ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ 209 ಬೈಪಾಸ್‌: ಚಾ.ನಗರ- ಕೊಳ್ಳೇಗಾಲ ಸಂಚಾರ ಈಗ 35 ನಿಮಿಷ!

Published 15 ಫೆಬ್ರುವರಿ 2024, 6:28 IST
Last Updated 15 ಫೆಬ್ರುವರಿ 2024, 6:28 IST
ಅಕ್ಷರ ಗಾತ್ರ

ಚಾಮರಾಜನಗರ/ಯಳಂದೂರು: ಕೊಳ್ಳೇಗಾಲದ ಸತ್ತೇಗಾಲದಿಂದ ಚಾಮರಾಜನಗರದ ಪುಣಜನೂರಿನವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯ 209ರ ಬಾಕಿ ಕಾಮಗಾರಿಗಳು ಭರದಿಂದ ಸಾಗಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಹೆದ್ದಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.   

ಬೆಂಗಳೂರು– ದಿಂಡಿಗಲ್ ನಡುವೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯನ್ನು 1,961 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಗೆ ಕೇಂದ್ರ ಸರ್ಕಾರ 2017ರಲ್ಲಿ ಅನುಮೋದನೆ ನೀಡಿತ್ತು. ಈ ಹೆದ್ದಾರಿಯು ಜಿಲ್ಲೆಯಲ್ಲಿ 67 ಕಿ.ಮೀ ದೂರ ಕ್ರಮಿಸುತ್ತದೆ. 2018ರಲ್ಲೇ ಕಾಮಗಾರಿ ಆರಂಭವಾಗಿತ್ತು. ರಸ್ತೆ ಕಾಮಗಾರಿ ಬಹುತೇಕ ಮುಗಿದಿದ್ದರೆ, ಹಲವು ಕಡೆಗಳಲ್ಲಿ ಬೈಪಾಸ್‌ ರಸ್ತೆ, ಮೇಲ್ಸೇತುವೆ ಕಾಮಗಾರಿಗಳು ಬಾಕಿ ಇದ್ದವು.

ಗುತ್ತಿಗೆ ಪಡೆದಿದ್ದ ಕಂಪನಿಯ ಮಾಲೀಕ ನಿಧನ ಹೊಂದಿದ್ದರಿಂದ ಬಾಕಿ ಕೆಲಸ ನನೆಗುದಿಗೆ ಬಿದ್ದಿತ್ತು. ಒಂದೂವರೆ ವರ್ಷದ ಹಿಂದೆ ಗುತ್ತಿಗೆಯನ್ನು ಇನ್ನೊಂದು ಕಂಪನಿ ವಹಿಸಿಕೊಂಡ ನಂತರ ಕಾಮಗಾರಿ ಪುನರಾರಂಭವಾಗಿದ್ದು, ಈಗ ಕೊನೆಯ ಹಂತಕ್ಕೆ ಬಂದು ತಲುಪಿದೆ. 

ಚಾಮರಾಜನಗರ, ಕೊಳ್ಳೇಗಾಲ, ಅಗರ–ಮಾಂಬಳ್ಳಿ, ಸಂತೇಮರಹಳ್ಳಿ ಬೈಪಾಸ್ ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿ ಇದೆ. ಯಳಂದೂರು, ಮದ್ದೂರು ಬೈಪಾಸ್‌ ಕಾಮಗಾರಿ ಮುಕ್ತಾಯವಾಗಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗರ ಮಾಂಬಳ್ಳಿ ಬೈಪಾಸ್‌ ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಸಂತೇಮರಹಳ್ಳಿ ಬೈಪಾಸ್‌ ರಸ್ತೆಯಲ್ಲಿ ಕಬಿನಿ ನಾಲೆಗೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. 

ಚಾಮರಾಜನಗರದಲ್ಲಿ ದೊಡ್ಡರಾಯಪೇಟೆ ಕ್ರಾಸ್‌ನಿಂದ ಸೋಮವಾರ ಪೇಟೆ ನಡುವಿನ ಬೈಪಾಸ್‌ ರಸ್ತೆಯಲ್ಲಿ ದೊಡ್ಡರಾಯಪೇಟೆಯಿಂದ ಗುಂಡ್ಲುಪೇಟೆ ರಸ್ತೆಯವರೆಗಿನ ಮೇಲ್ಸೇತುವೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ.  

ಅರ್ಧ ಗಂಟೆ ಪ್ರಯಾಣ: ಜಿಲ್ಲಾ ಕೇಂದ್ರದಿಂದ ಕೊಳ್ಳೇಗಾಲಕ್ಕೆ 42 ಕಿ.ಮೀ. ದೂರ ಇದೆ. ಮೊದಲು ಯಳಂದೂರು ಪಟ್ಟಣ, ಮದ್ದೂರು, ಅಗರ– ಮಾಂಬಳ್ಳಿಯಲ್ಲಿನ ಕಿರಿದಾದ ರಸ್ತೆಯಲ್ಲಿ ಹಾದು ಹೋಗಬೇಕಾಗಿತ್ತು. ಹೀಗಾಗಿ ಕೊಳ್ಳೇಗಾಲ ತಲುಪಲು ಒಂದು ಗಂಟೆ ಬೇಕಾಗಿತ್ತು. ಈಗ ಬೈ‍‍ಪಾಸ್‌ ಮೂಲಕ ಸಾಗುವುದರಿಂದ 35ರಿಂದ 40 ನಿಮಿಷಗಳಲ್ಲಿ ತಲುಪುವಂತಾಗಿದೆ. 

‘ಬಸ್, ಕಾರು ಮತ್ತು ದ್ವಿ ಚಕ್ರವಾಹನಗಲ್ಲಿ ಸಂಚರಿಸಿದರೆ ಸಮಯ ಮತ್ತು ಇಂಧನ ಉಳಿತಾಯವಾಗುತ್ತದೆ. ಇದರಿಂದ ವ್ಯಾಪಾರ-ವ್ಯವಹಾರ, ಉದ್ಯೋಗ, ಶಾಲಾ-ಕಾಲೇಜು, ಆಸ್ಪತ್ರೆಗೆ ಹೋಗುವವರಿಗೆ ಅನುಕೂಲವಾಗಲಿದೆ’ ಎಂದು ಯಳಂದೂರಿನ ನಿವೃತ್ತ ಶಿಕ್ಷಕ ನಾಗೇಂದ್ರ ಹೇಳಿದರು. 

ಇನ್ನೂ ಸುರಕ್ಷತೆ ಬೇಕು: ‘ಬೈಪಾಸ್ ರಸ್ತೆಗಳಲ್ಲಿ ಇನ್ನೂ ನಾಮ ಫಲಕ ಅಳವಡಿಸಿಲ್ಲ. ವೇಗ ನಿಯಂತ್ರಕಗಳನ್ನು (ಉಬ್ಬು) ಹಾಕಿಲ್ಲ. ಯಳಂದೂರು, ಮದ್ದೂರು, ಅಗರ ಮಾಂಬಳ್ಳಿ ಪ್ರದೇಶಗಳ ಸುತ್ತಮುತ್ತ ಹೊಲ, ಗದ್ದೆಗಳಲ್ಲಿ ಕೃಷಿಕರು ದುಡಿಯುತ್ತಿದ್ದು, ಫಸಲನ್ನು ಸಾಗಣೆ ಮಾಡಲು, ಜನ ಜಾನುವಾರು ಸುರಕ್ಷಿತವಾಗಿ ಮನೆಗೆ ತೆರಳಲು ವ್ಯವಸ್ಥೆ ಕಲ್ಪಿಸಬೇಕು. ಜಾನುವಾರುಗಳು ಹೆದ್ದಾರಿಗೆ ಏರದಂತೆ ಮಡುವ ನಿಟ್ಟಿನಲ್ಲಿ ಇನ್ನೂ ಕೆಲಸ ಆಗಬೇಕು. ರಸ್ತೆ ಬದಿಯಲ್ಲಿ ಬಸ್ ನಿಲ್ದಾಣ, ಶೌಚಾಲಯ, ನೀರು, ಬೈಬೇ  ಮತ್ತಿತರ ಕೆಲಸಗಳಿಗೂ ಒತ್ತು ನೀಡಬೇಕು’ ಎಂದು ಅಗರದ ರೈತ ವೆಂಕಟೇಶ್ ಒತ್ತಾಯಿಸಿದರು. 

ಯಳಂದೂರಿನಲ್ಲಿ ನಿರ್ಮಣವಾಗಿರುವ ಬೈಪಾಸ್‌ ರಸ್ತೆಯ ನೋಟ
ಯಳಂದೂರಿನಲ್ಲಿ ನಿರ್ಮಣವಾಗಿರುವ ಬೈಪಾಸ್‌ ರಸ್ತೆಯ ನೋಟ
2018ರಲ್ಲಿ ಆರಂಭವಾಗಿದ್ದ ಕಾಮಗಾರಿ ಕೆಲವೆಡೆ ಬೈಪಾಸ್‌ ರಸ್ತೆ ನಿರ್ಮಾಣ ಬಾಕಿ ಜಿಲ್ಲಾ ಕೇಂದ್ರಕ್ಕೆ ಹತ್ತಿರವಾದ ರೇಷ್ಮೆ ನಗರಿ
ಬೈಪಾಸ್‌ ರಸ್ತೆ ಮೇಲ್ಸೇತುವೆ ಕೆಲಸಗಳು ನಡೆಯುತ್ತಿವೆ. ಮಾರ್ಚ್‌ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿಲಾಗಿದೆ
ಸಿ.ಟಿ.ಶಿಲ್ಪಾನಾಗ್‌ ಜಿಲ್ಲಾಧಿಕಾರಿ
‘ಸುರಕ್ಷತೆಗೆ ಒತ್ತು ನೀಡಲು ಸೂಚನೆ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಹೆದ್ದಾರಿ ಬೈಪಾಸ್‌ಗಳಲ್ಲಿ ನಾಮಫಲಕಗಳನ್ನು ಅಳವಡಿಸುವುದು ಅಪಘಾತ ವಲಯಗಳನ್ನು ಗುರುತಿಸಿ ಎಚ್ಚರಿಕೆಯ ಸಂದೇಶಗಳನ್ನು ಬರೆಯುವುದು ಸೇರಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT