ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಟಿವಿ ಕ್ಯಾಮೆರಾ ಕಣ್ಗಾವಲು: ಆಗ್ರಹ

ಯಳಂದೂರು: ಅಪರಾಧ ಪ್ರಕರಣ ತಡೆಗಟ್ಟಲು ಪೊಲೀಸರಿಗೆ ಹಾಗೂ ಜನರಿಗೆ ಬೇಕಿದೆ ಸಾಧನ
Last Updated 17 ಫೆಬ್ರುವರಿ 2020, 4:45 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಜಿಲ್ಲಾ ಕೇಂದ್ರ ಚಾಮರಾಜನಗರ ಹಾಗೂ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರ ಕೊಳ್ಳೇಗಾಲದ ನಡುವೆ ಬರುವ ತಾಲ್ಲೂಕು ಕೇಂದ್ರ ಯಳಂದೂರು ಪಟ್ಟಣದಲ್ಲಿ ಜನ, ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಕಾನೂನು ಉಲ್ಲಂಘನೆ, ಅಪರಾಧ ಪ್ರಕರಣಗಳೂ ನಡೆಯುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಚಟುವಟಿಕೆಗಳ ಮೇಲೆ ನಿಗಾ ಇಡಲು ಇಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ.

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಬೈಪಾಸ್ ರಸ್ತೆಗಳು ಹಾದುಹೋಗಿದೆ. ಪಟ್ಟಣದ ನಡುವೆ ಇಕ್ಕಟ್ಟಾದ ತಿರುವು ಹಾದಿಗಳು ಮತ್ತು ಸಣ್ಣ ಸಣ್ಣ ಕಿರು ಬೀದಿಗಳು ಸಂಚಾರ ದಟ್ಟಣೆಯನ್ನು ಹೆಚ್ಚಿಸಿದೆ. ಕಾನೂನು ಉಲ್ಲಂಘನೆ, ಜನರ ಕಣ್ಣು ತಪ್ಪಿಸಿ ನಡೆಯುವ ಅಕ್ರಮ ಚಟುವಟಿಕೆಗಳು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಇತ್ತೀಚಿನ ದಿನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಪ್ರಮುಖ ಪಾತ್ರವಹಿಸುತ್ತಿವೆ. ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳ ಜಾಡನ್ನು ಹಿಡಿದು ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚಿದ ಎಷ್ಟೋ ನಿದರ್ಶನಗಳು ನಮ್ಮ ಮುಂದಿವೆ.

ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಎಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮುಂದಾಗಿಲ್ಲ. ಕೆಲವು ಅಂಗಡಿಗಳ ಮಾಲೀಕರು ಸ್ವಂತ ಹಣ ಖರ್ಚು‌ ಮಾಡಿ ತಮ್ಮ ಮಳಿಗೆಗಳಿಗೆ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಆರ್ಥಿಕ ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದು, ಯುವಕರೇ ವಂಚನೆಗೆ ಈಡಾಗುತ್ತಿದ್ದಾರೆ. ಬ್ಯಾಂಕ್‌ಗಳ ಬಳಿ ಹಣ ವಂಚಿಸುವ ಮಂದಿಯೂ ಸಕ್ರಿಯರಾಗಿದ್ದಾರೆ.

ಗಾಂಧಿವೃತ್ತ, ಕೊಳ್ಳೇಗಾಲ ರಸ್ತೆ, ಸಾರ್ವಜನಿಕ ಆಸ್ಪತ್ರೆ, ಬಿಳಿಗಿರಿರಂಗನಬೆಟ್ಟ ರಸ್ತೆ, ಬಳೇಪೇಟೆ, ಪಟ್ಟಣದ ಆರಂಭ ಮತ್ತು ಅಂತ್ಯದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಪಟ್ಟಣ ಪಂಚಾಯಿತಿ ಚಿಂತನೆ ನಡೆಸಿತ್ತು. ಇಂತಹ ಸ್ಥಳದಲ್ಲಿ ಎಚ್ಚರಿಕೆ ಫಲಕಗಳನ್ನು ಆರಂಭದಲ್ಲಿ ಅಳವಡಿಸಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಕಾರಣಕ್ಕೆ ಈ ಯೋಜನೆಗೆ ಗ್ರಹಣ ಹಿಡಿಯಿತು. ಹೆದ್ದಾರಿ ಅಭಿವೃದ್ಧಿಯಾಗಿ ವರ್ಷಗಳು ಉರುಳಿದರೂ ಗ್ರಹಣಕ್ಕೆ ಇನ್ನೂ ಮೋಕ್ಷ ಸಿಕ್ಕಿಲ್ಲ.

ಪಟ್ಟಣದಲ್ಲಿ ಅತಿ ವೇಗದಿಂದ ವಾಹನಗಳನ್ನು ಚಲಾಯಿಸುವವರು, ರಸ್ತೆ ನಿಯಮ ಉಲ್ಲಂಘಿಸುವವರು, ಶಾಲಾ ವಾಹನಗಳಲ್ಲಿ ಹೆಚ್ಚು ಮಕ್ಕಳನ್ನು ತುಂಬುವ ಚಾಲಕರು, ರಸ್ತೆ ನಡುವೆ ನಿಂತು ಮದ್ಯಪಾನ ಮತ್ತು ಧೂಮಪಾನ ಮಾಡುವ ಮಂದಿಯನ್ನು ಪತ್ತೆಹಚ್ಚುವುದು ಈಗ ಕಷ್ಟವಾಗಿದೆ. ಈ ನಡುವೆ, ವಯಸ್ಸಾದ ಮಂದಿಯನ್ನು ವಂಚಿಸಿ ನಗ–ನಾಣ್ಯ ಅಪಹರಿಸುವ ದುಷ್ಕೃತ್ಯಗಳೂ ನಡೆಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಖಾಸಗಿ ಅಂಗಡಿಗಳ ಸಿಸಿಟಿವಿ ಕ್ಯಾಮೆರಾ ನೆಚ್ಚಿಕೊಂಡು ತನಿಖೆ ನಡೆಸಬೇಕಾದ ಪರಿಸ್ಥಿತಿ ಇದೆ.

ಬಸ್‌ ನಿಲ್ದಾಣದಲ್ಲಿ ಜನರ ದಟ್ಟಣೆ ಹೆಚ್ಚಿರುತ್ತದೆ. ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಪ್ರವಾಸಿಗರೂ ಇಲ್ಲೇ ಇರುತ್ತಾರೆ.ಜನ ದಟ್ಟಣೆಯಲ್ಲಿ ಉಂಟಾಗುವ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಗುರುತಿಸಲು ಇಲ್ಲಿ ಸಿಸಿಟಿವಿ ಕ್ಯಾಮೆರಾ ಬೇಕು ಎಂಬುದು ಸಾರ್ವಜನಿಕರ ಹಾಗೂ ಸ್ಥಳೀಯರ ಆಗ್ರಹ.

‘ಪಟ್ಟಣ ಪಂಚಾಯಿತಿ ಎಲ್ಲ ಕಡೆ ಸಾಧ್ಯವಾಗದಿದ್ದರೂ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇವುಗಳು ಸೆರೆ ಹಿಡಿಯುವ ದೃಶ್ಯಗಳನ್ನು ಪೊಲೀಸ್‌ ಠಾಣೆಯಲ್ಲಿ ವೀಕ್ಷಿಸಲು ಸಾಧ್ಯವಾಗುವಂತೆ ಮಾಡಬೇಕು.ಇದರಿಂದ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನರು ಅನಪೇಕ್ಷಿತ ವ್ಯಕ್ತಿಗಳ ಕಿರಿಕಿರಿಯಿಂದ ಪರಿತಪಿಸುವುದನ್ನು ತಪ್ಪಿಸಬಹುದು’ ಎಂದು ಪದವಿ ವಿದ್ಯಾರ್ಥಿಗಳಾದ ಪ್ರದೀಪ್ ಮತ್ತು ನಾಗರತ್ನ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಸಿಟಿವಿ ಕ್ಯಾಮೆರಾಗಳಿಂದ ಅಪರಾಧ ಚಟುವಟಿಕೆಗಳ ಮೇಲೆ ಪೊಲೀಸರಿಗೆ ನಿಗಾ ಇಡಲು ಅನುಕೂಲವಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಹುದು ಎಂದು ಪೊಲೀಸ್‌ ಸಿಬ್ಬಂದಿ ವಾದ.

‘ಇಲಾಖೆಗೆ ಅನುಕೂಲ’

ಈ ವಿಚಾರವಾಗಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಯಳಂದೂರು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ರವಿ ಕುಮಾರ್‌ ಅವರು, ‘ಈಗಾಗಲೇ ಹೆದ್ದಾರಿ ಕೆಲಸಗಳು ಮುಗಿದಿವೆ. ಶೀಘ್ರ ಕ್ಯಾಮೆರಾ ಅಳವಡಿಸುವ ಬಗ್ಗೆ ಪಟ್ಟಣ ಪಂಚಾಯಿತಿ ಯೋಜನೆ ರೂಪಿಸಬೇಕು. ಈಗಾಗಲೇ ಅಂಗಡಿಗಳ ಮಾಲೀಕರಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿ ತಿಂಗಳು ನಡೆಯುವ ನಾಗರಿಕರ ಸಭೆಗಳಲ್ಲಿ ಪೊಲೀಸ್ ಇಲಾಖೆಯೊಡನೆ ಸಹಕಾರ ಮತ್ತು ನಿಗಾ ವ್ಯವಸ್ಥೆ ರೂಪಿಸಲು ಸಲಹೆ–ಸಹಕಾರ ನೀಡುವಂತೆ ಪಟ್ಟಣಿಗರನ್ನು ಕೋರಲಾಗಿದೆ. ಪಟ್ಟಣ ಪಂಚಾಯಿತಿ ಕ್ಯಾಮೆರಾ ಅಳವಡಿಸಲು ಸಹಕರಿಸಿದರೆ ಪೊಲೀಸ್‌ ಇಲಾಖೆಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಅನುದಾನ ಸಿಕ್ಕ ತಕ್ಷಣ ಕ್ರಮ: ನಾಗರತ್ನ

ಪಟ್ಟಣ ಪಂಚಾಯಿತಿಯು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿದೆ. ಜನ ದಟ್ಟಣೆ ಇರುವ ಪ್ರದೇಶ ಗುರುತಿಸಿ ಅಗತ್ಯ ಇರುವ ಕಡೆ ಹಂತ ಹಂತವಾಗಿ ಕ್ಯಾಮೆರಾ ಅಳವಡಿಸಲಾಗುವುದು. ಇದಕ್ಕಾಗಿ ಅನುದಾನದ ಅಗತ್ಯವಿದ್ದು, ಈ ಬಗ್ಗೆ ಉನ್ನತಾಧಿಕಾರಿಗಳು ಮತ್ತು ಪೊಲೀಸ್‌ ಮುಖ್ಯಸ್ಥರೊಡನೆ ಚರ್ಚಿಸಿ ಶೀಘ್ರ ಕ್ರಮ ವಹಿಸಲಾಗುವುದು. ಕಾನೂನು ಉಲ್ಲಂಘನೆ ತಡೆಗಟ್ಟಲು ಪಂಚಾಯಿತಿ ವತಿಯಿಂದ ಅಗತ್ಯ ಪರಿಕರ ಒದಗಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅವರು ‘ಪ್ರಜಾವಾಣಿ’‌ಗೆ ತಿಳಿಸಿದರು.

ಸುರಕ್ಷತೆಗೆ ಆದ್ಯತೆ ನೀಡಿ

ಕ್ಯಾಮೆರಾ ಅಳವಡಿಸುವುದರಿಂದ ಆಗಂತುಕರು ಸಾರ್ವಜನಿಕರಿಗೆ ತೊಂದರೆ ಕೊಡುವುದು ತಪ್ಪಲಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಮತ್ತು ರೋಗಿಗಳು ಸಿಗ್ನಲ್‌ ಬಳಿ ಸುರಕ್ಷಿತವಾಗಿ ರಸ್ತೆ ದಾಟಬಹುದು. ವಾಹನ ಅಪಘಾತ ತಪ್ಪಿಸಬಹುದು. ಹೊಸದಾಗಿ ಪಟ್ಟಣಕ್ಕೆ ಬರುವವರ ಸುಲಲಿತ ಓಡಾಟಕ್ಕೆ ಅನುಕೂಲ ಕಲ್ಪಿಸಬಹುದು.

–ಶಿವರಾಮು, ಬಳೇಪೇಟೆ ನಿವಾಸಿ

ಸಭೆಯಲ್ಲಿ ಒತ್ತಾಯ

ಅಪರಾಧಿಗಳನ್ನು ಹಿಡಿಯಲು ಮತ್ತು ಸಂಚರಿಸುವವರ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾಗಳಿಂದ. ಅಂಗಡಿ ಮುಂಗಟ್ಟುಗಳಲ್ಲಿ ಕಳ್ಳತನ ಮಾಡುವವರನ್ನು ಶೀಘ್ರ ಬಂಧಿಸಬಹುದು. ವರ್ತಕರು ನೆಮ್ಮದಿಯಿಂದ ಇರಬಹುದು. ಕ್ಯಾಮೆರಾ ಅಳವಡಿಕೆಯ ಬಗ್ಗೆ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಒತ್ತಾಯಿಸುತ್ತೇನೆ

–ಪ್ರಭಾವತಿ, ಪಟ್ಟಣ ಪಂಚಾಯಿತಿ ಸದಸ್ಯೆ

ಬಸ್‌ ನಿಲ್ದಾಣದಲ್ಲಿ ಅಳವಡಿಸಿ

ಪಟ್ಟಣದ ಬಸ್ ನಿಲ್ದಾಣದಲ್ಲಿ ಸುರಕ್ಷತೆ ಎಂಬುದು ಮರೀಚಿಕೆಯಾಗಿದೆ. ಪ್ರತಿದಿನ ನೂರಾರು ಪ್ರಯಾಣಿಕರು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಅವರ ಸುರಕ್ಷತೆಗೆ ಬೇಕಾದ ಯಾವ ಕ್ರಮವೂ ಇಲ್ಲಿಲ್ಲ. ನಿಲ್ದಾಣ ಉದ್ಘಾಟನೆಯಾಗಿ ಹಲವು ವರ್ಷಗಳು ಕಳೆದಿದ್ದರೂ ಇದುವರೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ

ಮೇಘಾ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT