡಾವಣೆಗಳಲ್ಲಿ ಕಸವನ್ನು ಎಸೆಯುವ ಸ್ಥಳದಲ್ಲೂ ನಾಯಿಗಳು ಇರುತ್ತವೆ. ಓಡಾಡುವ ಜನರತ್ತ ಬೊಗಳುವುದು, ಬೆನ್ನಟ್ಟಿಕೊಂಡು ಹೋಗುವುದು, ಪರಸ್ಪರ ಜಗಳ ಆಡುತ್ತಾ ಗದ್ದಲ ಮಾಡುತ್ತಾ ನಿವಾಸಿಗಳಿಗೆ ಕಿರಿ ಕಿರಿಯನ್ನುಂಟು ಮಾಡುತ್ತವೆ. ರಸ್ತೆಯಲ್ಲಿ ಏಕಾಏಕಿ ವಾಹನಗಳಿಗೆ ಅಡ್ಡ ಬಂದು ಅಪಘಾತಕ್ಕೂ ಕಾರಣವಾಗುತ್ತಿವೆ. ಮಕ್ಕಳಿಗೆ. ಮಹಿಳೆಯರಿಗೆ ಸಂಚರಿಸುವುದು ಕಷ್ಟವಾಗುತ್ತಿವೆ.

ಬೀದಿ ನಾಯಿಗಳು ಹಾಗೂ ಬಿಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ನಗರಸಭೆ ಜಾಗೃತಿ ಮೂಡಿಸಲಿ

ಈ ವಿಚಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆಯ 12ನೇ ವಾರ್ಡ್‌ ಸದಸ್ಯ ಅಬ್ರಾರ್‌ ಅಹಮದ್‌ ಅವರು, ‘ನಾಯಿಗಳು, ಜಾನುವಾರುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದುಪೌರಾಡಳಿತ ಕಾಯ್ದೆಯಲ್ಲಿ ಬರುವ ಜವಾಬ್ದಾರಿಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಗರದ ಕೆಲವು ನಿವಾಸಿಗಳನ್ನು ಅದನ್ನು ಪಾಲನೆ ಮಾಡುತ್ತಿಲ್ಲ. ನನ್ನ ವಾರ್ಡ್‌ನಲ್ಲಿ ಇಬ್ಬರು ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ನನ್ನ ವಾರ್ಡ್‌ನಲ್ಲಿ ಮಾಂಸದ ಅಂಗಡಿಗಳು ಹೆಚ್ಚಿರುವುದರಿಂದ ಬೀದಿ ನಾಯಿಗಳ ಹಾವಳಿಯೂ ಹೆಚ್ಚು. ಮಕ್ಕಳಿಗೆ ಓಡಾಡಲು, ಆಟವಾಡಲು ತುಂಬಾ ತೊಂದರೆಯಾಗಿದೆ. ಈಗ ರಂಜಾನ್‌ ಸಮಯವಾಗಿರುವುದರಿಂದ ಬೆಳಿಗ್ಗೆ ಬೇಗ ಮಸೀದಿಗೆ ಹೋಗಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾಯಿಗಳು ದಾಳಿ ಮಾಡುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

‘ಇವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರಿಗೆ ಹಾಗೂ ಆಯುಕ್ತರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ನಾಯಿಗಳು ಅಥವಾ ಜಾನುವಾರುಗಳನ್ನು ಬಿಡಬಾರದು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು.

ಬೀದಿ ನಾಯಿ ಹಿಡಿಯಲು ಕ್ರಮ

ಈ ಹಿಂದೆ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿ‌ಕಿತ್ಸೆ ಮಾಡಲಾಗಿತ್ತು. ನಗರದಲ್ಲಿ ಒಂದೇ ಬಾರಿಗೆ ಎಲ್ಲ ಕಡೆಗಳಲ್ಲೂ ನಾಯಿಗಳನ್ನು ಹಿಡಿಯುವುದು ಕಷ್ಟ. ಹಾಗಾಗಿ, ಹಂತ ಹಂತವಾಗಿ ಅವುಗಳನ್ನು ಹಿಡಿಯಲು ಕ್ರಮ ಕೈಕೊಳ್ಳಲಾಗುವುದು. ಸಾಕು ಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡಬಾರದು ಎಂದು ಹಲವು ಬಾರಿ ಮಾಧ್ಯಮ ಪ್ರಕಟಣೆಗಳ ಮೂಲಕ ಸೂಚಿಸಲಾಗಿದೆ. ಹಾಗಿದ್ದರೂ, ಕೆಲವು ಮಾಲೀಕರು ಜಾನುವಾರುಗಳನ್ನು ಬಿಡುತ್ತಿದ್ದಾರೆ. ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಜಾನುವಾರುಗಳನ್ನು ಹೊರಗಡೆ ಬೀಡಬೇಡಿ ಜನರಲ್ಲಿ ಮತ್ತೊಮ್ಮೆ ಮನವಿ ಮಾಡುತ್ತೇನೆ. ಮತ್ತೆ ಪುನರಾವರ್ತನೆಯಾದರೆ ಅವುಗಳ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು.

ಸಿ.ಎಂ.ಆಶಾ,ನಗರಸಭೆ ಅಧ್ಯಕ್ಷೆ

––––––––

ನಾಯಿಗಳನ್ನು ಹಿಡಿಯಿರಿ

ಗಾಳಿಪುರ ಬಡಾವಣೆಯಲ್ಲಿ ಬೀದಿ ನಾಯಿಗಳಿಂದಾಗಿ ನಿವಾಸಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಮಕ್ಕಳು, ಮಹಿಳೆಯರಿಗೆ ಓಡಾಡುವುದಕ್ಕೆ ಆಗುತ್ತಿಲ್ಲ. ರಾತ್ರಿ ನಾಯಿಗಳು ಬೊಗಳಿ, ಜಗಳ ಮಾಡಿ ನಿದ್ದೆಗೂ ಭಂಗ ತರುತ್ತಿವೆ. ಅವುಗಳನ್ನು ಹಿಡಿಯಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ಜಹೀದ್‌ ಖಾನ್‌,ಗಾಳಿಪುರ ನಿವಾಸಿ

***

ಅದೃಷ್ಟವಶಾತ್‌ ಬದುಕುಳಿದೆ

ನಗರದಲ್ಲಿ ಬೀದಿ ನಾಯಿ,ಹಸುಗಳು ಹಾಗೂ ಕುದುರೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹಸುಗಳು ಏಕಾಏಕಿ ನುಗ್ಗಿ ನನಗೆ ಡಿಕ್ಕಿ ಹೊಡೆದಿದ್ದರಿಂದ ಎದೆ ಭಾಗದಲ್ಲಿ ನಾಲ್ಕು ಕಡೆ ರಕ್ತ ಹೆಪ್ಪುಗಟ್ಟಿತ್ತು. ಚಿಕಿತ್ಸೆಗಾಗಿ ₹5,000ಕ್ಕೂ ಹೆಚ್ಚು ಖರ್ಚು ಮಾಡಿದ್ದೇನೆ. ಅದೃಷ್ಟವಶಾತ್‌ ಬದುಕುಳಿದೆ. ಇವುಗಳ ನಿಯಂತ್ರಣಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕು

ಅನಂತ ಪ್ರಸಾದ್‌,ಅರ್ಚಕ

***

ಸ್ನೇಹಿತನನ್ನು ಕಳೆದುಕೊಂಡೆ

ಮೂರು ವರ್ಷಗಳ ಹಿಂದೆ ಬಿಡಾಡಿ ಕುದುರೆಗಳು ಅಡ್ಡ ಬಂದು ಸಂಭವಿಸಿದ ಅಪಘಾತದಲ್ಲಿ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಪ್ರತಿ ದಿನ ನಾಯಿಗಳು, ಜಾನುವಾರುಗಳು ಜನರಿಗೆ ನೀಡುವ ಕಾಟವನ್ನು ನೋಡುತ್ತಿದ್ದೇನೆ. ದ್ವಿಚಕ್ರವಾಹನ ಸವಾರರು, ಪಾದಚಾರಿಗಳ ಮೇಲೆ ದಾಳಿ ಮಾಡುತ್ತಿವೆ. ಎಲ್ಲ ಬಡಾವಣೆಗಳಲ್ಲೂ ನಾಯಿಗಳ ಕಾಟ ಇದೆ. ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ, ಜನರು ಪ್ರತಿ ದಿನ ಹಿಂಸೆ ಅನುಭವಿಸಬೇಕಾಗುತ್ತದೆ.

ಗೋಪಿ,ಹೋಟೆಲ್ ಮಾಲೀಕ

**

ಎಚ್ಚರ ತಪ್ಪಿದರೂ ಅಪಘಾತ ಖಚಿತ

ಬೀದಿನಾಯಿ ಹಾಗೂ ಜಾನುವಾರುಗಳು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತವೆ. ಇದರಿಂದ ಏಕಾಏಕಿ ಬ್ರೇಕ್‌ ಹಾಕಿದಾಗ ಹಿಂದಿನವರು ಡಿಕ್ಕಿ ಹೊಡೆಯುತ್ತಾರೆ. ಇಲ್ಲವೇ ನಾವೇ ಪ್ರಾಣಿಗಳಿಗೆ ಡಿಕ್ಕಿ ಹೊಡೆಯುತ್ತೇವೆ. ವಾಹನಕ್ಕೂ ಹಾನಿಯಾಗುವುದರ ಜೊತೆಗೆ ನಮಗೂ ಗಾಯವಾಗುತ್ತದೆ. ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಜಾನುವಾರುಗಳ ನಿಯಂತ್ರಣಕ್ಕೆ ಏನಾದರೂ ಮಾಡಲೇಬೇಕು.

ಅಯ್ಯನಪುರ ಮನು,ಬೈಕ್‌ ಸವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT